ಮಂಡ್ಯ: ‘ರಾಜ್ಯ ಕಾಂಗ್ರೆಸ್ ಸರ್ಕಾರ ಸಕಾಲದಲ್ಲಿ ಅನುದಾನ ಒದಗಿಸಿದ ಹಿನ್ನೆಲೆಯಲ್ಲಿ ಮೈಷುಗರ್ ಕಾರ್ಖಾನೆ ಸುಸ್ಥಿತಿಯಲ್ಲಿ ಮುನ್ನಡೆಯುತ್ತಿದ್ದರೂ ಕಾರ್ಖಾನೆ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ಕಿಸಾನ್ ಘಟಕದ ವತಿಯಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಮೈಷುಗರ್ ಉಳಿಸಿ ರೈತರ ಹಿತ ಕಾಪಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಸಿಹಿ ನೀಡಿದೆ ಎಂದು ಸಕ್ಕರೆ ತಿನ್ನುವ ಮೂಲಕ ಸಂಭ್ರಮಿಸಿದರು.
ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ನಿರಂತರವಾಗಿ ಸಾಗಿದ್ದು, ಸಕಾಲದಲ್ಲಿ ಒಪ್ಪಿಗೆ ಕಬ್ಬನ್ನು ಕಟಾವು ಮಾಡಲಾಗುತ್ತಿದೆ. ಆದರೆ ಖಾಸಗಿ ಕಂಪನಿಗಳ ಜೊತೆ ಶಾಮೀಲಾಗಿರುವ ಬಿಜೆಪಿ ಕಾರ್ಯಕರ್ತರು ಎರಡು ದಿನ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತ ಮಾಡಿದ್ದನ್ನು ನೆಪ ಮಾಡಿಕೊಂಡು ಕಾರ್ಖಾನೆ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಬೇವಿನ ಸೊಪ್ಪು ತಿಂದು ರೈತರಿಗೆ ಕಹಿ ನೀಡಲಾಗಿದೆ ಎಂದು ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2008ರಲ್ಲಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಮೈಷುಗರ್ ಅಧ್ಯಕ್ಷರಾಗಿದ್ದವರು ₹121 ಕೋಟಿಯನ್ನು ನುಂಗಿ ಹಾಕಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ಕೂಡ ಆಗಿದೆ. ಆ ಹಣವನ್ನು ಬಿಜೆಪಿ ನಾಯಕರು ವಸೂಲಿ ಮಾಡಿಕೊಡಲಿ ಎಂದು ಆಗ್ರಹಿಸಿದರು.
ಪಕ್ಷದ ಮುಖಂಡರಾದ ಮೋಹನ್ ಕುಮಾರ್, ಶಿವನಂಜು, ಅಂಜನಾ ಶ್ರೀಕಾಂತ್, ಸಿ.ಎಂ ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್, ಎಚ್.ಡಿ. ಜಯರಾಮ, ಚಂದಗಾಲು ವಿಜಯಕುಮಾರ್, ಪ್ರಕಾಶ್ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.