ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ, ಮೂರು ದಿನದ ಐತಿಹಾಸಿಕ ಶ್ರೀರಂಗಪಟ್ಟಣ ದಸರಾಕ್ಕೆ ಸೋಮವಾರ ಚಾಲನೆ ನೀಡಿದರು.
ಕಿರಂಗೂರು ಬನ್ನಿ ಮಂಟಪದ ಬಳಿ ಅವರು ಅಗ್ರ ಪೂಜೆ ಮಾಡಿದ ನಂತರ ಮಹೇಂದ್ರ ಆನೆಯ ಮೇಲೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಕೂರಿಸಿ ಜಂಬೂಸವಾರಿಗೆ ಚಾಲನೆ ನೀಡಲಾಯಿತು. ಡಾ.ಭಾನು ಪ್ರಕಾಶ್ ಶರ್ಮಾ ನೇತೃತ್ವದ ವೈದಿಕರ ತಂಡದ ಸದಸ್ಯರು ಧಾರ್ಮಿಕ ಕಾರ್ಯಗಳ್ನು ನೆರವೇರಿಸಿದರು.
ಮಹೇಂದ್ರ ಆನೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಹೊತ್ತು ಸಾಗಿತು. ವರಲಕ್ಷ್ಮಿ ಮತ್ತು ವಿಜಯ ಆನೆಗಳು ಕುಮ್ಕಿ ಆನೆಗಳಾಗಿ ಹೆಜ್ಜೆ ಹಾಕಿದವು. ಬನ್ನಿ ಮಂಟಪದ ಬಳಿ ಆರಂಭವಾದ ಜಂಬೂಸವಾರಿ ಕಿರಂಗೂರು, ಬಾಬುರಾಯನಕೊಪ್ಪಲು, ಪಟ್ಟಣದ ಕುವೆಂಪು ವೃತ್ತ, ಪುರಸಭೆ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಶ್ರೀರಂಗನಾಥಸ್ವಾಮಿ ದೇವಾಲಯ ತಲುಪಿತು. 25ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು, ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳ ಉತ್ಸವಕ್ಕೆ ಮೆರಗು ನೀಡಿದವು.
‘ಶ್ರೀರಂಗಪಟ್ಟಣದಲ್ಲಿ ದಸರಾ ಉತ್ಸವಕ್ಕೆ ಈ ಬಾರಿ ಚಾಲನೆ ನೀಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಸಮೃದ್ಧವಾಗಿ ಮಳೆ, ಬೆಳೆಯಾಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ’ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದರು.
‘ಬರಗಾಲವಿರುವುದರಿಂದ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಿಸಿದ್ದೇವೆ. ಮುಂದಿನ ವರ್ಷ ವೈಭವಪೂರ್ಣವಾಗಿ ಆಚರಿಸಲಾಗುವುದು’ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ಎಂ. ನರೇಂದ್ರಸ್ವಾಮಿ, ಕದಲೂರು ಉದಯ್, ಜಿಲ್ಲಾಧಿಕಾರಿ ಕುಮಾರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.