ನಾಗಮಂಗಲ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಕೋಟೆ ವಿದ್ಯಾಗಣಪತಿ ಮೂರ್ತಿಯನ್ನು 47 ದಿನಗಳ ನಂತರ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಭಕ್ತರ ಸಮ್ಮುಖದಲ್ಲಿ ಮತ್ತು ಪೊಲೀಸ್ ಭದ್ರತೆಯಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿ, ವಿಸರ್ಜಿಸಲಾಯಿತು.
ಇಲ್ಲಿನ ಪಡುವಲಪಟ್ಟಣ ರಸ್ತೆಯಲ್ಲಿಯಲ್ಲಿರುವ ಕೋಟೆ ಗಣಪತಿಯ ವಿಸರ್ಜನಾ ಮಹೋತ್ಸವಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಜೊತೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್‌ಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸಾಥ್ ನೀಡಿದರು.
ಅಲಂಕೃತಗೊಂಡ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮೆರವಣಿಗೆ ಆರಂಭಿಸಲಾಯಿತು. ಮೆರವಣಿಗೆಯಲ್ಲಿ ಜನಪದ ಕಲಾತಂಡಗಳ ಪ್ರದರ್ಶನ, ಡಿ.ಜೆ ಸದ್ದಿಗೆ ಮಕ್ಕಳು, ಯುವಕರು ಮತ್ತು ಯುವತಿಯರು ಹೆಜ್ಜೆಹಾಕಿದರು. ಜನರು ಮೆರವಣಿಗೆ ಕಣ್ತುಂಬಿಕೊಳ್ಳಲು ಸಾರ್ವಜನಿಕರು ರಸ್ತೆ ಬದಿಯ ಕಟ್ಟಡಗಳ ಮೇಲೆ ನಿಂತು ವೀಕ್ಷಿಸಿದರು.
ಪಾನಕ, ಅನ್ನಸಂತರ್ಪಣೆ:
ಮೆರವಣಿಗೆ ಸಾಗುತ್ತಿದ್ದ ದಾರಿಯಲ್ಲಿ ಕಾಯಿ ಒಡೆದು ಪೂಜೆ ಮಾಡಿಸಿದರು. ಭಕ್ತರು ರಸ್ತೆಯಲ್ಲಿ ನೂರಾರು ಈಡುಗಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ಭಕ್ತರ ದಣಿವಾರಿಸಲು ಮಜ್ಜಿಗೆ, ಪಾನಕ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯದ ಹಿಂಭಾಗ ಸುಮಾರು 10 ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಭಕ್ತರು ಸ್ವಯಂ ಪ್ರೇರಿತವಾಗಿ ಬಾಳೆಹಣ್ಣಿನ ಗೊನೆಗಳನ್ನು ತಂದು ವಿತರಿಸಿದರು.
ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಕೋಳಿ ಕುಣಿತ, ಯಕ್ಷಗಾನ, ಸೋಮನ ಕುಣಿತ, ಪಟದ ಕುಣಿತ, ತಮಟೆ, ನಗಾರಿ, ಕಂಸಾಳೆ, ಮಂಗಳವಾದ್ಯ, ಕಾವಡಿ ನೃತ್ಯ, ಕೋಲಾಟ, ಪೂಜಾ ಕುಣಿತ, ಗಾರುಡಿಗೊಂಬೆಗಳ ಪ್ರದರ್ಶನ, ಚಂಡೆವಾದ್ಯ ಸೇರಿದ ಆದಿಶಕ್ತಿ, ಹನುಮನ ವೇಷಧಾರಿಗಳ ವಿಶೇಷ ಪ್ರದರ್ಶನವು ನೋಡುಗರ ಮನಸೂರೆಗೊಂಡವು.
ವಾಹನಗಳಿಗೆ ಬದಲಿ ಮಾರ್ಗ:
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮಲ್ಲೇನಹಳ್ಳಿ, ಬದ್ರಿಕೊಪ್ಪಲು, ಗದ್ದೆಭೂವನಹಳ್ಳಿ, ಹೇಮಾವತಿ ಬಡಾವಣೆ, ಟಿ.ಬಿ.ಬಡಾವಣೆ, ಮೈಲಾರಪಟ್ಟಣ ಸೇರಿದಂತೆ ಹಲವೆಡೆ ಪೊಲೀಸರು ಹೆದ್ದಾರಿಗಳಿಗೆ ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ತಪಾಸಣೆ ಮಾಡುವ ಜೊತೆಗೆ ವಾಹನಗಳನ್ನು ಬದಲಿ ಮಾರ್ಗಗಳಲ್ಲಿ ಸಂಚರಿಸಲು ಸೂಚನೆ ನೀಡುತ್ತಿದ್ದರು. ಅಲ್ಲದೇ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಗೂಡ್ಸ್ ವಾಹನಗಳು ಪಟ್ಟಣದಿಂದ ಎರಡು ಮೂರು ಕಿ.ಮೀ ದೂರದಲ್ಲೇ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು.
ಸ್ವಯಂ ಪ್ರೇರಿತ ಬಂದ್:
ಗಣೇಶ ವಿಸರ್ಜನೆಯ ಮೆರವಣಿಗೆಗೆ ಸಾಥ್ ನೀಡುವ ಸಲುವಾಗಿ ಪಟ್ಟಣದಾದ್ಯಂತ ಅಂಗಡಿ ಮುಂಗಟ್ಟುಗಳು ಶುಕ್ರವಾರ ಬೆಳಿಗ್ಗೆಯಿಂದಲೇ ಸ್ವಯಂಪ್ರೇರಿತವಾಗಿ ಬಾಗಿಲು ಹಾಕಿ ಸಹಕರಿಸಿದರು. ಅಲ್ಲದೆ ಜಿಲ್ಲಾಧಿಕಾರಿ ಕುಮಾರ್ ಅವರ ಆದೇಶದಂತೆ ಶುಕ್ರವಾರದ ಸಂತೆ, ಎಲ್ಲಾ ವಿಧದ ಮದ್ಯದಂಗಡಿಗಳ ವಹಿವಾಟು ಸ್ಥಗಿತಗೊಂಡಿತ್ತು.
40 ಸಿಸಿಟಿವಿ ಕ್ಯಾಮೆರಾ ಕಣ್ಗಾವಲು:
ನಾಗಮಂಗಲದಲ್ಲಿ ಕೆಲ ದಿನಗಳ ಹಿಂದೆ ನಡೆದ ಗಲಭೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪಟ್ಟಣದಾದ್ಯಂತ ಸರ್ಪಗಾವಲು ಹಾಕಿದ್ದರು.
ಪ್ರಮುಖ ರಸ್ತೆಗಳು, ವೃತ್ತಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ 40 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. 15 ವಿಡಿಯೊ ಮತ್ತು 2 ಡ್ರೋನ್ ಕ್ಯಾಮೆರಾಗಳನ್ನೂ ಅಳವಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿ ತಿಮ್ಮಯ್ಯ ನೇತೃತ್ವದಲ್ಲಿ 6 ಡಿವೈಎಸ್‌ಪಿ, 15 ಜನ ಸಿಪಿಐ, 40 ಜನ ಪಿಎಸ್‌ಐ, 5 ಕೆಎಸ್‌ಆರ್‌ಪಿ ತುಕಡಿ, 55 ಡಿಆರ್, 450 ಜನ ಪೊಲೀಸ್ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಜನ ಗೃಹರಕ್ಷಕ ದಳದ ಸಿಬ್ಬಂದಿ ಒಳಗೊಂಡಂತೆ ಒಂದು ಸಾವಿರಕ್ಕೂ ಪೊಲೀಸರ ಕಣ್ಗಾವಲಿನಲ್ಲಿ ಮೆರವಣಿಗೆ ಸಾಗಿತು.
ಪೊಲೀಸ್–ಯುವಕರ ನಡುವೆ ಮಾತಿನ ಚಕಮಕಿ:
ಮೆರಣಿಗೆಯು ಮರಿಯಪ್ಪ ವೃತ್ತದಲ್ಲಿ ಸಾಗುವ ವೇಳೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರು ಹಿಂದೂ ಯುವಕರೊಟ್ಟಿಗೆ ಹೆಜ್ಜೆ ಹಾಕುತ್ತಿದ್ದರು. ನಂತರ ಅವರನ್ನು ಹಿಂದೂ ಯುವಕರು ಸುತ್ತುವರಿದು ಘೋಷಣೆ ಕೂಗಿದರು.
ಅಲ್ಲಿಗೆ ಬಂದ ಪೊಲೀಸರು ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸ್ ವಾಹನದಲ್ಲಿ ಬಿಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ. ಅವರು ಮೆರವಣಿಗೆಯಲ್ಲಿ ಇರಬೇಕು ಎಂದು ಪಟ್ಟುಹಿಡಿದರು. ಹಾಗಾಗಿ ಕೆಲಕಾಲ ಗೊಂದಲ ಉಂಟಾಯಿತು. ನಂತರ ಸ್ಥಳಕ್ಕೆ ಆಗಮಿಸಿದ ಎಸ್ಪಿ ಅವರು ಪರಿಸ್ಥಿತಿ ತಿಳಿಗೊಳಿಸಿ ಪುನೀತ್ ನಿಮ್ಮ ಜೊತೆಯೇ ಇರುತ್ತಾರೆ ಎಂದು ಹೇಳಿ ಸಮಾಧಾನಪಡಿಸಿ ಮೆರವಣಿಗೆಯು ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.