ಮಂಡ್ಯ: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ಸರ್ಕಾರಿ ನೌಕರರಿಗೆ ಮರಣಶಾಸನವಾಗಿದ್ದು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಸಾವಿರಾರು ಸರ್ಕಾರಿ ನೌಕರರು ಭಾನುವಾರ ನಗರದಲ್ಲಿ ಪಾದಯಾತ್ರೆ ನಡೆಸಿದರು. ಚಳಿ, ಮಳೆಯ ನಡುವೆಯೂ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಕರೆ ನೀಡಿದ್ದ 'ವೋಟ್ ಫಾರ್ ಒಪಿಎಸ್’ ಅಭಿಯಾನಕ್ಕೆ ಬೆಂಬಲಿಸಿ ನಗರದ ರೈತ ಸಭಾಂಗಣದಿಂದ ಪಾದಯಾತ್ರೆ ಆರಂಭಿಸಿ ಜೆ.ಸಿ.ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ತುಂತುರು ಮಳೆ ನಡುವೆಯೂ ಆರ್‌ಪಿ ರಸ್ತೆ, ಕೆಆರ್ ರಸ್ತೆ, ವಿವಿ. ರಸ್ತೆ, ಮಹಾವೀರ ಸರ್ಕಲ್ ಮೂಲಕ ಮೆರವಣಿಗೆ ನಡೆಸಿ ಮತ್ತೆ ರೈತ ಸಭಾಂಗಣ ತಲುಪಿದರು.
ಏ.1, 2006ರಿಂದ ಸರ್ಕಾರಿ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಜಾರಿಗೆ ತಂದಿರುವ ಎನ್‌ಪಿಎಸ್ ಸಂಧ್ಯಾಕಾಲದ ಬದುಕಿಗೆ ಮರಣ ಶಾಸನವಾಗಿದೆ. ಅವೈಜ್ಞಾನಿಕ ಯೋಜನೆಯನ್ನು ಸರ್ಕಾರ ಕೂಡಲೇ ರದ್ದು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸದನದಲ್ಲಿ ಚರ್ಚೆ: ರೈತ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ‘ಹೊಸ ಪಿಂಚಣಿ ಯೋಜನೆಯ ಬಗ್ಗೆ ಸರ್ಕಾರಿ ನೌಕರರಲ್ಲಿ ಹಲವು ಸಂಶಯಗಳಿವೆ. ಈ ಬಗ್ಗೆ ಸರ್ಕಾರ ಯಾವುದೇ ಭರವಸೆ ನೀಡದೇ ನಿರ್ಲಕ್ಷ್ಯ ವಹಿಸಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಇದೇ ವಿಷಯ ಪ್ರಮುಖವಾಗಿ ಚರ್ಚೆಗೆ ಬರಲಿದೆ’ ಎಂದರು.
‘ಹಳೇ ಪಿಂಚಣಿ ಪದ್ಧತಿಯಲ್ಲಿ ಪ್ರತಿ ತಿಂಗಳು ಇಷ್ಟೇ ಹಣ ಬರುತ್ತದೆ ಎಂದು ನಿರ್ದಿಷ್ಟವಾಗಿ ಹೇಳಬಹುದಿತ್ತು. ಆದರೆ, ಹೊಸ ಪಿಂಚಣಿ ನೀತಿಯಲ್ಲಿ ಆ ಭರವಸೆ ಇಲ್ಲ, ನಿರ್ದಿಷ್ಟ ಪಿಂಚಣಿ ಇಲ್ಲದವರ ಬದುಕು ಅಮಾನವೀಯವಾಗುತ್ತಿದೆ. ಹೊಸ ಪಿಂಚಣಿ ಯೋಜನೆಯ ಬಗ್ಗೆ ಸರ್ಕರಿ ನೌಕರರಲ್ಲಿ ಹಲವು ಸಂಶಯಗಳು ಮನೆ ಮಾಡಿದ್ದು ಆತಂಕಗೊಂಡಿದ್ದಾರೆ. ಹೀಗಿರುವಾಗ ಯಾವುದೇ ಸರ್ಕಾರಗಳು ಭರವಸೆ ನೀಡುತ್ತಿಲ್ಲ. ಇದರಿಂದ ನೌಕರರು ಸಮಸ್ಯೆಗೆ ಒಳಗಾಗಿದ್ದಾರೆ’ ಎಂದು ವಿಷಾದಿಸಿದರು.
‘ನೌಕರರ ಆತಂಕ ದೂರ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪೂರ್ಣ ಸಹಕಾರ ಬೇಕಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಇದನ್ನು ಪ್ರಮುಖ ಚರ್ಚೆಯಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಅನುದಾನಿತ ನೌಕರರು ಕಳೆದ 70 ದಿನಗಳಿಂದ ಚಳವಳಿ ನಡೆಸುತ್ತಿದ್ದರೂ ಮಾತನಾಡಿಸುವವರು ಯಾರು ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನೌಕರರ ಚಳವಳಿಗೆ ಸರ್ಕಾರ ಬೆಲೆ ಕೊಡುತ್ತಿಲ್ಲ. ಕಡೇ ಪಕ್ಷ ಸಾಂತ್ವನ ಹೇಳುವ ಕೆಲಸವನ್ನೂ ಮಾಡುತ್ತಿಲ್ಲ. ಮುಖ್ಯಮಂತ್ರಿ ಅವರಿಗೆ ಸಭೆ ಕರೆಯಲು ಮನವಿ ಮಾಡಿದ್ದರೂ ಗಮನಹರಿಸುತ್ತಿಲ್ಲ, ಇದು ಚುನಾವಣಾ ಸಂದರ್ಭವಾಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸೇರಿದಂತೆ ಸಚಿವರ ಮೇಲೆ ಒತ್ತಡ ತರಬೇಕಾದ ಅವಶ್ಯಕತೆಯಿದೆ’ ಎಂದರು.
ಜೆಡಿಎಸ್ ಮುಖಂಡ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ ‘25ನೇ ವರ್ಷದಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿ 60 ವರ್ಷಗಳವರೆಗೆ ಸುಮಾರು 35 ವರ್ಷಗಳ ಕಾಲ ಸರ್ಕಾರಿ ಸೇವೆ ಮಾಡಿದ ನೌಕರರಿಗೆ ಪಿಂಚಣಿ ಅನಿವಾರ್ಯವಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜಾರಿಗೆ ತಂದಿದ್ದ ನೂತನ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ಪ್ರಾರಂಭದಲ್ಲಿ ನೌಕರರಿಗೆ ಭರವಸೆ ಹುಟ್ಟಿಸಿದ್ದ ಈ ಯೋಜನೆ ಇದೀಗ ಆತಂಕ ಹುಟ್ಟಿಸುತ್ತಿದೆ’ ಎಂದರು.
‘ನಿವೃತ್ತಿಯಾಗುತ್ತಿರುವ ನೌಕರರಿಗೆ ₹ 2 ಸಾವಿರ ಅಥವಾ ₹ 3 ಸಾವಿರ ವೇತನ ದೊರೆಯುತ್ತಿದ್ದು ನಿವೃತ್ತಿಯ ಬದುಕನ್ನು ಆತಂಕಕ್ಕೆ ದೂಡಿದೆ, ಈಗಾಗಲೇ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಹಳೆ ಯೋಜನೆಯನ್ನು ಒಪ್ಪಿದ್ದು, ಇನ್ನುಳಿದ ಐದು ರಾಜ್ಯಗಳು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಿವೆ’ ಎಂದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ ‘ಚುನಾವಣೆಗೂ ಮುನ್ನ ಬೇಡಿಕೆ ಈಡೇರಬೇಕು. ಹಳೆ ಪಿಂಚಣಿ ಯೋಜನೆ ಯಾರಿಗೆ ತರಲು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ವಿಷಯ ಸೇರಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಸದಾ ನೌಕರರ ಜೊತೆಗೆ ಇರಲಿದೆ’ ಎಂದರು.
ಎನ್‌ಪಿಸಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಾಂತರಾಮು ಮಾತನಾಡಿ ‘ಎಷ್ಟೇ ಹರಸಾಹಸ ಮಾಡಿ ಬೇಡಿಕೆ ಈಡೇರಿಸಲು ಕೇಳಿಕೊಂಡರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಹಾಗಾಗಿ ಡಿ.19 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ‘ಮಾಡು ಇಲ್ಲವೇ ಮಡಿ’ ಬೃಹತ್ ಹೋರಾಟ ರೂಪಿಸಿದ್ದು ಎಲ್ಲಾ ನೌಕರರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯ ಘಟಕ ಅಧ್ಯಕ್ಷ ನಿಂಗೇಗೌಡ, ಎನ್‌ಪಿಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಉಪಾಧ್ಯಕ್ಷ ಮಂಜುನಾಥ್, ಸಿದ್ದಪ್ಪ, ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಕೇಶವ ಪ್ರಸಾದ್, ಸರಸ್ವತಮ್ಮ, ಜಿಲ್ಲಾ ಸಂಘದ ಅಧ್ಯಕ್ಷ ಬಿ.ಬಿ.ಸಿದ್ದರಾಜು, ಉಪಾಧ್ಯಕ್ಷ ಎಂ.ಎಲ್.ಕೃಷ್ಣೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಕೆಂಚರಂಗಯ್ಯ, ಪುರುಷೋತ್ತಮ್, ಚಿಕ್ಕಣ್ಣ, ರಾಮು ಎಲೆಚಾಕನಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.