ಮಂಡ್ಯ: ಜಿಲ್ಲೆಯ ವಿವಿಧೆಡೆ ನಾಲೆಗಳು ತಡೆಗೋಡೆ ರಹಿತವಾಗಿದ್ದು ವಾಹನ ಸವಾರರ ಜೀವ ತೆಗೆಯುತ್ತಿವೆ. ತಡೆಗೋಡೆ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆ ನಡುವೆ ಗೊಂದಲವಿರುವ ಕಾರಣ ಅಮಾಯಕ ಜೀವಗಳು ಬಲಿಯಾಗುತ್ತಿವೆ.
2018ರಲ್ಲಿ ಪಾಂಡವಪುರ ತಾಲ್ಲೂಕು ಕನಗನಮರಡಿ ಬಳಿಯ ನಾಲೆಗೆ ಖಾಸಗಿ ಬಸ್ ಉರುಳಿ 34 ಮಂದಿ ಮಂದಿ ಪ್ರಾಣ ಕಳೆದುಕೊಂಡರು. ಈ ಘಟನೆಯ ನಂತರವೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ನಾಲೆಗಳಿಗೆ ತಡೆಗೋಡೆ ನಿರ್ಮಾಣ ಮಾಡುವ ಅನಿವಾರ್ಯತೆಯನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ಆಗಾಂದಾಗ್ಗೆ ನಾಲೆಗೆ ವಾಹನಗಳು ಉರುಳಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇವೆ.
ನಾಲೆಗಳು ಜಿಲ್ಲೆಯ ರೈತರ ಪಾಲಿಗೆ ಜೀವನಾಡಿಯಾಗಿವೆ, ಆದರೆ ನಾಲೆ ಏರಿಮೇಲಿನ ರಸ್ತೆ ಸಂಚಾರ ಸುರಕ್ಷತೆ ಇಲ್ಲದ ಪರಿಣಾಮ ಪ್ರಯಾಣಿಕರ ಪಾಲಿಗೆ ಯಮಪಾಶವೇ ಆಗಿವೆ. ನಾಲೆಗಳ ಆಧುನೀಕರಣ ಉದ್ದೇಶಕ್ಕಾಗಿ ಜಿಲ್ಲೆಗೆ ನೂರಾರು ಕೋಟಿ ಹಣ ಬರುತ್ತದೆ. ಆದರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಾಲೆ ರಿಪೇರಿ ಮಾಡುವಾಗ ತಡೆಗೋಡೆ ನಿರ್ಮಾಣ ಮಾಡುವುದಿಲ್ಲ.
ನಾಲೆ ಏರಿ ಮೇಲಿನ ರಸ್ತೆ ಸುಧಾರಣೆಗೆ ಲೋಕೋಪಯೋಗಿ ಇಲಾಖೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತದೆ. ಆದರೆ ತಡೆಗೋಡೆ ನಿರ್ಮಾಣಕ್ಕೆ ಹಿಂದೇಟು ಹಾಕುವ ಕಾರಣ ಜನರು ಅಸುರಕ್ಷಿತ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾಗಿದೆ. ತಡೆಗೋಡೆ ನಿರ್ಮಾಣದ ಬಗ್ಗೆ ಎರಡೂ ಇಲಾಖೆಗಳ ನಡುವೆ ಗೊಂದಲವಿರುವ ಕಾರಣ ಜನರು ಜೀವ ಕಳೆದುಕೊಳ್ಳುವಂತಾಗಿದೆ.
2018ರ ನಂತರ ನಾಲೆಗೆ ವಾಹನ ಬಿದ್ದು ಮೃತಪಟ್ಟವರ 50ಕ್ಕಿಂತಲೂ ಹೆಚ್ಚು. ಪೊಲೀಸ್ ಇಲಾಖೆಯಲ್ಲಿ ಈ ಬಗ್ಗೆ ಸಮರ್ಪಕ ಮಾಹಿತಿಯೂ ಇಲ್ಲ. ನಾಲೆಗೆ ಬಿದ್ದು ಸಾಯುವವರ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆಯಾದರೆ ನಾಲೆಗೆ ಬಿದ್ದು ಗಾಯಗೊಳ್ಳುವವರ ಘಟನೆಗಳು ನಿತ್ಯವೂ ನಡೆಯುತ್ತಿವೆ. ನಾಲೆಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವ ಸ್ಥಳೀಯರೇ ತಡೆಗೋಡೆ ಇಲ್ಲದ ನಾಲೆಗೆ ಉರುಳಿ ಬೀಳುತ್ತಿರುವುದು ಆತಂಕ ಸೃಷ್ಟಿಸಿದೆ.
ನಾಲೆ ಏರಿಯ ರಸ್ತೆಯಲ್ಲಿ ಬೆಳಕಿನ ವ್ಯವಸ್ಥೆ, ಸೂಚನಾ ಫಲಕಗಳೂ ಇಲ್ಲದ ಕಾರಣ ಹೊಸಬರು ಬಂದಾಗ ಜೀವ ಕೈಯಲ್ಲಿಡಿದು ವಾಹನ ಓಡಿಸಬೇಕಾಗಿದೆ. ಈ ಭಾಗದ ಬಹುತೇಕ ನಾಲೆಗಳು ಆಳವಾಗಿರುವ ಕಾರಣ ವಾಹನಗಳು ಉರುಳಿ ಬಿದ್ದಾಗ ತಕ್ಷಣ ಮುಳುಗುತ್ತಿವೆ. ಈಜು ಗೊತ್ತಿದ್ದರೂ ವಾಹನಗಳಿಂದ ಹೊರಗೆ ಬಂದು ಜೀವ ಉಳಿಸಿಕೊಳ್ಳುವುದು ಕಷ್ಟವಾಗಿದೆ.
ಪಾಂಡವಪುರ, ಶ್ರೀರಂಗಪಟ್ಟಣ, ಮದ್ದೂರು, ಮಂಡ್ಯ ಭಾಗದ ನಾಲೆಗಳಲ್ಲಿ ಅತೀ ಹೆಚ್ಚು ಜನರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈಚೆಗೆ ಕಾರು ಉರುಳಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಹುಲಿಕೆರೆ– ಜಯಪುರ ಮಾರ್ಗ ಅತ್ಯಂತ ಅಪಾಯಕಾರಿ ರಸ್ತೆಯಾಗಿದೆ. ರಸ್ತೆಯುದ್ದಕ್ಕೂ ತಡೆಗೋಡೆ ಇಲ್ಲದ ಕಾರಣ ನಾಲೆಗೆ ಬೀಳುವ ಪ್ರಕರಣಗಳು ಸಾಮಾನ್ಯವಾಗುತ್ತಿವೆ.
ಪಾಂಡವಪುರದಿಂದ ಹಿರೇಮರಳಿ ಗೇಟ್‌ವರೆಗೆ ಕಾಲುವೆ ಏರಿ ಮೇಲೆ ನಿತ್ಯ ನೂರಾರು ವಾಹನ ಓಡಾಡುತ್ತವೆ. ಇಲ್ಲಿ ತಡೆಗೋಡೆ ಇಲ್ಲದ ಕಾರಣ ನಾಲೆ ಅಪಾಯಕ್ಕೆ ಆಹ್ವಾನಿಸುವ ಸ್ಥಿತಿಯಲ್ಲಿದೆ.
ಕೆಲವೆಡೆ ತಡೆಗೋಡೆ ಇದ್ದರೂ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಜನರು ಬೀಳುವಂತಾಗಿದೆ. ಕಳೆದ ವಾರ ಕಾರು ಉರುಳಿ ನಾಲ್ವರು ಮಹಿಳೆಯರು ಮೃತಪಟ್ಟ ಶ್ರೀರಂಗಪಟ್ಟಣ ಗಾಮನಹಳ್ಳಿ ಮಾರ್ಗದಲ್ಲಿ ತಡೆಗೋಡೆ ಇತ್ತು. ಆದರೆ ಕಬ್ಬಿಣದ ಸರಳು ಹಾಳಾಗಿದ್ದ ಕಾರಣ ಕಾರು ಡಿಕ್ಕಿ ಹೊಡೆದಾಗ ಕಾರಿನೊಂದಿಗೆ ತಡೆಗೋಡೆಯೂ ಮುರಿದು ಬಿತ್ತು.
‘ಶೇ 80ರಷ್ಟು ಭಾಗದಲ್ಲಿ ತಡೆಗೋಡೆ ಇಲ್ಲ, ಕೆಲವಡೆ ಇದ್ದು ಅಲ್ಲಿಗೆ ತಡೆಗೋಡೆ ಅಳವಡಿಸಿ 10–15 ವರ್ಷ ಕಳೆದಿವೆ. ಕಾಲಕಾಲಕ್ಕೆ ಅವುಗಳನ್ನು ನಿರ್ವಹಣೆ ಮಾಡದ ಕಾರಣ ಇದ್ದೂ ಇಲ್ಲದಂತಾಗಿವೆ. ಕೂಡಲೇ ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ನಾಲಾ ಭಾಗಕ್ಕೆ ತಡೆಗೋಡೆ ಅಳವಡಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.