ADVERTISEMENT

ಮೈಷುಗರ್‌: ವರ್ಷಪೂರ್ತಿ ನಡೆಯುತ್ತಿದ್ದ ದೇಶದ ಏಕೈಕ ಕಾರ್ಖಾನೆ!

ಸರ್ಕಾರಿ ಸ್ವಾಮ್ಯದಲ್ಲೇ ‘ಮೈಷುಗರ್‌’ ಏಕೆ ಆರಂಭಗೊಳ್ಳಬೇಕು, ಮರುಕಳಿಸಲಿದೆಯೇ ಇತಿಹಾಸ?

ಎಂ.ಎನ್.ಯೋಗೇಶ್‌
Published 22 ಅಕ್ಟೋಬರ್ 2021, 13:32 IST
Last Updated 22 ಅಕ್ಟೋಬರ್ 2021, 13:32 IST
ನಿವೃತ್ತಿ ಹೊಂದಿದ ಬಿ.ಜಿ.ದಾಸೇಗೌಡ (ಹಾರ ಹಾಕಿರುವವರು) ಅವರನ್ನು ಸನ್ಮಾನಿಸಿದ ಸಂದರ್ಭ (ಸಂಗ್ರಹ ಚಿತ್ರ)
ನಿವೃತ್ತಿ ಹೊಂದಿದ ಬಿ.ಜಿ.ದಾಸೇಗೌಡ (ಹಾರ ಹಾಕಿರುವವರು) ಅವರನ್ನು ಸನ್ಮಾನಿಸಿದ ಸಂದರ್ಭ (ಸಂಗ್ರಹ ಚಿತ್ರ)   

ಮಂಡ್ಯ: ‘ಒಂದು ಕಾಲದಲ್ಲಿ ಮೈಷುಗರ್‌ ಕಾರ್ಖಾನೆ ವರ್ಷಕ್ಕೆ 9 ತಿಂಗಳು ನಡೆಯುತ್ತಿತ್ತು. ಕಬ್ಬು ಹೆಚ್ಚಾದ ಸಂದರ್ಭದಲ್ಲಿ ವರ್ಷಪೂರ್ತಿ ನಡೆಯುತ್ತಿದ್ದ ದೇಶದ ಏಕೈಕ ಕಾರ್ಖಾನೆಯಾಗಿತ್ತು. ಈಗ ಯಾವ ಸಕ್ಕರೆ ಕಾರ್ಖಾನೆಯೂ 6 ತಿಂಗಳಿಗಿಂತ ಹೆಚ್ಚು ನಡೆಯುವುದಿಲ್ಲ. ಸಕ್ಕರೆ ಕಾರ್ಖಾನೆಗಳಿಗೆ ತಾಯಿಯಂತಿದ್ದ ಮೈಷುಗರ್‌ ಕಾರ್ಖಾನೆಗೆ ಸರ್ಕಾರ ಮರುಜೀವ ನೀಡಬೇಕು’ ಎಂದು ಕಾರ್ಖಾನೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಬಿ.ಮೋಹನದಾಸ್‌ ಒತ್ತಾಯಿಸಿದರು.

1987ರಲ್ಲಿ ಮೈಷುಗರ್‌ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮೋಹನದಾಸ್‌ ಅವರು ಬಿ.ಜಿ.ದಾಸೇಗೌಡರ ಪುತ್ರ. ಮೈಷುಗರ್‌ ಕಾರ್ಖಾನೆಗೂ ಬಿ.ಜಿ.ದಾಸೇಗೌಡರಿಗೂ ಅವಿನಾಭಾವ ನಂಟಿದೆ. ಕಾರ್ಖಾನೆಯಲ್ಲಿ 33 ವರ್ಷ ಕರ್ತವ್ಯ ನಿರ್ವಹಿಸಿದ ದಾಸೇಗೌಡರು ಕೆಮಿಸ್ಟ್‌ ಆಗಿ ಕೆಲಸಕ್ಕೆ ಸೇರಿ ಪ್ರಧಾನ ವ್ಯವಸ್ಥಾಪಕ ಹುದ್ದೆಗೇರಿದವರು. ಮೈಷುಗರ್‌ ಕಾರ್ಖಾನೆ ಸಾಗಿ ಬಂದ ಹಾದಿಯಲ್ಲಿ ಅವರು ಸ್ಥಾಪಿಸಿದ ಮೈಲಿಗಲ್ಲುಗಳು ಒಂದೆರಡಲ್ಲ.

ರೈತಸ್ನೇಹಿ, ಕಾರ್ಮಿಕ ಸ್ನೇಹಿ ವಾತಾವರಣ ನಿರ್ಮಿಸುವಲ್ಲಿ ಅವರ ಪಾತ್ರ ಬಲು ದೊಡ್ಡದು. ಕಾರ್ಖಾನೆ ನಿರ್ಮಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌, ಲೆಸ್ಲಿ ಕೋಲ್ಮನ್‌ ಅವರ ಆತ್ಮೀಯರೂ ಆಗಿದ್ದ ದಾಸೇಗೌಡರು ಮೈಷುಗರ್‌ ಕಾರ್ಖಾನೆಯನ್ನು ದೇಶದ ಪ್ರತಿಷ್ಠಿತ ಕಾರ್ಖಾನೆಯನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ADVERTISEMENT

ಮೈಷುಗರ್‌ ಕಾರ್ಖಾನೆ ಆವರಣವನ್ನು ರೈತರ ಅಭ್ಯದಯಕ್ಕಾಗಿ ಮೀಸಲಿಟ್ಟಿದ್ದರು. ಮಂಡ್ಯದ ಮೊಟ್ಟ ಮೊದಲ ಕಲ್ಯಾಣಮಂಟಪ ಮೈಷುಗರ್‌ ಆವರಣದಲ್ಲಿ ಸ್ಥಾಪನೆಯಾಗಿತ್ತು. ಬೃಂದಾವನ ಶೈಲಿ ಉದ್ಯಾನ, ಈಜುಕೊಳ, ಮೈಷುಗರ್‌ ಆಸ್ಪತ್ರೆ, ಶಾಲೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾರ್ಮಿಕರ ಕ್ಲಬ್‌ಗಳು, ವಸತಿ ನಿಲಯ ಸ್ಥಾಪನೆ ಮಾಡಿದ್ದರು. ಅಷ್ಟೇ ಅಲ್ಲದೇ ರೈತರು, ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ವೃತ್ತಿ ಆಧಾರಿತ ತರಬೇತಿ ಕೊಡಿಸುತ್ತಿದ್ದರು.

ದಾಸೇಗೌಡರು ಕಾರ್ಖಾನೆಯಲ್ಲಿ ಸಲ್ಲಿಸಿದ ಸೇವೆಗೆ ಕೆ.ವಿ.ಶಂಕರಗೌಡರು ಬೆನ್ನೆಲುಬಾಗಿ ನಿಂತಿದ್ದರು. ಅವರು ಇದ್ದಷ್ಟು ದಿನ ಮೈಷುಗರ್‌ ಕಾರ್ಖಾನೆಗೆ ಸುವರ್ಣ ಕಾಲ. ಅವರು ಸಲ್ಲಿಸಿದ ಸೇವೆಯ ಸವಿನೆನಪಿಗಾಗಿ ನಗರದ ಫ್ಯಾಕ್ಟರಿ ವೃತ್ತವನ್ನು ಬಿ.ಜಿ.ದಾಸೇಗೌಡ ವೃತ್ತ ಎಂದು ನಾಮಕರಣ ಮಾಡಲಾಗಿದೆ. ವೃತ್ತದ ಸಮೀಪದಲ್ಲೇ ದಾಸೇಗೌಡರ ಮನೆಯೂ ಇದೆ.

ಅವರ ನಂತರ ಬಂದ ನಾಗರಾಜಶೆಟ್ಟಿ, ಥೆರೇಸಾ ಭಟ್ಟಾಚಾರ್ಯ, ಮಾಲತಿ ದಾಸ್, ಬಾಲಸುಬ್ರಹ್ಮಣ್ಯಂ ಮುಂತಾದವರು ಕೂಡ ಕಾರ್ಖಾನೆಯನ್ನು ಚೆನ್ನಾಗಿಯೇ ನಡೆಸಿದರು. ಆದರೆ 1993ರ ನಂತರ ರಾಜಕೀಯ ಹಸ್ತಕ್ಷೇಪ ಆರಂಭವಾಯಿತು. ಪ್ರತಿ ನೇಮಕಗಳಲ್ಲಿ ರಾಜಕೀಯ ಪ್ರತಿನಿಧಿಗಳೇ ಇರುತ್ತಿದ್ದರು. ಕಾರ್ಮಿಕರು ರಾಜಕೀಯ ಪಕ್ಷಗಳ ಹಿಂಬಾಲಕರಾದರು. ಈ ಎಲ್ಲಾ ಕಾರಣಗಳಿಂದಾಗಿ ಐತಿಹಾಸಿಕ ಮೈಷುಗರ್‌ ಕಾರ್ಖಾನೆ ಅವನತಿಯ ಹಾದಿ ಹಿಡಿಯಿತು.

ದಾಸೇಗೌಡರ ಪುತ್ರರಾದ ಬಿ.ಮೋಹನದಾಸ್‌ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದರೆ, ಬಿ.ಗಿರಿದಾಸ್‌ ಅವರು ಎಂಜಿನಿಯರಿಂಗ್‌ ವಿಭಾಗದಲ್ಲಿ ಹೊರಗಿನಿಂದ ಕೆಲಸ ಮಾಡಿದ್ದಾರೆ. ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಏಕೆ ಸ್ಥಾಪನೆಯಾಗಬೇಕು ಎಂಬ ವಿಚಾರದ ಬಗ್ಗೆ ಹಲವು ವಿಚಾರಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ತಂತ್ರಜ್ಞಾನ ಇಲ್ಲದ ಕಾಲದಲ್ಲೇ ಮೈಷುಗರ್‌ ಕಾರ್ಖಾನೆ ದೇಶದ ಶ್ರೇಷ್ಠ ಸಕ್ಕರೆ ಕಾರ್ಖಾನೆಯಾಗಿತ್ತು. ಆದರೆ ಈಗ ತಂತ್ರಜ್ಞಾನ ಉತ್ತುಂಗ ಸ್ಥಿತಿಯಲ್ಲಿದೆ. ಕಾರ್ಖಾನೆ ಬಳಿ ಸಂಪನ್ಮೂಲಕ್ಕೆ ಕೊರತೆ ಇಲ್ಲ. ಅತ್ಯುತ್ತಮ ವರ್ಕ್‌ಶಾಪ್‌ ಇದೆ, ತಂತ್ರಜ್ಞಾನ ನಿರ್ವಹಣೆಗೆ ಬೇರೆಡೆ ಅವಲಂಬಿಸಬೇಕಿಲ್ಲ, ಬೇಕಾದಷ್ಟು ಕಬ್ಬಿದೆ. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಸರ್ಕಾರಿ ಸ್ವಾಮ್ಯದಲ್ಲಿಯೇ ದೇಶದ ಮಾದರಿ ಕಾರ್ಖಾನೆಯನ್ನಾಗಿ ರೂಪಿಸಬಹುದು. ಪ್ರಮಾಣಿಕ ಹಾಗೂ ಬದ್ಧತೆಯುಳ್ಳ ಅಧಿಕಾರಿಗಳನ್ನು ನೆಮಿಸಿದರೆ ಕಳೆದು ಹೋಗಿರುವ ಇತಿಹಾಸವನ್ನು ಮರುಸೃಷ್ಟಿಸಬಹುದು’ ಎಂದು ಮೋಹನದಾಸ್‌ ಹೇಳಿದರು.

‘ಮೈಷುಗರ್‌ ಚಿಮಣಿಯಲ್ಲಿ ಹೊಗೆಯಾಡುವವರೆಗೂ ಮಂಡ್ಯ ಜಿಲ್ಲೆ ಶ್ರೀಮಂತವಾಗಿರಲಿದೆ ಎಂದು ನಮ್ಮ ತಂದೆ ಹೇಳುತ್ತಿದ್ದರು. ಈಗ ಚಿಮಣಿಯಲ್ಲಿ ಹೊಗೆ ಇಲ್ಲ, ಚಕ್ರ ತಿರುಗುತ್ತಿಲ್ಲ. ಮೈಷುಗರ್ ವಿಷಯದಲ್ಲಿ ಖಾಸಗೀಕರಣ ಮಾತೇ ಬೇಡ. ಭವ್ಯ ಇತಿಹಾಸವನ್ನು ಖಾಸಗಿಯವರಿಗೆ ಗುತ್ತಿಗೆ ಕೊಡುವುದು ಒಳ್ಳೆಯದಲ್ಲ. ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ಆರಂಭಗೊಳ್ಳಬೇಕು. ಆಗ ಜಿಲ್ಲೆಯ ಅರ್ಥಿಕ ಶಕ್ತಿ ಮತ್ತೆ ಶ್ರೀಮಂತವಾಗಲಿದೆ’ ಎಂದು ಬಿ.ಗಿರಿದಾಸ್‌ ಹೇಳಿದರು.

14 ಫಾರಂ, 3 ಸಾವಿರ ಎಕರೆ ಭೂಮಿ

‘ಕಬ್ಬು ಬೆಳೆಯುವ ಬಗ್ಗೆ ರೈತರಿಗೆ ಮೈಷುಗರ್‌ ವತಿಯಿಂದಲೇ ತರಬೇತಿ ಕೊಡಲಾಗುತ್ತಿತ್ತು. ಅದಕ್ಕಾಗಿ ಬಿ.ಹೊಸೂರು ಕಾಲೊನಿ, ಎಚ್‌.ಮಲ್ಲಿಗೆರೆ, ಲೋಕಸರ, ಕರಡಕೆರೆ ಮುಂತಾತೆಡೆ 14 ಫಾರಂ ಸ್ಥಾಪಿಸಿತ್ತು. 3,024 ಎಕರೆ ಭೂಮಿ ಇತ್ತು. ಫಾರಂ ನಿರ್ವಹಣೆಗೆ ಪ್ರತ್ಯೇಕ ವಿಭಾಗವೇ ಇತ್ತು, ಕೆಲಸ ಮಾಡುವವರಿಗೆ ಹೊಸೂರು ಕಾಲೊನಿಯಲ್ಲಿ ಜಾಗ ಕೊಟ್ಟಿತ್ತು. ನಂತರ ಬಹುತೇಕ ಫಾರಂಗಳನ್ನು ಮಾರಾಟ ಮಾಡಲಾಗಿದೆ’ ಎಂದು ಮೋಹನ್‌ದಾಸ್‌ ನೆನಪಿಸಿಕೊಂಡರು.

ಬಿ.ಹೊಸೂರು ಕಾಲೊನಿ ಜಾಗದಲ್ಲಿ ಸರ್ಕಾರ ಟಿ.ಬಿ ಆಸ್ಪತ್ರೆ ಸ್ಥಾಪಿಸಿತ್ತು. ಈಗ ಆ ಜಾಗ ಹಾಗೂ ಕಟ್ಟಡಗಳನ್ನು ಕೇಂದ್ರೀಯ ವಿದ್ಯಾಲಯ, ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ.

6 ತಿಂಗಳಿಗೊಮ್ಮೆ ಬೋನಸ್‌

‘ಇಡೀ ದೇಶದಲ್ಲಿ ಕಾರ್ಮಿಕರಿಗೆ 6 ತಿಂಗಳಿಗೊಮ್ಮೆ ಬೋನಸ್‌ ಕೊಡುತ್ತಿದ್ದ ಕಾರ್ಖಾನೆಯೊಂದಿದ್ದರೆ ಮೈಷುಗರ್‌ ಮಾತ್ರ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿತ್ತು. ಷೇರುದಾರರ ಸಭೆ ಹಬ್ಬದಂತೆ ನಡೆಯುತ್ತಿತ್ತು. ಬಂದ ಲಾಭವನ್ನು ಏನು ಮಾಡುವುದು ಎಂಬ ಚರ್ಚೆ ಒಮ್ಮೆ ಬಂದಿತ್ತು. ಆಗ ಸ್ವರ್ಣಸಂದ್ರ ಬಡಾವಣೆಯಲ್ಲಿ ಕಾರ್ಮಿಕರಿಗಾಗಿ ಬಡಾವಣೆಯೊಂದನ್ನು ನಿರ್ಮಿಸಲಾಯಿತು’ ಎಂದು ಮೋಹನದಾಸ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.