ಮಂಡ್ಯ: ಮೈಷುಗರ್ ಚಕ್ರಗಳು ಮೌನಕ್ಕೆ ಶರಣಾದ ನಂತರ ಇದೇ ಮೊದಲ ಬಾರಿಗೆ ಕಾರ್ಖಾನೆ ಆವರಣದಲ್ಲಿ ಭರವಸೆ ಮೂಡಿದೆ. ಕಾರ್ಖಾನೆ ಆರಂಭಕ್ಕೆ 70 ದಿನಗಳ ಕಾರ್ಯಾಚರಣೆ ನಡೆಸಲು ಸರ್ಕಾರ ಮಂದಾಗಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ಅಂತಿಮ ವಾರದಲ್ಲಿ ಮೈಷುಗರ್ ಚಿಮಣಿಯಲ್ಲಿ ಹೊಗೆಯಾಡುವ ಸಾಧ್ಯತೆ ಇದೆ.
ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಬಜೆಟ್‌ನಲ್ಲಿ ₹ 50 ಕೋಟಿ ಅನುದಾನ ಘೋಷಣೆಯಾದ ನಂತರವೂ ಯಾವುದೇ ಚಟುವಟಿಕೆ ಆರಂಭಿಸಿಲ್ಲ, ಈ ವರ್ಷ ಕಾರ್ಖಾನೆ ಆರಂಭವಾಗುವುದು ಅನುಮಾನ ಎಂಬ ಆತಂಕ ರೈತರಲ್ಲಿತ್ತು. ಆದರೆ ಕಳೆದೊಂದು ವಾರದಿಂದ ಕಾರ್ಖಾನೆ ಆವರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಆಶಾವಾದ ಮೂಡಿದೆ.
ಕಾರ್ಖಾನೆಯ ಇತಿಹಾಸದಲ್ಲಿ ಎಐಎಸ್ ಅಧಿಕಾರಿ ಹೊರತುಪಡಿಸಿ ಬೇರೆ ಯಾರೂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ನಿರ್ವಹಣೆ ಮಾಡಿರಲಿಲ್ಲ. ಐಎಎಸ್ ಅಧಿಕಾರಿಗಳಿಗೆ ಸಕ್ಕರೆ ಕಾರ್ಖಾನೆ ತಂತ್ರಜ್ಞಾನ ಗೊತ್ತಿಲ್ಲ, ಇದೇ ಕಾರಣಕ್ಕೆ ಕಾರ್ಖಾನೆ ಅವನತಿ ಹೊಂದಿದೆ ಎಂದೇ ಹೇಳಲಾಗುತ್ತಿತ್ತು.
ಇದನ್ನು ಮನಗಂಡ ಸರ್ಕಾರ ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿಯನ್ನು ಹೊರತುಪಡಿಸಿ ಸಕ್ಕರೆ ತಂತ್ರಜ್ಞಾನದಲ್ಲಿ ಅಪಾರ ಅನುಭವ ಹೊಂದಿರುವ ಅಪ್ಪಾಸಾಹೇಬ ಪಾಟೀಲ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ವಿಜಯಪುರ ಮೂಲದ ಅವರು ನಂದಿ ಸಹಕಾರ ಸಕ್ಕರೆ ಕಾರ್ಖಾನೆ ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಜೊತೆಗೆ ಬಣ್ಣಾರಿ ಅಮ್ಮನ್ ಕಾರ್ಖಾನೆಯಲ್ಲಿ ಅಪಾರ ಅನುಭವ ಹೊಂದಿರುವ ಚಂದ್ರಶೇಖರ್ ಅವರನ್ನು ಮುಖ್ಯ ಕಬ್ಬು ಅಭಿವೃದ್ಧಿ ಅಧಿಕಾರಿ (ಸಿಸಿಡಿಒ) ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಇಬ್ಬರೂ ಮುಖ್ಯಸ್ಥರು ಮಂಡ್ಯದಲ್ಲೇ ವಾಸ್ತವ್ಯ ಹೂಡಲಿದ್ದು ಕಾರ್ಖಾನೆ ಆರಂಭಿಕ ಚಟುವಟಿಕೆಗಳ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ. ಮೇ 1ರಿಂದಲೇ ಕಾರ್ಖಾನೆ ಸ್ವಚ್ಛತೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕೇವಲ 70 ದಿನಗಳಲ್ಲಿ ಕಾರ್ಖಾನೆ ಆರಂಭಗೊಳ್ಳಬೇಕು ಎಂಬ ಷರತ್ತಿನೊಂದಿಗೆ ಕೊಲ್ಹಾಪುರದ ಆರ್.ಬಿ.ಟೆಕ್, ಪುಣೆಯ ಇಎಸ್‌ಎಸ್ ಎನ್‌ಆರ್ ಪವರ್ ಟೆಕ್ ಕಂಪನಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಕಾರ್ಖಾನೆಯ ಯಂತ್ರೋಪಕರಣಗಳನ್ನು ಸಹಜ ಸ್ಥಿತಿಗೆ ತರುವುದೂ ಸೇರಿದಂತೆ 250 ಕಾರ್ಮಿಕರಿಗೆ ಬೇಕಾದ ವಸತಿ ಸೌಲಭ್ಯ, ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಲಭ್ಯ ಒದಗಿಸುವ ಹೊಣೆಗಾರಿಕೆ ನೀಡಲಾಗಿದೆ.
ಅದಕ್ಕಾಗಿ ₹ 16.76 ಕೋಟಿಗೆ ಗುತ್ತಿಗೆ ನೀಡಲಾಗಿದ್ದು ಕಾರ್ಖಾನೆ ಇರುವ ಸ್ಥಿತಿಯಲ್ಲಿಯೇ ಸಹಜ ಸ್ಥಿತಿಗೆ ತರಬೇಕು. ಹೊರಗಿನಿಂದ ಹೊಸ ಯಂತ್ರ ತರುವಂತಿಲ್ಲ ಎಂಬ ಷರತ್ತಿನೊಂದಿಗೆ ಕರಾರು ಮಾಡಿಕೊಳ್ಳಲಾಗಿದೆ. ನಿದಿಗಿತ ಅವಧಿಗಿಂತ 5 ದಿನ ಮುಂಚೆ ಮುಗಿಸಿದರೆ ಶೇ 5, 10 ದಿನ ಮೊದಲು ಮುಗಿಸಿದರೆ ಶೇ 10ರಷ್ಟು ಹೆಚ್ಚಿನ ಹಣ ಕಂಪನಿಗಳಿಗೆ ದೊರೆಯಲಿದೆ. ನಿಗದಿಗಿಂತ ಹೆಚ್ಚು ದಿನ ತೆಗೆದುಕೊಂಡರೆ ಅಷ್ಟು ಹಣ ಕಡಿತಮಾಡಲಾಗುವುದು ಎಂಬ ಷರತ್ತು ಕೂಡ ಇದೆ. ಮೇ ಮೊದಲ ವಾರದಲ್ಲೇ ಕಂಪನಿಗಳು ಕಾರ್ಯಾಚರಣೆ ಆರಂಭಿಸಲಿವೆ.
‘ಸರ್ಕಾರ ಯಾವುದೇ ಚಟುವಿಟಿಕೆ ಆರಂಭಿಸಿಲ್ಲ ಎಂಬ ಆತಂಕ ಇತ್ತು. ಆದರೆ ನೂತನ ಎಂ.ಡಿ ಅವರನ್ನು ಭೇಟಿಯಾದ ನಂತರ ಅವರು ಚಟುವಟಿಕೆಗಳ ಸಮಗ್ರ ಮಾಹಿತಿ ನೀಡಿದ್ದಾರೆ. ನಮ್ಮಲ್ಲಿ ಈಗ ಭರವಸೆ ಮೂಡಿದೆ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ತಿಳಿಸಿದರು.
ಹೊರಗುತ್ತಿಗೆಯಲ್ಲಿ ಕಾರ್ಮಿಕರ ನೇಮಕ
‘ಅತ್ಯಂತ ಶ್ರೀಘ್ರವಾಗಿ ಹೊರಗುತ್ತಿಗೆ ಆಧಾರದ ಮೇಲೆ 250 ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಕ್ರಮ ವಹಿಸಲಾಗಿದೆ. ಈಗಿರುವ ಕಾರ್ಮಿಕರನ್ನು ಉಳಿಸಿಕೊಂಡು ಸಕ್ಕರೆ ಕಾರ್ಖಾನೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಕಾರ್ಮಿಕರನ್ನು ಕರೆತರಲಾಗುವುದು’ ಎಂದು ಕಾರ್ಖಾನೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ರಾಜ್ಯ ಸರ್ಕಾರದ ಕಿಯೋನಿಕ್ಸ್ ನೇತೃತ್ವದಲ್ಲಿ ಅನುಭವ ಹೊಂದಿರುವ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅನುಭವಿ ಮುಖ್ಯ ಎಂಜಿನಿಯರ್, ಮುಖ್ಯ ಕೆಮಿಸ್ಟ್ ನೇಮಕಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲರಿಗೂ ವಸತಿಗೃಹ ಸೇರಿದಂತೆ ಮೂಲ ಸೌಲಭ್ಯ ಒದಗಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.