ADVERTISEMENT

ಮಂಡ್ಯ | ಕಾವೇರಿಗೆ ತ್ಯಾಜ್ಯ ನೀರು: ಮೈಸೂರು ಡಿ.ಸಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 26 ಮೇ 2024, 15:13 IST
Last Updated 26 ಮೇ 2024, 15:13 IST

ಮಂಡ್ಯ: ಮೈಸೂರು ಮಹಾನಗರ ‌ಪಾಲಿಕೆ ವ್ಯಾಪ್ತಿಯ ತ್ಯಾಜ್ಯ ನೀರನ್ನು ಕಾವೇರಿ ನದಿಗೆ ನೇರವಾಗಿ ಹರಿಸಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕುಮಾರ ಅವರು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎನ್.ಎನ್. ಮಧು ಅವರಿಗೆ ಪತ್ರ ಬರೆದಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಾಲು ಬಳಿ ಪಂಪ್‌ಹೌಸ್‌ ನಿರ್ಮಾಣ ಮಾಡಲಾಗಿದ್ದು, ಅಲ್ಲಿಂದ ಗಂಜಾಂ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮೈಸೂರು ವ್ಯಾಪ್ತಿಯ ಕೊಳಚೆ ನೀರು ನೇರವಾಗಿ ನದಿ ಸೇರುತ್ತಿರುವ ಕಾರಣ ಶುದ್ಧ ನೀರು ಪೂರೈಕೆಗೆ ತೊಂದರೆಯಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯೂ ಆರಂಭವಾಗಿದೆ. ಹೀಗಾಗಿ ಮೈಸೂರು ವ್ಯಾಪ್ತಿಯಲ್ಲಿ ನೀರನ್ನು ಸಂಸ್ಕರಿಸದೆ ನದಿಗೆ ಹರಿಸಬಾರದು ಎಂದು ಒತ್ತಾಯಿಸಿದ್ದಾರೆ.

ಕಾವೇರಿ ನೀರಾವರಿ ನಿಗಮ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಪುರಸಭೆ ಅಧಿಕಾರಿಗಳು ಕೂಡ ಮೈಸೂರು ಪಾಲಿಕೆಗೆ ಪತ್ರ ಬರೆದು ಕೊಳಚೆ ನೀರು ಹರಿಸದಂತೆ ಮನವಿ ಮಾಡಿದ್ದಾರೆ. ಚಂದಗಾಲು ಬಳಿ ಪಾಲಿಕೆಯ ಕೊಳಚೆ ಶುದ್ಧೀಕರಣ ಘಟಕವಿದ್ದು ಅದು 30 ಎಂಎಲ್‌ಡಿ ಸಾಮರ್ಥ್ಯ ಹೊಂದಿದೆ. ಹೆಚ್ಚುವರಿಯಾದ ಕೊಳಚೆ ನೀರನ್ನು ಸಂಸ್ಕರಿಸದೆ ನದಿಗೆ ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

ನದಿ ಪರಿಸರದ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಶುದ್ಧತೆ ಕಾಪಾಡಿಕೊಳ್ಳುವ ಉದ್ದೇಶದಿಂದ ನೇರವಾಗಿ ತ್ಯಾಜ್ಯ ಹರಿಸದಂತೆ ಪಾಲಿಕೆ ಅಧಿಕಾರಿಗಳಗೆ ಸೂಚನೆ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.