ADVERTISEMENT

ನಾಗಮಂಗಲ ಗಲಭೆ | ಬೆಂಕಿ ಹಚ್ಚಿದ್ದು ಯಾರೆಂದು ಗೊತ್ತಿದೆ: ಸಚಿವ ಚಲುವರಾಯಸ್ವಾಮಿ

ಪ್ರಕರಣದಿಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹೊರಕ್ಕೆ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 20:24 IST
Last Updated 14 ಸೆಪ್ಟೆಂಬರ್ 2024, 20:24 IST
ಎನ್‌.ಚಲುವರಾಯಸ್ವಾಮಿ 
ಎನ್‌.ಚಲುವರಾಯಸ್ವಾಮಿ    

ನಾಗಮಂಗಲ (ಮಂಡ್ಯ ಜಿಲ್ಲೆ): ‘ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಯಾರು ಮೊದಲು ಬೆಂಕಿ ಹಚ್ಚಿದ್ದಾರೆಂಬ ಮಾಹಿತಿ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶನಿವಾರ ಇಲ್ಲಿ ತಿಳಿಸಿದರು.

ಇಲ್ಲಿ ಶಾಂತಿ ಸಭೆಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮೊದಲು ಕಾನೂನು– ಸುವ್ಯವಸ್ಥೆ ಸರಿಯಾಗಬೇಕು. ಅಗತ್ಯಬಿದ್ದರೆ ವಿಶೇಷ ತನಿಖೆ ನಡೆಯಲಿದೆ. ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ಚನ್ನಪಟ್ಟಣದ ಉಪ ಚುನಾವಣೆಗಾಗಿ ಗಲಭೆ ಸೃಷ್ಟಿಸಲಾಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸಿಎಂ ಇಳಿಸಲು ಕುತಂತ್ರ ಅನ್ನೋದೂ ಸರಿಯಲ್ಲ. ಎರಡು ಬಾರಿ ಸಿಎಂ ಆಗಿದ್ದ ಅವರಿಗೆ ನಾನು ಉತ್ತರಿಸಬೇಕೆ? ನಾಗಮಂಗಲಕ್ಕೆ ಬಂದು ಜನರಿಗೆ ಏನು ಸಂದೇಶ ಕೊಟ್ಟಿದ್ದಾರೆ? ಅವರಿಗೆ ಪ್ರತಿಕ್ರಿಯಿಸದಿರುವುದೇ ಉತ್ತಮ’ ಎಂದರು. 

ADVERTISEMENT

‘ಗಲಭೆಗೆ ಸರ್ಕಾರವೇ ಕಾರಣ ಎಂದು ಕುಮಾರಸ್ವಾಮಿ, ಮತ್ತು ಬಿಜೆಪಿಯವರೂ ಹೇಳಿದ್ದಾರೆ. ಹೊರಗಿನವರು ಏನೇ ಹೇಳಿದರೂ ನನಗೆ ನಾಗಮಂಗಲ ಜನರೇ ಮುಖ್ಯ’ ಎಂದರು.

ಗಲಭೆ ಪ್ರಕರಣದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಅವರನ್ನು ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿ, ‘ಗಲಭೆಯಲ್ಲಿ ಅವರು ಭಾಗವಹಿಸಿರಲಿಲ್ಲ‘ ಎಂದು ಸಮರ್ಥಿಸಿಕೊಂಡರು.

‘ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ನೋಡಿಕೊಂಡು ಬಂಧಿಸಿದರೆ 500 ಜನ ಆಗುತ್ತಾರೆ. ಮೆರವಣಿಗೆ ‌ತಂಡದಲ್ಲಿ ರಾಜೇಶ್ ಪುತ್ರ ಇದ್ದರೆಂದು ಆತನನ್ನು ಬಂಧಿಸಿದ್ದಾರೆ. ತಪ್ಪು ಮಾಡಿದ ಯಾರನ್ನೂ‌ ರಕ್ಷಿಸಲ್ಲ. ಕೆಲವು ಅಮಾಯಕರನ್ನು  ಬಂಧಿಸಿದ್ದು, ಆರೋಪಪಟ್ಟಿಯಿಂದ ಕೈಬಿಡಲು ಸೂಚಿಸಿರುವೆ’ ಎಂದು ಸಮರ್ಥಿಸಿಕೊಂಡರು.

ತಾಯಿ ಆಕ್ರೋಶ; ‘ಗಲಭೆಯ ವೇಳೆ ಮಗ ಶ್ರೀನಿವಾಸ್‌ ಸ್ಥಳದಲ್ಲಿಲ್ಲದಿದ್ದರೂ ಬಂಧಿಸಲಾಗಿದೆ’ ಎಂದು ಆತನ ತಾಯಿ ಕೆಂಪಮ್ಮ, ಸಚಿವರ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದರು.

‘ಅಂದು ಸಂಜೆ 6.45 ರಿಂದ ರಾತ್ರಿ 9.28ರವರೆಗೆ ಹೊಸ ಮನೆ ಬಳಿಯೇ ಇದ್ದ. ಆದರೂ ರಾತ್ರಿ‌ 2 ಗಂಟೆಗೆ ಪೊಲೀಸರು ಬಂದು‌ ಹೊಡೆಯುತ್ತಲೇ ಎಳೆದೊಯ್ದರು. ಅವನು ಅಲ್ಲಿರಲಿಲ್ಲ ಎಂದು ಎಷ್ಟೇ ಹೇಳಿದರೂ ಬಿಡದೇ ನನ್ನನ್ನು ಹೆದರಿಸಿ‌ದರು’ ಎಂದು ಕಣ್ಣೀರಿಟ್ಟರು.

‘ಗಲಾಟೆ ಸಮಯದಲ್ಲಿನ ವಿಡಿಯೊದಲ್ಲಿ ಇಲ್ಲದಿದ್ದರೆ ಮನೆಗೆ ಕಳಿಸುವುದಾಗಿ ಹೇಳಿದ್ದರು. ವಿಡಿಯೊ ನೋಡಿದ ನಂತರವೂ ಬಿಟ್ಟಿಲ್ಲ. ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರನ್ನು ಓಲೈಸುತ್ತಾರೆ. ತಪ್ಪು ಮಾಡಿದ್ದರೆ ನನ್ನನ್ನೂ ಬಂಧಿಸಲಿ’ ಎಂದರು.

ಪತ್ರಕರ್ತರು ಹೊರ‌ಗೆ: ಶಾಂತಿ ಸಭೆಗೆ ಪತ್ರಕರ್ತರಿಗೆ ಅವಕಾಶ ನಿರಾಕರಿಸಲಾಗಿತ್ತು. ‘ಗೌರಿ–ಗಣೇಶ ಹಬ್ಬ, ಈದ್ ಮಿಲಾದ್ ಸಮಿತಿ ರಚಿಸಿ ಮಾರ್ಗಸೂಚಿ ರೂಪಿಸಬೇಕು. ರೂಟ್ ಮ್ಯಾಪ್ ಸಿದ್ಧಪಡಿಸಿಯೇ ಮೆರವಣಿಗೆಗೆ ಅನುಮತಿ ನೀಡಬೇಕು’ ಎಂದು ಸಮುದಾಯಗಳ ಮುಖಂಡರು ಸಭೆಯಲ್ಲಿ ಸಲಹೆ ನೀಡಿದರು.

ಗಲಭೆಯಲ್ಲಿ ನಷ್ಟ ಹೊಂದಿದವರಿಗೆ ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ನಾಗಮಂಗಲ ಘಟನೆಗೆ ಸಂಬಂಧಿಸಿ ಪರಿಹಾರ ಕೊಡಿಸಲು ಮುಖ್ಯಮಂತ್ರಿಯನ್ನು ಒಪ್ಪಿಸಿದ್ದೇನೆ.
–ಎನ್.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ
ಸಹಜಸ್ಥಿತಿಗೆ ಜನಜೀವನ
ಪಟ್ಟಣದಲ್ಲಿ ಶನಿವಾರ ಜನಜೀವನ ಸಹಜ ಸ್ಥಿತಿಗೆ ಮರಳಿತು. ಅಂಗಡಿಗಳು ತೆರೆದಿದ್ದವು. ಬಸ್‌ಗಳು ಸಂಚರಿಸಿದವು. ಗಣಪತಿ ಮೂರ್ತಿ ಪ್ರತಿಷ್ಠಾಪಿಸಿರುವ ಪೆಂಡಾಲ್‌ಗಳ ಬಳಿ ಹಾಗೂ ಪ್ರಮುಖ ವೃತ್ತಗಳು ದೇವಸ್ಥಾನ ಮಸೀದಿ ದರ್ಗಾಗಳ ಬಳಿ ಪೊಲೀಸ್‌ ಭದ್ರತೆ ಮುಂದುವರಿದಿದೆ.  ಗ್ರಾಮೀಣ ಭಾಗದ ಜನರು ಹಿಂಜರಿಕೆ ಬಿಟ್ಟು ಪಟ್ಟಣಕ್ಕೆ ಬಂದಿದ್ದರು. ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯೂ ಹೆಚ್ಚಿತ್ತು. ಮಾರಾಟಕ್ಕೆ ನಿಷೇಧವಿರುವುದರಿಂದ ಮದ್ಯದಂಗಡಿಗಳು ಮುಚ್ಚಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.