ಮಂಡ್ಯ: ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಜಿಲ್ಲಾ ಆರ್ಯ ಈಡಿಗರ ಸಂಘದ ಆವರಣದಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಸಭಾಭವನ ನಿರ್ಮಾಣ ಕಾಮಗಾರಿಗೆ ಸೋಲೂರು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತನಂದಾ ಸ್ವಾಮೀಜಿ, ನಿಟ್ಟೂರು ಶ್ರೀ ನಾರಾಯಣಗುರು ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾನಂದ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಿದರು.
ವಿಖ್ಯಾತನಂದಾ ಸ್ವಾಮೀಜಿ ಮಾತನಾಡಿ ‘ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಾರಾಯಣ ಗುರು ಅವರು ಪ್ರಪ್ರಥಮ ಬಾರಿ ಸೋಲೂರಿನ ಅರಣ್ಯ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಮಾಡಿದರು. ಇಂದಿಗೂ ಈ ಪುಣ್ಯಕ್ಷೇತ್ರಕ್ಕೆ ಸಾವಿರಾರು ಭಕ್ತರು ನಿತ್ಯವೂ ಭೇಟಿ ನೀಡುತ್ತಾರೆ’ ಎಂದರು.
‘ಮಂಡ್ಯ ಜಿಲ್ಲೆಯಲ್ಲಿ ಈಡಿಗ ಸಮುದಾಯವು ಅಭಿವೃದ್ದಿ ಹೊಂದುತ್ತಿದೆ. ಶೈಕ್ಷಣಿಕವಾಗಿ ಸಮಾಜ ಉತ್ತಮವಾಗಿ ಬೆಳೆಯಬೇಕು. ಶ್ರೀನಾರಾಯಣಗುರು ಹೆಸರಿನಲ್ಲಿ ಸಭಾ ಭವನ ನಿರ್ಮಾಣವಾಗಿತ್ತಿರುವುದು ಸಂತೋಷದ ವಿಷಯವಾಗಿದೆ’ ಎಂದರು.
ರೇಣುಕಾನಂದ ಸ್ವಾಮೀಜಿ ಮಾತನಾಡಿ ‘ಯಾವುದೇ ಸಮುದಾಯ ಶೈಕ್ಷಣಿಕವಾಗಿ ಮೇಲೆ ಬರಬೇಕು, ಆರ್ಥಿಕ ಮಟ್ಟ ಸುಧಾರಣೆಯಾಗಬೇಕು, ಸಂಘ ಸಂಸ್ಥೆಗಳ ಸಮುದಾಯ ಭವನಗಳು ಬಡವರತ್ತ ಮುಖಮಾಡಬೇಕು. ಮಂಡ್ಯ ಜಿಲ್ಲೆಯಲ್ಲಿ ಸಮಾಜದ 20 ಸಾವಿರ ಜನಸಂಖ್ಯೆ ಇದ್ದು ಕನಿಷ್ಠ 2 ಸಾವಿರ ಜನರು ಸಮಾಜದ ಸಭೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದರು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ತಿಮ್ಮೇಗೌಡ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಪೋತರಾಜ್, ಸಮಿತಿ ಸದಸ್ಯೆ ಸೌಮ್ಯ ಶ್ರೀನಿವಾಸ್, ಎನ್.ಎಸ್ .ವಸಂತ್ ಕುಮಾರ್, ಎಂ.ಸಿ.ಸತ್ಯನಾಥ್, ಅಪ್ಪಾಜಿಗೌಡ, ಎಚ್.ದಾಸೇಗೌಡ, ಎಂ.ಪಿ.ಅರುಣ್ ಕುಮಾರ್, ಎಂ.ಬಿ.ಪುಟ್ಟಸ್ವಾಮಿ, ಜಿ.ಸಿ.ರಾಜ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.