ನಾಗಮಂಗಲ: ಗಣೇಶ ಮೆರವಣಿಗೆಯಲ್ಲಿ ಉಂಟಾದ ಗಲಭೆಯ ಹಿನ್ನೆಲೆಯಲ್ಲಿ ಬಂಧಿತರಾಗಿ ಸಂಕಷ್ಟಕ್ಕೆ ಸಿಲುಕಿರುವ ಬದರಿಕೊಪ್ಪಲಿನ ಗಜಪಡೆ ಸೇವಾ ಸಮಿತಿಯ ಯುವಕರು, ಕುಟುಂಬದವರಿಗೆ ತಾಲ್ಲೂಕಿನ ಕದಬಹಳ್ಳಿಯ ರೈತರು ಆರ್ಥಿಕ ಸಹಾಯ ನೀಡಿದ್ದಾರೆ.
ಕದಬಹಳ್ಳಿ ವ್ಯಾಪ್ತಿಯ ಹತ್ತಾರು ಹಳ್ಳಿಗಳ ರೈತರು ಸಾರ್ವಜನಿಕರಿಂದ ಧನ ಸಂಗ್ರಹಿಸಿ ಶುಕ್ರವಾರ ಬದ್ರಿಕೊಪ್ಪಲಿನ ಮನೆಗಳಿಗೆ ಭೇಟಿ ನೀಡಿ ಬಂಧಿತ ಯುವಕರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
‘ಆಕಸ್ಮಿಕವಾಗಿ ಇಂತಹ ದುರ್ಘಟನೆ ಜರುಗಿದೆ. ಆದ್ದರಿಂದ ಗ್ರಾಮದ ಬಡ ಕುಟುಂಬಗಳ ಬೆಂಬಲಕ್ಕೆ ಎಲ್ಲರೂ ಇದ್ದೇವೆ’ ಎಂದು ಹೇಳಿದರು.
‘ಗಲಭೆಯಲ್ಲಿ ಬಂಧಿತರಾಗಿರುವ ಮತ್ತು ಭಯದಿಂದ ಊರು ಬಿಟ್ಟಿರುವ ಸುಮಾರು 20 ಕುಟುಂಬಗಳ ನಿರ್ವಹಣೆಗೆ ತಲಾ ಕುಟುಂಬಕ್ಕೆ ₹2 ಸಾವಿರ ಆರ್ಥಿಕ ನೆರವು ನೀಡಿದರು. ಅಲ್ಲದೇ ಕುಟುಂಬದ ಸದಸ್ಯರು ಭಯಪಡುವುದು ಬೇಡ, ಎಲ್ಲರೂ ನಿಮ್ಮೊಂದಿಗೆ ನಿಲ್ಲುತ್ತೇವೆ’ ಎಂದು ಕುಟುಂಬಸ್ಥರಿಗೆ ಆತ್ಮವಿಶ್ವಾಸ ತುಂಬಿದರು.
ರೈತ ಮುಖಂಡರಾದ ಧನಂಜಯ ಹಡೆನಹಳ್ಳಿ, ಯರಗನಹಳ್ಳಿ ನಾಗರಾಜು, ಕದಬಹಳ್ಳಿ ಮಂಜು, ಪರಮೇಶ್ವರಾಚಾರ್, ಸೋಮಣ್ಣ, ನಾಗರಾಜು, ಧನಂಜಯ, ಅಶೋಕ್ ಮತ್ತು ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.