ADVERTISEMENT

ಜು.13 ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ

mnd

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:19 IST
Last Updated 7 ಜುಲೈ 2024, 14:19 IST
ಆನಂದ್‌
ಆನಂದ್‌   

ಮಂಡ್ಯ: ರಾಜಿ ಮಾಡಿಕೊಳ್ಳಬಹುದಾದಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಜುಲೈ 13ರಂದು ಬೆಳಿಗ್ಗೆ 10ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಆನಂದ್ ಹೇಳಿದರು.

‘ಪ್ರಕರಣಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಪೂರ್ವಭಾವಿ ಬೈಠಕ್‌ಗಳನ್ನು ನಡೆಸಿದ್ದು, ಆಸ್ತಿ ವಿವಾದ ಒಳಗೊಂಡಂತೆ ಸಿವಿಲ್ ವ್ಯಾಜ್ಯಗಳು, ಮೋಟಾರು ವಾಹನಗಳ ಪ್ರಕರಣಗಳು, ರಾಜಿ ಆಗಬಹುದಾದಂತಹ ಕ್ರಿಮಿನಲ್ ಪ್ರಕರಣಗಳು ಮತ್ತು ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡು ಆಯಾ ನ್ಯಾಯಾಲಯಗಳಲ್ಲಿ ಜನತಾ ನ್ಯಾಯಾಲಯಗಳನ್ನು ಮಾಡಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುವುದು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಜೊತೆಗೆ ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ ವ್ಯಾಜ್ಯಪೂರ್ವ ಪ್ರಕರಣಗಳು(ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಕಾರ್ಮಿಕ ವಿವಾದ ಪ್ರಕರಣಗಳು) ಇಂತಹ ಪ್ರಕರಣಗಳಿಗೆ ಉಭಯ ಪಕ್ಷಗಾರರಿಗೆ ನೋಟಿಸ್ ನೀಡಿ ಕರೆಸಿ ಪ್ರಾಧಿಕಾರದಿಂದ ಪೂರ್ವಭಾವಿ ಬೈಠಕ್ ನಡೆಸಿ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು’ ಎಂದರು.

ADVERTISEMENT

ಕೆಲವು ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ವಕೀಲರ ಮುಖಾಂತರ ಅಥವಾ ಖುದ್ದಾಗಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಪ್ರಕರಣವನ್ನು ರಾಜಿಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

...........

ಅಂಗನವಾಡಿಗಳ ಅಭಿವೃದ್ಧಿಗೆ ಕೈಜೋಡಿಸಿ

ಮಂಡ್ಯ: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯಾಗಬೇಕು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಸಲಹೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ ‘ಖಾಸಗಿ ಪ್ಲೇ ಹೋಂ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಹೋಲಿಕೆ ಮಾಡಿದರೆ ಸರ್ಕಾರಿ ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಜಿಲ್ಲೆಯಲ್ಲಿ ಹೆಚ್ಚಾಗಿ ಕೃಷಿಕರು ಇರುವುದರಿಂದ ಮಕ್ಕಳನ್ನು ಸರ್ಕಾರಿ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುತ್ತಾರೆ‌. ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯಾಗಬೇಕು ಮಕ್ಕಳಿಗೆ ಪೌಷ್ಟಿಕ ಆಹಾರ ಸ್ವಚ್ಛ ವಾತವರಣ ಸೃಷ್ಟಿಸಬೇಕು’ ಎಂದರು. ‘ಜಿಲ್ಲೆಯಲ್ಲಿ ಒಟ್ಟು 2558 ಅಂಗನವಾಡಿಗಳಿದ್ದು ಅದರಲ್ಲಿ ಸ್ವಂತ ಕಟ್ಟಡ 1769 ಪಂಚಾಯತಿ ಕಟ್ಟಡ 31 ಸಮುದಾಯ ಕಟ್ಟಡ 66 ಬಾಡಿಗೆ ಕಟ್ಟಡ 222 ಶಾಲಾ ಕಟ್ಟಡ 311 ಬಾಡಿಗೆರಹಿತ ಕಟ್ಟಡಗಳು 157 ಕಾರ್ಯನಿರ್ವಹಿಸುತ್ತಿವೆ’ ಎಂದು ತಿಳಿಸಿದರು. ‘ಕಳೆದ ಜೂನ್ ತಿಂಗಳಿನಿಂದ ಮಂಡ್ಯ ಜಿಲ್ಲೆಯ 20 ಅಂಗನವಾಡಿಗಳಿಗೆ ಭೇಟಿ ನೀಡಿದ್ದು ಅವುಗಳಲ್ಲಿ ಕೆಲವೊಂದು ಸ್ವಂತ ಕಟ್ಟಡ ಬಾಡಿಗೆ ಕಟ್ಟಡ ಹಾಗೂ ಕೆಲವೊಂದು ಸರ್ಕಾರಿ ಶಾಲಾ ಕಾಂಪೌಂಡ್‌ಗಳಲ್ಲಿ ನಡೆಯುತ್ತಿವೆ. ಕೆಲವು ಅಂಗನವಾಡಿಗಳಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲು ಸುಸಜ್ಜಿತ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದ್ದು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗಿದೆ’ ಎಂದು ವಿವರಿಸಿದರು. ಆಸ್ತಿ ತೆರಿಗೆ ಪಾವತಿಸಿ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2024-25ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಏಪ್ರಿಲ್ ತಿಂಗಳಲ್ಲಿ ನೀಡಲಾಗುತ್ತಿರುವ ಶೇ5ರಷ್ಟು ರಿಯಾಯಿತಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಸಾರ್ವಜನಿಕರು ತಪ್ಪದೇ ತಮ್ಮ ಆಸ್ತಿ ತೆರಿಗೆ ಪಾವತಿಸಿ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.