ನಾಗಮಂಗಲ: ‘ತಾಲ್ಲೂಕಿನ ದೇವಲಾಪುರ ಹೋಬಳಿಗೆ ಕೆಲ ಭಾಗಗಳಿಗೆ ಹೇಮಾವತಿ ನೀರು ಬರುತ್ತಿರುವುದಕ್ಕೆ ನಾನು ಕಾರಣ, ಇದರ ಹಿಂದೆ ನನ್ನ ಪರಿಶ್ರಮವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ₹2 ಕೋಟಿ ವೆಚ್ಚದಲ್ಲಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕಸ್ಥಾಪನೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡಿದರು.
‘ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಾಡಿರುವ ರಸ್ತೆಗಳಿಗೆ ಮಣ್ಣು ಹಾಕಿಸಲೂ ಬೇರೆಯವರಿಂದ ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಕೃಷಿ ಇಲಾಖೆಯು ಬಹಳ ಮುಖ್ಯವಾಗಿದ್ದು, ತಾಲ್ಲೂಕಿನಲ್ಲಿ ಇದುವರೆಗೂ ಯಾರೂ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರವನ್ನು ನಿರ್ಮಾಣ ಮಾಡಲು ಆಗಿಲ್ಲ. ಈ ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಬಹಳ ಅನುಕೂಲವಾಗಲಿದೆ. ಜೊತೆಗೆ ಹೋಬಳಿ ಮಟ್ಟದಲ್ಲಿ ಗೊಬ್ಬರ, ಬಿತ್ತನೆ ಬೀಜ, ಕೃಷಿ ಯಂತ್ರ ಸೇರಿದಂತೆ ಕೃಷಿಯ ಕುರಿತು ರೈತರು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಲು ಅವಕಾಶವಿದೆ’ ಎಂದರು.
‘ನಾಗಮಂಗಲ ತಾಲೂಕಿನಲ್ಲಿ ಕೃಷಿ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಈಗ ನಿರ್ಮಾಣ ಮಾಡಲು ಕ್ರಮವಹಿಸಿದ್ದೇನೆ. ಜಿಲ್ಲೆಯಲ್ಲಿ ಒಟ್ಟು 15 ರೈತ ಸಂಪರ್ಕ ಕೇಂದ್ರಗಳನ್ನು ನಮ್ಮ ಸರ್ಕಾರದಿಂದ ನಿರ್ಮಾಣ ಮಾಡುತ್ತಿದ್ದೇವೆ. ಜೊತೆಗೆ ರೈತರಿಗೆ ಈಗಾಗಲೇ ಬೆಳೆ ಪರಿಹಾರವನ್ನು ನೀಡಲಾಗಿದೆ. ಹಾಲಿನ ಮೇಲೆ ಸಬ್ಸಿಡಿ ನೀಡುತ್ತಿದ್ದೇವೆ. ₹5 ಲಕ್ಷದೊಳಗೆ ಸಬ್ಸಿಡಿಗೆ ಸಾಲವನ್ನು ನೀಡುತ್ತಿದೆ. ರಾಜ್ಯ ಸರ್ಕಾರ ಪ್ರತಿ ಮನೆಗೂ ಒಂದಲ್ಲ ಒಂದು ರೀತಿಯ ಅನುಕೂಲ ಮಾಡಿಕೊಟ್ಟಿದೆ’ ಎಂದು ಹೇಳಿದರು.
‘ದೇವಲಾಪುರದಲ್ಲಿ ಪೊಲೀಸ್ ಠಾಣೆ, ಸಾರ್ವಜನಿಕ ಶೌಚಾಲಯ, ನಾಡಕಚೇರಿ, ಕೆಇಬಿ ಕಚೇರಿಗಳನ್ನು ನಿರ್ಮಾಣ ಮಾಡಲು ಶೀಘ್ರವೇ ಕ್ರಮ ಕೈಗೊಳ್ಳುತ್ತೇನೆ. ಅನೇಕ ವರ್ಷಗಳಿಂದ ಶೇ 57ರಷ್ಟು ಹುದ್ದೆಗಳು ಖಾಲಿ ಇದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಲ್ಲಿ ಕೃಷಿ ಇಲಾಖೆಯಲ್ಲಿ 950ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಮಂಜೂರಾತಿ ನೀಡಲಾಗಿದೆ. ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ. ರಾಜೇಶ್, ಪಿಡಿಒ ಲವ, ಮುಖಂಡರಾದ ಅಪ್ಪಾಜಿಗೌಡ, ನರಸಿಂಹಮೂರ್ತಿ, ವೆಂಕಟೇಶ್, ಜವರೇಗೌಡ, ಪುಟ್ಟಸ್ವಾಮಿ, ಶಿವಕುಮಾರ್, ಕೃಷ್ಣಶೆಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಜಿಲ್ಲಾ ನಿರ್ದೇಶಕ ಭಾನುಪ್ರಕಾಶ್, ಕೆ.ಆರ್.ಐ.ಡಿ.ಎಲ್ ಕಾರ್ಯಪಾಲಕ ಎಂಜಿನಿಯರ್ ಜಿ.ಸೋಮಶೇಖರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೈತ್ರಾ, ಕಿರಿಯ ಎಂಜಿನಿಯರ್ ಶರತ್, ಕೃಷಿ ಇಲಾಖೆಯ ಸಹಾಯ ನಿರ್ದೇಶಕ ಹರೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.