ADVERTISEMENT

ನಾಗಮಂಗಲ ಗಲಭೆ: ಶಾಂತಿ ನೆಲೆಸುತ್ತಿದೆ,ಯಾರನ್ನೂ ಬಂಧಿಸಬೇಡಿ; ಪೊಲೀಸರಿಗೆ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 15:42 IST
Last Updated 19 ಸೆಪ್ಟೆಂಬರ್ 2024, 15:42 IST
   

ನಾಗಮಂಗಲ (ಮಂಡ್ಯ ಜಿಲ್ಲೆ): ‘ಗಲಭೆಪೀಡಿತ ನಾಗಮಂಗಲದಲ್ಲಿ ಶಾಂತಿ ನೆಲೆಸುತ್ತಿದೆ. ಸಹಜ ವಾತಾವರಣ ಮರು ಸ್ಥಾಪನೆ ಆಗುತ್ತಿದೆ. ಹೀಗಾಗಿ ಯಾರನ್ನೂ ಬಂಧಿಸುವ ಕೆಲಸ ಮಾಡಬಾರದು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪೊಲೀಸರಿಗೆ ನಿರ್ದೇಶನ ನೀಡಿದರು.

ಪಟ್ಟಣದ ಬದ್ರಿಕೊಪ್ಪಲಿಗೆ ಗುರುವಾರ ಭೇಟಿ ನೀಡಿದ ಸಚಿವರು; ಗಣೇಶ ಮೂರ್ತಿ ಗಲಾಟೆ ಹಿನ್ನೆಲೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಆತಂಕಗೊಂಡಿರುವ ಪೋಷಕರಿಗೆ ಧೈರ್ಯ ತುಂಬಿದರು.

ಐಜಿಪಿ ಎಂ.ಬಿ. ಬೋರಲಿಂಗಯ್ಯ ಅವರೊಂದಿಗೆ ಸ್ಥಳದಿಂದಲೇ ದೂರವಾಣಿಯಲ್ಲಿ ಮಾತನಾಡಿದ ಸಚಿವರು, ‘ಪಟ್ಟಣದಲ್ಲಿ ಮೊದಲಿನ ವಾತಾವರಣವೇ ನೆಲೆಸಿದೆ. ಶಾಂತಿ ಸ್ಥಾಪನೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಯಾರನ್ನಾದರೂ ಬಂಧಿಸುವ ಕೆಲಸ ಆದರೆ, ಮತ್ತೆ ಅಶಾಂತಿ ಉಂಟಾಗುವ ಅಪಾಯವಿದೆ. ಆದ್ದರಿಂದ ಸೂಕ್ಷ್ಮವಾಗಿ ವರ್ತಿಸಿ ಹಾಗೂ ಯಾರನ್ನೂ ಬಂಧಿಸಬೇಡಿ’ ಎಂದು ಹೇಳಿದರು.

ADVERTISEMENT

‘ಯಾವುದೇ ತಪ್ಪು ಮಾಡದೇ ಜೈಲು ಪಾಲಾಗಿರುವ ಅಮಾಯಕರನ್ನು ಬಿಡುಗಡೆ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಅಂಜಬೇಡಿ. ನಿಮ್ಮ ಜೊತೆ ನಾವಿದ್ದೇವೆ’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹದಿನೇಳಕ್ಕೂ ಹೆಚ್ಚು ಕುಟುಂಬಸ್ಥರಿಗೆ ಹಣಕಾಸು ನೆರವು ನೀಡಿದರು.

ಗುಪ್ತದಳ ವೈಫಲ್ಯ: ಆರೋಪ

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಆ ಎಫ್ಐಆರ್ ನೋಡಿದರೆ ಗೊತ್ತಾಗುತ್ತದೆ ಗುಪ್ತದಳದ ವೈಫಲ್ಯ ಆಗಿದೆ ಎಂದು. ಗಲಭೆ ಮಾಡಲು ಪೋಸ್ಟ್ ಮಾಡಿದ್ದಾರೆ ಅಂತಾರೆ. ಇವರ ಎಫ್‌ಐಆರ್ ನೋಡಿದರೆ ನಗು ಬರುತ್ತದೆ. ಗೃಹ ಸಚಿವರು ಎಚ್ಚರಿಕೆ ವಹಿಸಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದರು.

ಚಲುವರಾಯಸ್ವಾಮಿಗೆ ತಿರುಗೇಟು

ನಾಗಮಂಗಲದಲ್ಲಿ ಸಂಸದರ ಕೆಲಸ ಏನು ಎಂದು ಸಚಿವ ಚಲುವರಾಯಸ್ವಾಮಿ ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಸಂಸದರು ಆರಾಮವಾಗಿ ದೆಹಲಿಯಲ್ಲಿ‌ ಇರಬೇಕಾ? ನಾನು ಈ ಕ್ಷೇತ್ರದ ಸಂಸದ. ಜನರು ಕಷ್ಟದಲ್ಲಿ ಇದ್ದಾಗ ನಾನು ಬರಲೇಬೇಕು. ಮಂಡ್ಯದಲ್ಲಿ ಮಾತ್ರ ಪ್ರವಾಸ ಮಾಡಿಲ್ಲ, ಇಡೀ ದೇಶವನ್ನೇ ಸುತ್ತುತ್ತಿದ್ದೇನೆ’ ಎಂದು ತಿರುಗೇಟು ಕೊಟ್ಟರು.

ನಾನು ರಾಜಕೀಯ ಮಾಡಲು ಬಂದಿಲ್ಲ. ನಾನು ಯಾವ ಕುಮ್ಮಕ್ಕು ಕೊಡಲು ಬಂದಿಲ್ಲ. ಗಲಾಟೆಗೆ ಕುಮ್ಮಕ್ಕು ಕೊಟ್ಟಿದ್ದು ಯಾರು? ಜೆಡಿಎಸ್‌ನವರು ಬೆಂಕಿ‌ ಹಚ್ಚಿ ಎಂದು ಹೇಳಿದರಾ? ಪೊಲೀಸರು ಇದ್ದಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.