ಚನ್ನಪಟ್ಟಣ: ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರ ಕನ್ನಡ ಚಿತ್ರರಂಗದ ಇತಿಹಾಸ ಮತ್ತು ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದೆ ಎಂದು ಪುಟ್ಟಣ್ಣ ಪುತ್ರಿ ತ್ರಿವೇಣಿ ಕಣಗಾಲ್ ಅಭಿಪ್ರಾಯಪಟ್ಟರು.
‘ನಾಗರಹಾವು’ ಚಿತ್ರ ತೆರೆ ಕಂಡು 50 ವರ್ಷ ಪೂರೈಸಿದ ಸ್ಮರಣಾರ್ಥ ನಗರದ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ಸುಸ್ವರ ಸಂಗೀತ ತಂಡ ಹಾಗೂ ನಗರದ ಡಾ.ನಾಗರಾಜ್ ಸಾಹಿತ್ಯ ವೇದಿಕೆ ಈ ಕಾರ್ಯಕ್ರಮ ಆಯೋಜಿಸಿದ್ದವು
ಪುಟ್ಟಣ್ಣ ಕಣಗಾಲ್ ಅವರು ಕಲಾವಿದರಲ್ಲಿ ಅಡಗಿರುವ ಪ್ರತಿಭೆಯನ್ನು ಹುಡುಕಿ ಹೊರತೆಗೆಯುವ ಜೊತೆಗೆ ಕಲಾವಿದರಲ್ಲಿ ಶಿಸ್ತು, ಸಂಯಮ ಕಲಿಸುತ್ತಿದ್ದರು. ನಾಗರಹಾವು ಚಿತ್ರ ನಿರ್ಮಾಣವಾಗಿ 50 ವರ್ಷ ಕಳೆದರೂ ಜನತೆ ಅದೇ ಉತ್ಸಾಹ, ಅಭಿಮಾನದಿಂದ ಚಿತ್ರ ವೀಕ್ಷಣೆ ಮಾಡುತ್ತಾರೆ ಎಂದರು.
‘ಈ ಚಿತ್ರ ಮತ್ತು ಚಿತ್ರದಲ್ಲಿ ನಟಿಸಿದ ನಟರು ಅಜರಾಮರವಾಗಿರುತ್ತಾರೆ ಎಂಬ ಪುಟ್ಟಣ್ಣ ಅವರ ಭರವಸೆ ಸತ್ಯವಾಗಿದೆ. ನಾಗರಹಾವು ಹೆಸರಿನ ಎಷ್ಟೇ ಚಿತ್ರ ಬಂದರೂ ಮೂಲ ಚಿತ್ರಕ್ಕೆ ಸಮನಾಗುವುದಿಲ್ಲ. ರಾಮಾಚಾರಿ ಹೆಸರು ಕೇಳಿದೊಡನೆ ಇಂದಿಗೂ ವಿಷ್ಣುವರ್ಧನ್ ನೆನಪಾಗುತ್ತಾರೆ’ ಎಂದು ಕಾರ್ಯಕ್ರಮದ ರೂವಾರಿ ಗೋಪಾಲಕೃಷ್ಣ ಬಣ್ಣಿಸಿದರು.
ನಾಗರಾಜ್ ಸಾಹಿತ್ಯ ವೇದಿಕೆಯ ಸಂಸ್ಥಾಪಕಿ ಡಾ. ರಾಜಶ್ರೀ ಮಾತನಾಡಿ, ಆಧುನಿಕತೆ ಬೆಳೆದಂತೆ ಪಾರಂಪರಿಕ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಲೆಯ ಬಗ್ಗೆ ಹಾಗೂ ಹಳೆ ಚಲನಚಿತ್ರಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ಪುಟ್ಟಣ್ಣ ಕಣಗಾಲ್ ಅವರ ಪತ್ನಿ ನಾಗಲಕ್ಷ್ಮಿ ಕಣಗಾಲ್, ಎಲ್ಐಸಿ ಅಭಿವೃದ್ಧಿ ಅಧಿಕಾರಿ ರವಿಶಂಕರ್, ಕಲಾದೇಗುಲ ಶ್ರೀನಿವಾಸ್, ಭಾಗವಹಿಸಿದ್ದರು.
ನೃತ್ಯ ಕಲಾವಿದೆ ನಿಮಿಷ ಶ್ರೀಹರಿ ನೃತ್ಯ ಪ್ರದರ್ಶನ ನೀಡಿದರು. ಸುಸ್ವರ ಸಂಗೀತ ಶಾಲೆಯ ಗಾಯಕರಾದ ಜಯಸಿಂಹ, ಉದಯ್ ಅಂಕೋಲ, ಸ್ವಪ್ನ ಮಂಜು, ಗೌರಿ ದೇವ್, ಆಶಾಲತಾ ಅವರು ಡಾ. ವಿಷ್ಣುವರ್ಧನ್ ನಟಿಸಿರುವ ಚಿತ್ರದ ಗೀತೆಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.