ADVERTISEMENT

ಗ್ಯಾರಂಟಿ ಮೇಲಿರುವ ಸರ್ಕಾರ ಹೆಚ್ಚುದಿನ ಉಳಿಯಲ್ಲ: ನಿಖಿಲ್‌ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 13:12 IST
Last Updated 28 ಜೂನ್ 2024, 13:12 IST
   

ಮಂಡ್ಯ: ‘ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಹೆಚ್ಚಳ ಮಾಡುತ್ತಿರುವುದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಾಗಿಲ್ಲ. ಹಾಗಾಗಿ ಈ ಸರ್ಕಾರ ಹೆಚ್ಚು ದಿನ ಉಳಿಯೋದು ಕಷ್ಟ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಭವಿಷ್ಯ ನುಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಹೆಚ್ಚಳ ಮಾಡುತ್ತಿದೆ. ಜನರು ಗ್ಯಾರಂಟಿ ಯೋಜನೆ ಕೇಳಿಲ್ಲ. ಹಾಗಾಗಿ ಈ ಕಾಂಗ್ರೆಸ್‌ ಸರ್ಕಾರ ಹೆಚ್ಚು ದಿನ ಉಳಿಯೋದು ಕಷ್ಟವಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರಕ್ಕೆ ತನ್ನ ಆಡಳಿತದ ಮೇಲೆ ವಿಶ್ವಾಸ ಕಳೆದುಕೊಂಡಿದೆ, ಹಾಗಾಗಿ ಅವರು ಯಾರನ್ನ ಮುಖ್ಯಮಂತ್ರಿ ಮಾಡುತ್ತಾರೋ, ಎಷ್ಟು ಜನ ಉಪಮುಖ್ಯಮಂತ್ರಿ ಆಯ್ಕೆ ಮಾಡುತ್ತಾರೋ ನೋಡೋಣ, ಸರ್ಕಾರ ಯಾವಾಗ ಉರುಳಲಿದೆ ಎಂಬುದನ್ನ ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ವ್ಯಂಗ್ಯವಾಡಿದರು.

ADVERTISEMENT

‌ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಾರದಲ್ಲಿ ಒಂದು ದಿನ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಾರೆ. ಆ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುವರು. ಈಗ ಅವರು ದೇಶ, ರಾಜ್ಯ ಹಾಗೂ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಪರ ಕೆಲಸ ಮಾಡಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ವಾಮೀಜಿ ಅವರನ್ನ ಕುರಿತು ಕೆ.ಎನ್. ರಾಜಣ್ಣ ಹೇಳಿಕೆ ನೀಡಿರುವುದು ತಪ್ಪು. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಇಂತಹ ಮಾತುಗಳನ್ನು ಹೇಳುವಾಗ ಎಚ್ಚರಿಕೆಯಿಂದ ಇರಬೇಕು. ಸ್ವಾಮೀಜಿ ಅವರನ್ನ‌ ಕುರಿತು ಆ ರೀತಿ ಹೇಳೋದು ಶೋಭೆ ತರೋದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಜಿಲ್ಲೆಯ ವಿಸಿ ನಾಲೆಗಳಿಗೆ ಕೆಆರ್‌ಎಸ್‌ನಲ್ಲಿ 80 ಅಡಿ ನೀರಿದ್ದಾಗಲೂ ನೀರು ಹರಿಸಿರುವ ಉದಾಹರಣೆ ಇದೆ. ಆದರೆ ಈಗ ನೀರಿದ್ದರೂ ಒಂದೇ ಒಂದು ಹನಿ ನೀರು ಹರಿಸಿಲ್ಲ. ಜೆಡಿಎಸ್ ಜನಪರವಾಗಿ ಕೆಲಸ ಮಾಡೋ ಪಕ್ಷವಾಗಿದೆ ನಾವು ರೈತರ ಪರವಾಗಿ ಇರುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಡಿ.ಸಿ.ತಮ್ಮಣ್ಣ, ಡಿ.ರಮೇಶ್‌, ಕಾಳೇಗೌಡ, ಸಾದೊಳಲು ಸ್ವಾಮಿ, ಬಿ.ಆರ್.ಸುರೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.