ADVERTISEMENT

ಆ.15ರಿಂದ ಮೈಷುಗರ್‌ ಕಾರ್ಖಾನೆ ಆರಂಭ: ಜಾರ್ಜ್‌

ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ, ಸಹವಿದ್ಯುತ್‌ ಘಟಕ ಆರಂಭಕ್ಕೂ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2018, 14:30 IST
Last Updated 24 ಜುಲೈ 2018, 14:30 IST
ಬೃಹತ್‌ ಕೈಗಾರಿಕೆ, ಸಕ್ಕರೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್‌ ಮಂಗಳವಾರ ಮಂಡ್ಯದ ಮೈಷುಗರ್‌ ಕಾರ್ಖಾನೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು
ಬೃಹತ್‌ ಕೈಗಾರಿಕೆ, ಸಕ್ಕರೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್‌ ಮಂಗಳವಾರ ಮಂಡ್ಯದ ಮೈಷುಗರ್‌ ಕಾರ್ಖಾನೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು   

ಮಂಡ್ಯ: ‘ಆಗಸ್ಟ್‌ 15ರಂದು ಮೈಷುಗರ್ ಕಾರ್ಖಾನೆ ಕಾರ್ಯಾರಂಭಗೊಳಿಸಲಾಗುವುದು. ಈ ಕುರಿತು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಅಧಿಕಾರಿಗಳು ಹಾಗೂ ಕಾರ್ಖಾನೆ ಸಿಬ್ಬಂದಿ ಜೊತೆ ಮಾತನಾಡಿದ್ದೇನೆ’ ಎಂದು ಬೃಹತ್‌ ಕೈಗಾರಿಕೆ, ಸಕ್ಕರೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

ನಗರದ ಮೈಷುಗರ್ ಕಾರ್ಖಾನೆಗೆ ಮಂಗಳವಾರ ಭೇಟಿ ನೀಡಿದ್ದ ಅವರು ರೈತ ಮುಖಂಡರು ಹಾಗೂ ಕಾರ್ಖಾನೆ ಸಿಬ್ಬಂದಿಯ ಜೊತೆ ಸಮಾಲೋಚನೆ ನಡೆಸಿದರು.

‘ಕಾರ್ಖಾನೆ ಪುನಾರಂಭಕ್ಕೆ ಈಗಾಗಲೇ ಸರ್ಕಾರ ₹ 20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಾರ್ಖಾನೆ ಆರಂಭ ಆಗುವುದರೊಳಗಾಗಿ ರೈತರಿಗೆ ನೀಡಬೇಕಾದ ಕಬ್ಬು ಪೂರೈಕೆ ಹಣ ಪಾವತಿ ಮಾಡಲಾಗುವುದು. ₹ 2.5 ಕೋಟಿ ಹಣ ರೈತರ ಬಾಕಿ ಇದ್ದು ಪಾವತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಕಾರ್ಮಿಕರಿಗೆ ವೇತನ ಪಾವತಿ ಮಾಡಿ ಆಗಸ್ಟ್‌ 15ರಂದು ಕಬ್ಬು ನುರಿಯುವುದನ್ನು ಆರಂಭಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಮುಂದಿನ 10 ದಿನದ ಒಳಗಾಗಿ ಒಂದು ಬಾಯ್ಲರ್ ರಿಪೇರಿ ಕಾರ್ಯ ಮುಗಿಯಲಿದೆ. ಕಾರ್ಖಾನೆ ಕಾರ್ಯಾರಂಭವಾದ ನಂತರ ಮತ್ತೊಂದು ಬಾಯ್ಲರ್ ರಿಪೇರಿ ಕಾರ್ಯ ಪೂರ್ಣಗೊಳಿಸಲಾಗುವುದು. ಡಿಸೆಂಬರ್‌ನಿಂದ ಎರಡೂ ಬಾಯ್ಲರ್‌ಗಳು ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು. 3 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯ ಬಾಯ್ಲರ್‌ಗಳಿಗಿದ್ದು ಶೀಘ್ರ ರಿಪೇರಿ ಕಾರ್ಯ ಪೂರ್ಣಗೊಳ್ಳಲಿದೆ. ಮೈಷುಗರ್‌ ಕಾರ್ಖಾನೆಗೆ ಕಾಯಕಲ್ಪ ನೀಡಲು ಸಮ್ಮಿಶ್ರ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ರೈತರು ಆತಂಕ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.

ಸಹವಿದ್ಯುತ್‌ ಘಟಕವೂ ಆರಂಭ:
‘ಆಗಸ್ಟ್‌ 15ರಂದು ಕಾರ್ಖಾನೆ ಆವರಣದಲ್ಲಿರುವ ಸಹ ವಿದ್ಯುತ್‌ ಘಟಕವನ್ನೂ ಆರಂಭಿಸಲಾಗುವುದು. ಕಾರ್ಖಾನೆಗೆ ಅವಶ್ಯವಿರುವ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು. ಮದ್ಯ ತಯಾರಿಕಾ ಘಟಕವನ್ನು ಖಾಸಗಿಯವರಿಗೆ ವಹಿಸಸಲು ಚಿಂತಿಸಲಾಗುತ್ತಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ನ್ಯಾಯಯುತ ದರದ (ಎಫ್‌ಆರ್‌ಪಿ) ಬಗ್ಗೆ ರೈತರಲ್ಲಿ ಗೊಂದಲವಿದೆ. ಕೇಂದ್ರ ಸರ್ಕಾರದ ಬೆಲೆ ನಿರ್ಧಾರವನ್ನು ನೋಡಿಕೊಂಡು ಶೀಘ್ರ ಕಬ್ಬಿನ ದರ ನಿಗದಿ ಮಾಡಲಾಗುವುದು’ ಎಂದರು.

ವ್ಯವಸ್ಥಾಪಕ ನಿರ್ದೇಶಕ ಅಜಯ್ ನಾಗಭೂಷಣ್ ಮಾತನಾಡಿ ‘ಈಗಾಗಲೇ ರೈತರಿಂದ 2.8 ಲಕ್ಷ ಟನ್ ಕಬ್ಬು ಒಪ್ಪಿಗೆ ಪಡೆದುಕೊಂಡಿದ್ದು, ಕಬ್ಬು ಕಟಾವಿಗೆ ಬಳ್ಳಾರಿಯಿಂದ ಕಾರ್ಮಿಕರನ್ನು ಕರೆತರಲು ತಂಡವೊಂದನ್ನು ಕಳುಹಿಸಲಾಗಿದೆ. ಮುಂದಿನ ಒಂದು ವಾರದೊಳಗೆ ಕಬ್ಬು ಕಟಾವು ಮಾಡಲು ರೈತರಿಗೆ ಸೂಚನೆ ನೀಡಲಾಗುವುದು. ಕಾರ್ಖಾನೆಯಲ್ಲಿ ಎಂ.ಡಿ ಹಾಗೂ ಸಿಬ್ಬಂದಿ ಬಿಟ್ಟರೆ ಕಾಯಂ ನೌಕರರು ಇಲ್ಲ. ಕಾರ್ಖಾನೆಗೆ ಕಾರ್ಮಿಕರ ಕೊರತೆ ಎದುರಾಗಿದೆ. ಈಗಿರುವ ಗುತ್ತಿಗೆ ಕಾರ್ಮಿಕರನ್ನು ಮುಂದಿನ ಮೂರು ವರ್ಷದವರೆಗೆ ಗುತ್ತಿಗೆ ಅವಧಿಯನ್ನು ಮುಂದುವರಿಸಲಾಗುವುದು’ ಎಂದು ಹೇಳಿದರು.

ಸಮನ್ವಯ ಸಮಿತಿ ರಚಿಸಿ:
ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ ಮಾತನಾಡಿ ‘ಕಾರ್ಖಾನೆ ಯಾವ ಕಾರ್ಯಗಳೂ ರೈತರಿಗೆ ತಿಳಿಯುವುದಿಲ್ಲ. ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸರಬರಾಜು ಮಾಡಿದ ನಂತರ ಹಣಕ್ಕಾಗಿ ಪರದಾಡಬೇಕಾಗಿದೆ. ನಮ್ಮ ಕಬ್ಬು ಕೊಟ್ಟು ಹಣ ಪಡೆಯಲು ಕಚೇರಿಗೆ ಅಲೆದಾಡಬೇಕಾಗಿದೆ. ಹೀಗಾಗಿ ಕಾರ್ಖಾನೆಯಲ್ಲಿ ಕಬ್ಬು ಒಪ್ಪಿಗೆದಾರರನ್ನು ಒಳಗೊಂಡಂತೆ ಸಮನ್ವಯ ಸಮಿತಿ ರಚನೆ ಮಾಡಿ ವಾರಕ್ಕೆ ಒಂದು ಬಾರಿ ಕಾರ್ಖಾನೆಯಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಚರ್ಚಿಸಲು ಅವಕಾಶ ನೀಡಬೇಕು’ ಒತ್ತಾಯಿಸಿದರು.

‘ಕಳೆದ ಐದು ವರ್ಷದಿಂದ 6 ಲಕ್ಷ ಟನ್ ಕಬ್ಬು ನುರಿಸಿ ಕೇವಲ ₹ 60 ಲಕ್ಷ ಹಣ ನೀಡಿದ್ದಾರೆ. ಇಲ್ಲಿ ಕಾರ್ಖಾನೆ ಕಾರ್ಮಿಕರು ಅಥವಾ ಕಬ್ಬು ಒಪ್ಪಿಗೆದಾರರಿಂದ ಯಾವುದೇ ತೊಂದರೆಯಾಗಿಲ್ಲ. ಮದ್ಯ ತಯಾರಿಕಾ ಘಟಕ ಸ್ಥಾಪನೆ ಮಾಡಿ 60 ವರ್ಷ ಕಳೆದಿದೆ. ಕಾರ್ಖಾನೆ ಇತಿಹಾಸದಲ್ಲಿ ಘಟಕ ಎಂದೂ ನಷ್ಟ ಅನುಭವಿಸಿಲ್ಲ. ಇದನ್ನು ಖಾಸಗಿಯವರಿಗೆ ನೀಡದೆ ಸರ್ಕಾರವೇ ನಡೆಸಿಕೊಂಡು ಹೋಗಬೇಕು’ ಎಂದು ಒತ್ತಾಯಿಸಿದರು.

ಶಾಸಕ ಎಂ.ಶ್ರೀನಿವಾಸ್‌, ಮುಖಂಡರಾದ ಗಣಗ ರವಿಕುಮಾರ್‌ಗೌಡ, ಸಿ.ಡಿ.ಗಂಗಾಧರ್‌, ಸಿದ್ದರಾಮೇಗೌಡ, ಅಂಜನಾ ಶ್ರೀಕಾಂತ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.