ಮಂಡ್ಯ: ‘ರಾಜ್ಯದಾದ್ಯಂತ ಸೆ. 9 ರಂದು ರಾಷ್ಟ್ರೀಯ ಲೋಕ್ ಅದಾಲಯತ್ ನಡೆಯಲಿದ್ದು ರಾಜಿ ಆಗಬಹುದಾದಂತಹ ಕ್ರಿಮಿನಲ್ ಪ್ರಕರಣ ಮತ್ತು ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡು ಆಯಾ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಲಾಗುವುದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಾಣಿ ಎ ಶೆಟ್ಟಿ ತಿಳಿಸಿದ್ದಾರೆ.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಜೊತೆಗೆ, ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ವ್ಯಾಜ್ಯಪೂರ್ವ ಪ್ರಕರಣಗಳ (ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಕಾರ್ಮಿಕ ವಿವಾದ ಪ್ರಕರಣಗಳು) ಪಕ್ಷಗಾರರಿಗೆ ನೋಟಿಸ್ ನೀಡಿ ಕರೆಸಿ ಪ್ರಾಧಿಕಾರದ ವತಿಯಿಂದ ಪೂರ್ವಭಾವಿ ಸಭೆ ನಡೆಸಲಾಗುವುದು. ಇಂತಹ ಪ್ರಕರಣಗಳಿಗೆ ನ್ಯಾಯಾಲಯದ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ವಕೀಲರ ಮೂಲಕ ಅಥವಾ ಖುದ್ದಾಗಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಪ್ರಕರಣವನ್ನು ರಾಜಿಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
‘ಕಳೆದ ಜುಲೈ 8ರಲ್ಲಿ ನಡೆದ ಅದಾಲತ್‌ನಲ್ಲಿ 30,168 ಪ್ರಕರಣಗಳು ಇತ್ಯರ್ಥವಾಗಿವೆ. ಅದರಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ 3837 ಪ್ರಕರಣ, 26,331 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ನ್ಯಾಯಾಧೀಶರು, ವಕೀಲರು, ಪಕ್ಷಗಾರರು, ಅಭಿಯೋಜಕರು, ಪೋಲಿಸ್ ಇಲಾಖೆಯವರ ಸಹಯಾಗದೊಂದಿಗೆ ಇತ್ಯರ್ಥಪಡಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಈ ಬಾರಿಯ ಲೋಕ್ ಅದಾಲತ್‌ನಲ್ಲಿಯೂ ಇನ್ನು ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಿ ಜನ ಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ನ್ಯಾಯದಾನ ಮಾಡುವ ಉದ್ದೇಶವಿದೆ. ಜನ ಸಾಮಾನ್ಯರು ಇದರ ಸದುಪಯೋಗ ಮಾಡಿಕೊಂಡು ಸಹಕರಿಸಬೇಕು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.