ADVERTISEMENT

ನಾಗಮಂಗಲ ಗಲಭೆ: ₹ 76 ಲಕ್ಷ ಪರಿಹಾರ ವಿತರಿಸಿದ ಸಚಿವ ಎನ್‌.ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 13:43 IST
Last Updated 22 ನವೆಂಬರ್ 2024, 13:43 IST
   

ನಾಗಮಂಗಲ (ಮಂಡ್ಯ ಜಿಲ್ಲೆ): ಗಣಪತಿ ಮೂರ್ತಿ ವಿಸರ್ಜನೆ ವೇಳೆ ನಡೆದಿದ್ದ ಗಲಭೆಯಲ್ಲಿ ನಷ್ಟ ಅನುಭವಿಸಿದ್ದ ಅಂಗಡಿ ಮಾಲೀಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಶುಕ್ರವಾರ ಪಟ್ಟಣದ ತಾಲ್ಲೂಕು ಆಡಳಿಸೌಧದ ಆವರಣದಲ್ಲಿ ಒಟ್ಟು ₹76.45 ಲಕ್ಷ ಪರಿಹಾರ ವಿತರಿಸಿದರು.

ಗಲಭೆಯಲ್ಲಿ ಹಾನಿಗೊಳಗಾಗಿದ್ದ ಕಟ್ಟಡ ಮಾಲೀಕರಿಗೆ ₹48.95 ಲಕ್ಷ ಹಾಗೂ ವ್ಯಾಪಾರಸ್ಥರಿಗೆ ₹27.50 ಲಕ್ಷ ಪರಿಹಾರ ವಿತರಿಸಿದರು. ಸರ್ಕಾರದಿಂದ ನೀಡಲಾದ ಪರಿಹಾರದ ಜೊತೆಗೆ 42 ಜನರಿಗೂ ವೈಯಕ್ತಿಕವಾಗಿ ₹10 ಸಾವಿರ ನಗದನ್ನು ಸಚಿವರು ನೀಡಿದರು.

ಚಲುವರಾಯಸ್ವಾಮಿ ಮಾತನಾಡಿ, 'ಈ ಘಟನೆಯಿಂದ ಕೆಲವರು ಖುಷಿ ಪಟ್ಟಿರಬಹುದು, ಇನ್ನು ಕೆಲವರು ಆ ಘಟನೆಗೆ ಪ್ರೋತ್ಸಾಹ ನೀಡಿರಬಹುದು, ಮತ್ತೆ ಕೆಲವರು ಅದನ್ನು ಪ್ರಾಮಾಣಿಕವಾಗಿ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಈ ರೀತಿಯ ಘಟನೆ ತಾಲ್ಲೂಕಿನ ಇತಿಹಾಸದಲ್ಲಿ ನಡೆದಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಸಂದರ್ಭ ಡಿವೈಎಸ್‌ಪಿ ಮತ್ತು ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಸ್ಥಳದಲ್ಲಿ ಇರಲಿಲ್ಲವೆಂದು ಸರ್ಕಾರ ಅವರಿಬ್ಬರನ್ನು ಅಮಾನತು ಮಾಡಿದೆ' ಎಂದು ತಿಳಿಸಿದರು.

ADVERTISEMENT

ಈ ಹಿಂದೆ ಈ ರೀತಿಯ ಘಟನೆಗಳು ನಡೆದಾಗ ಕೇವಲ ಶೇ 10ರಷ್ಟು ನಷ್ಟವನ್ನು ಹಿಂದಿನ ಸರ್ಕಾರಗಳು ಭರಿಸಿವೆ. ಆದರೆ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡು ಶಕ್ತಿಮೀರಿ ಪರಿಹಾರ ಕೊಡಿಸುವಲ್ಲಿ ಸಫಲನಾಗಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷಾ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ತಹಶೀಲ್ದಾರ್ ಆದರ್ಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.