ADVERTISEMENT

ಬಿಜೆಪಿ ಭಿನ್ನಮತದಿಂದ ಕಾಂಗ್ರೆಸ್‌ಗೆ ಗೆಲುವು: ಸಚಿವ ಎನ್.ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:52 IST
Last Updated 30 ಅಕ್ಟೋಬರ್ 2024, 15:52 IST
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ   

ಮಂಡ್ಯ: ‘ಬಿಜೆಪಿಯಲ್ಲಿ ಭಿನ್ನಮತ ಕಾಂಗ್ರೆಸ್ ಗೆಲುವಿಗೆ ರಹದಾರಿ. ಅದರಂತೆ ರಾಜ್ಯದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅಗತ್ಯ ಮಾನದಂಡ ರೂಪಿಸಲಾಗುವುದು. ಇದಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ತಲಾ ಒಂಬತ್ತು ಸಚಿವರು ಒಂದೊಂದು ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು.

ಬಿಜೆಪಿಯಲ್ಲಿ ಹಲವು ಗೊಂದಲಗಳಿವೆ. ಹಿರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ನಾಯಕತ್ವಕ್ಕೆ ಸೊಪ್ಪು ಹಾಕಿಲ್ಲ. ಉಪಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ರಮೇಶ ಜಾರಕಿಹೊಳಿ ಬಹಿರಂಗವಾಗಿ ಹೇಳಿದ್ದಾರೆ. ಬಿಜೆಪಿಗರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇತರರ ತಟ್ಟೆಯಲ್ಲಿ ಬಿದ್ದಿರುವ ನೊಣ ಹುಡುಕಾಟದಲ್ಲಿ ತಲ್ಲೀನರಾಗಿದ್ದಾರೆ ಎಂದು ಟೀಕಿಸಿದರು.

ADVERTISEMENT

ರಾಮನಗರವನ್ನು ಮಹಾನಗರ ಪಾಲಿಕೆಯಾಗಿ ರೂಪಿಸುವ ಕುಮಾರಸ್ವಾಮಿ ಭರವಸೆ ಕಾರ್ಯಗತವಾಗುವುದಿಲ್ಲ. ನಗರಪಾಲಿಕೆ ಮಾಡುವುದು ರಾಜ್ಯ ಸರ್ಕಾರದ ಕೆಲಸ. ಈ ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಮಾಡದ ಕೆಲಸವನ್ನು ಕೇಂದ್ರ ಸಚಿವರಾಗಿ ಮಾಡಲು ಸಾಧ್ಯವೇ ಎಂದು ವ್ಯಂಗ್ಯವಾಡಿದರು.

ನಿಖಿಲ್ ಕುಮಾರಸ್ವಾಮಿ ‘ಅಭಿಮನ್ಯುವಲ್ಲ, ಅರ್ಜುನ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಅವರ ವೈಯಕ್ತಿಕ. ಕುಮಾರಸ್ವಾಮಿ ಅವರೇ ನಿರ್ಮಾಪಕ, ನಿರ್ದೇಶಕ ಹಾಗೂ ನಟರಾಗಿದ್ದು, ಯಾವುದೇ ಪಾತ್ರವನ್ನು ನೀಡಲು ಅವರಿಗೆ ಅಧಿಕಾರವಿದೆ. ಆದರೆ, ಗೆಲುವಿಗೆ ಅಗತ್ಯ ರೂಪು-ರೇಷೆ ಸಿದ್ಧಪಡಿಸಲು ಕಾಂಗ್ರೆಸ್ ಮುಂದಾಗಲಿದೆ ಎಂದರು. 

ಮೈತ್ರಿ ಪಕ್ಷ ತ್ಯಜಿಸಿದ ಮಾತ್ರಕ್ಕೆ ಸಿ.ಪಿ.ಯೋಗೇಶ್ವರ್ ವರ್ಚಸ್ಸು ಕುಸಿದಿದೆ ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸಿಪಿವೈ ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿ. ಅವರನ್ನು ಬಲಿಷ್ಠ ಅಭ್ಯರ್ಥಿ ಎಂದು ಬಿಂಬಿಸಲು ಸಾಧ್ಯವಿಲ್ಲದ ಕಾರಣ ವರ್ಚಸ್ಸು ಕುಸಿದಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಆದರೆ, ಕ್ಷೇತ್ರದಲ್ಲಿ ಜನಪ್ರಿಯತೆ ಹೊಂದಿರುವ ಯೋಗೇಶ್ವರ್ ಗೆಲುವು ಶತಸಿದ್ಧ ಎಂದರು. 

ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ: ಮಂಡ್ಯ ಜಿಲ್ಲೆಯ 7 ತಾಲ್ಲೂಕುಗಳಲ್ಲಿಯೂ ಯಾವುದೇ ಜಮೀನನ್ನು ವಕ್ಫ್ ಆಸ್ತಿಯಾಗಿ ವಶಪಡಿಸಿಕೊಳ್ಳುವ ನಿರ್ಧಾರ ಜಿಲ್ಲಾಡಳಿತ ಮಾಡಿಲ್ಲ. ಬೆಳ್ಳೂರು ಸೇರಿದಂತೆ ಹಲವು ಪ್ರದೇಶಗಳ ವಿವಾದ ಬಹು ವರ್ಷದಿಂದ ನಡೆಯುತ್ತಿದೆ. ಆದರೆ, ಯಾರನ್ನೂ ಒಕ್ಕಲೆಬ್ಬಿಸಿ ಜಮೀನು ಕಬಳಿಕೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.