ಮಂಡ್ಯ: ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಸೆ.11ರಂದು ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭ ನಡೆದಿದ್ದ ಕೋಮು ಗಲಭೆಯಲ್ಲಿ ಹಾನಿಗೊಳಗಾದ ಅಂಗಡಿ ಮಾಲೀಕರು ಮತ್ತು ಬಾಡಿಗೆದಾರರಿಗೆ ನಷ್ಟ ಪರಿಹಾರ ನೀಡಲು ರಾಜ್ಯ ಸರ್ಕಾರ ₹76.45 ಲಕ್ಷ ಮೊತ್ತವನ್ನು ಮಂಜೂರು ಮಾಡಿದೆ.
ಮಂಡ್ಯ ಜಿಲ್ಲಾಧಿಕಾರಿಯು ₹24.55 ಲಕ್ಷವನ್ನು ‘ಲೆಕ್ಕಶೀರ್ಷಿಕೆಯಡಿ ಲಭ್ಯವಿರುವ ಅನುದಾನ’ದಲ್ಲಿ ವಿತರಿಸಲು ಮಂಜೂರಾತಿ ನೀಡಲಾಗಿದೆ ಹಾಗೂ ಬಾಕಿ ₹51.90 ಲಕ್ಷವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಬಿಡುಗಡೆಗೊಳಿಸಲು ಅನುಮೋದನೆ ನೀಡಲಾಗಿದೆ. ಈ ಅನುದಾನ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸುವಂತೆಯೂ ಜಿಲ್ಲಾಧಿಕಾರಿಗೆ ಒಳಾಡಳಿತ ಇಲಾಖೆಯ (ಕಾನೂನು ಮತ್ತು ಸುವ್ಯವಸ್ಥೆ) ಅಧೀನ ಕಾರ್ಯದರ್ಶಿ ಸೂಚಿಸಿದ್ದಾರೆ.
‘ಗಲಭೆಯಲ್ಲಿ 26 ಕಟ್ಟಡಗಳಿಗೆ ಹಾನಿಯಾಗಿದ್ದು, ಅಂದಾಜು ನಷ್ಟ ₹1.38 ಕೋಟಿ ಹಾಗೂ ಅಂಗಡಿಗಳಲ್ಲಿನ ಸರಕು ಸಾಮಗ್ರಿಗಳಿಗೆ ಹಾನಿಯಾದ ಅಂದಾಜು ನಷ್ಟ ₹1.18 ಕೋಟಿ ಸೇರಿದಂತೆ ಒಟ್ಟು ₹2.66 ಕೋಟಿ ನಷ್ಟವಾಗಿದೆ’ ಎಂದು ಜಿಲ್ಲಾಡಳಿತವು ಸರ್ಕಾರಕ್ಕೆ ಸೆ.14ರಂದು ವರದಿ ಸಲ್ಲಿಸಿತ್ತು. ಎಸ್ಪಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಳಗೊಂಡ ತಂಡವು ಹಾನಿಯ ವಿವರವನ್ನು ಕಲೆ ಹಾಕಿ, ಮೌಲ್ಯಮಾಪನ ವರದಿ ಸಿದ್ಧಪಡಿಸಿತ್ತು.
ಪರಿಹಾರ ಮೊತ್ತದ ವಿವರ: ಮತೀಯ ಗಲಭೆ, ನಾಗರಿಕ ಗಲಭೆ, ಭಯೋತ್ಪಾದಕ ದಾಳಿ, ನಕ್ಸಲ್ ಅಥವಾ ಇತರ ಗಲಭೆಗಳಲ್ಲಿ ನೊಂದ ಸಂತ್ರಸ್ತರಿಗೆ ನೀಡುವ ಪರಿಹಾರವನ್ನು ಹಾಗೂ ಸ್ಥಿರಾಸ್ತಿ–ಚರಾಸ್ತಿಗಳಿಗೆ ಹಾನಿಯಾದಾಗ ನೀಡಲಾಗುವ ಪರಿಹಾರದ ಮೊತ್ತವನ್ನು ನಿಗದಿಪಡಿಸಲಾಗಿದೆ.
‘ವ್ಯಕ್ತಿ ಮೃತಪಟ್ಟರೆ ₹5 ಲಕ್ಷ, ವ್ಯಕ್ತಿ ಶಾಶ್ವತ ಅಂಗವಿಕಲನಾದರೆ ₹2 ಲಕ್ಷ, ತಾತ್ಕಾಲಿಕ ಅಂಗವಿಕಲನಾದರೆ ₹1 ಲಕ್ಷ, ತೀವ್ರ ಗಾಯಗೊಂಡರೆ ₹50 ಸಾವಿರ, ಉತ್ಕೃಷ್ಟ ಶಾಶ್ವತ ಕಟ್ಟಡ ನಾಶಗೊಂಡರೆ ₹1 ಲಕ್ಷ, ಕಚ್ಚಾ ಅಥವಾ ಪಕ್ಕಾ ಮನೆ ನಾಶಗೊಂಡರೆ ₹50 ಸಾವಿರ ಹಾಗೂ ವಾಹನ, ಬೆಳೆ, ಗೃಹೋಪಯೋಗಿ ಉಪಕರಣ, ಅಂಗಡಿ, ಚರಾಸ್ತಿ ನಾಶಗೊಂಡ ಸಂದರ್ಭದಲ್ಲಿ ₹15 ಸಾವಿರದಿಂದ ₹30 ಸಾವಿರದವರೆಗೆ ಪರಿಹಾರ ನೀಡಬಹುದು’ ಎಂಬ ಮಾರ್ಗಸೂಚಿ ಇದೆ ಎನ್ನುತ್ತಾರೆ ಅಧಿಕಾರಿಗಳು.
ಗಲಭೆಯಲ್ಲಿ ನಷ್ಟ ಅನುಭವಿಸಿರುವ ಸಂತ್ರಸ್ತರ ಬ್ಯಾಂಕ್ ಖಾತೆ ವಿವರ ಮತ್ತು ದಾಖಲಾತಿ ಸಂಗ್ರಹಿಸಿ ನೇರವಾಗಿ ಪರಿಹಾರ ಮೊತ್ತವನ್ನು ಶೀಘ್ರದಲ್ಲೇ ಪಾವತಿಸುತ್ತೇವೆಕುಮಾರ ಜಿಲ್ಲಾಧಿಕಾರಿ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.