ADVERTISEMENT

ಕುಮಾರಸ್ವಾಮಿ ಸರ್ಕಾರದಲ್ಲಿ ಚುಂಚಶ್ರೀ ಫೋನ್‌ ಕದ್ದಾಲಿಕೆ: ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 13:45 IST
Last Updated 11 ಏಪ್ರಿಲ್ 2024, 13:45 IST
   

ಮಂಡ್ಯ: ‘ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿಯ ಫೋನ್‌ ಕದ್ದಾಲಿಕೆಯಾಗಿತ್ತು’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಗುರುವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿ, ‘ಒಂದು ಧರ್ಮಪೀಠಕ್ಕೆ ಅವಮಾನ ಮಾಡಿದ್ದನ್ನು ಯಾರೂ ಮರೆಯುವುದಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಠದ ಬಾಗಿಲು ತಟ್ಟುತ್ತಿದ್ದಾರೆ. ವಿರೋಧಿಗಳನ್ನೂ ಭೇಟಿಯಾಗುತ್ತಿದ್ದಾರೆ. ಆದಿಚುಂಚನಗಿರಿ ಮಠಕ್ಕೆ ಪ್ರತಿಯಾಗಿ, ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧವಾಗಿ ಇನ್ನೊಂದು ಮಠ, ಮತ್ತೊಬ್ಬರು ಸ್ವಾಮೀಜಿಯನ್ನು ಹುಟ್ಟುಹಾಕಿದ್ದು ಯಾರು’ ಎಂದು ಪ್ರಶ್ನಿಸಿದರು.

‘ಮೈತ್ರಿ ನಾಯಕರಿಗಿಂತ ಮೊದಲೇ ನಾವು ನಮ್ಮ ಅಭ್ಯರ್ಥಿ ಸ್ಟಾರ್‌ ಚಂದ್ರು ಅವರೊಂದಿಗೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನೀಡಿದ್ದೇವೆ. ಒಳ್ಳೆಯದಾಗಲಿ ಎಂದು ಶ್ರೀಗಳು ಆಶೀರ್ವಾದಿಸಿದ್ದಾರೆ. ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆಯುವುದು ಸಾಮಾನ್ಯ’ ಎಂದರು.

ADVERTISEMENT

‘2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದಿದ್ದಾಗ ಎಸ್‌.ಎಂ.ಕೃಷ್ಣ ಅವರು ಜೆಡಿಎಸ್‌ ಬೆಂಬಲ ಕೋರಿದ್ದರು. ಒಕ್ಕಲಿಗ ನಾಯಕರಾದ ಎಸ್‌.ಎಂ.ಕೃಷ್ಣ ಅವರನ್ನು ಇನ್ನೊಂದು ಅವಧಿಗೆ ಮುಖ್ಯಮಂತ್ರಿ ಮಾಡುವ ಅವಕಾಶ ಜೆಡಿಎಸ್‌ಗೆ ಇತ್ತು. ಆದರೆ ಬೆಂಬಲ ನೀಡಲಿಲ್ಲ’ ಎಂದರು.

‘ಮಲ್ಲಿಕಾರ್ಜುನ ಖರ್ಗೆ ಅವರನ್ನಾದರೂ ಸಿ.ಎಂ ಮಾಡುವ ಆಯ್ಕೆ ಇತ್ತು. ಆಗ ನಾನು ಜೆಡಿಎಸ್‌ನಲ್ಲೇ ಇದ್ದೆ. ತಾವು ಹೇಳಿದಂತೆ ಕೇಳಬೇಕು ಎನ್ನುವ ಕಾರಣಕ್ಕೆ ದೇವೇಗೌಡರು ಧರಂ ಸಿಂಗ್‌ ಅವರನ್ನು ಮುಖ್ಯಮಂತ್ರಿ ಮಾಡಿದರು. ಚುನಾವಣೆ ಕಾರಣಕ್ಕೆ ಈಗ ಮೈತ್ರಿ ಮುಖಂಡರು ಕೃಷ್ಣ ಅವರ ಮನೆಗೆ ಹೋಗಿದ್ದಾರೆ’ ಎಂದರು.

‘ಸಂಸದೆ ಸುಮಲತಾ ಅವರನ್ನು ಅಕ್ಕಾ ಎನ್ನುತ್ತಿರುವ ಕುಮಾರಸ್ವಾಮಿ ಕಳೆದ ಚುನಾವಣೆ ವೇಳೆ ಏನೆಲ್ಲಾ ಮಾಡಿದ್ದರು ನೆನಪಿಸಿಕೊಳ್ಳಿ. ಅವರು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದ್ದರು, ಸುಮಲತಾ ಅವರನ್ನು ಕೆಆರ್‌ಎಸ್‌ಗೆ ಅಡ್ಡಡ್ಡ ಮಲಗಿಸಿ ಎಂದಿದ್ದರು’ ಎಂದರು.

‘ವಿಶ್ವದಲ್ಲೇ ಮೊದಲು ಎನಿಸಿಕೊಂಡಿರುವ ಗ್ಯಾರಂಟಿ ಯೋಜನೆ ನಿಲ್ಲಿಸಿ ಎಂದು ಕೋರಿ ಬಿಜೆಪಿ ಮುಖಂಡರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಇಂಥವರಿಗೆ ಮತ ಹಾಕಬೇಕಾ’ ಎಂದು ಪ್ರಶ್ನಿಸಿದರು.

ನಿರ್ಮಲಾನಂದನಾಥ ಸ್ವಾಮೀಜಿಯ ಕರೆ ಕದ್ದಾಲಿಕೆ ಗೊತ್ತಿರುವ ವಿಚಾರ. ಈ ಬಗ್ಗೆ ದಾಖಲೆಗಳಿವೆ. ಈ ಬಗ್ಗೆ ಮಾತನಾಡಲು ನೋವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳಿದ್ದರೂ ಈ ವಿಚಾರವನ್ನು ಈಗ ಮಾತನಾಡುವುದು ಸೂಕ್ತವಲ್ಲ.
–ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಕಾಂಗ್ರೆಸ್ ಶಕ್ತಿ ಕುಸಿಯುತ್ತಿರುವ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಈ ರೀತಿ ಹತಾಶೆ ಹೇಳಿಕೆ ನೀಡುತ್ತಿದ್ದಾರೆ. ಪ್ರತಿ ಚುನಾವಣೆ ಬಂದಾಗ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಂದ ಮಠಾಧೀಶರ ಭೇಟಿ ಪದ್ಧತಿಯಾಗಿದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ
–ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ 

‘ಪರ್ಯಾಯ ಮಠ ಸ್ಥಾಪನೆಗೆ ಎಚ್‌ಡಿಡಿ, ಎಚ್‌ಡಿಕೆ ಕಾರಣ’

‘ಬಾಲಗಂಗಾಧರ‌ನಾಥ ಶ್ರೀಗಳು ಇದ್ದಂತಹ ಸಂದರ್ಭದಲ್ಲಿ ನಮ್ಮನ್ನೆಲ್ಲ ಮುಂದೆ ಬಿಟ್ಟು ಚಂದ್ರಶೇಖರನಾಥ ಸ್ವಾಮೀಜಿ ಮೂಲಕ ಪರ್ಯಾಯ ಮಠ ಹುಟ್ಟುಹಾಕಲು ದೇವೇಗೌಡರು ಮತ್ತು ಕುಮಾರಸ್ವಾಮಿ ಕಾರಣ. ನಾವು ಮಾಡಿದ್ದು ತಪ್ಪು ಎಂದು ಗೊತ್ತಾದ ಬಳಿಕ ಮಠದಲ್ಲಿ ದೊಡ್ಡವರ ಬಳಿ ಕ್ಷಮೆ ಕೇಳಿದ್ದೇವೆ’ ಎಂದು ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪರ್ಯಾಯ ಮಠ ಸ್ಥಾಪನೆಗೆ ಈಗ ಪಶ್ಚಾತ್ತಾಪ ಪಡುತ್ತಿದ್ದೇವೆ. ಅಂದು ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ದೇವೇಗೌಡರ ಮಧ್ಯೆ ಮುಸುಕಿನ ಗುದ್ದಾಟ ಇತ್ತು. ಪರ್ಯಾಯ ಮಠ ಸ್ಥಾಪನೆಗೆ ಕ್ಷಮೆ ಕೇಳಿದ ಬಳಿಕ ಮಠದ ಶ್ರೀಗಳ ಅಣತಿಯಂತೆ ನಡೆಯುತ್ತಿದ್ದೇವೆ’ ಎಂದರು.

‘ದೇವೇಗೌಡರು, ಕುಮಾರಸ್ವಾಮಿಗೆ ಒಕ್ಕಲಿಗರು ಶೇ 60ರಷ್ಟು ಸಹಕಾರ ಕೊಟ್ಟಿದ್ದರು. ಅದನ್ನು ಬಳಸಿಕೊಂಡು ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಅಲ್ಲಿ ಒಕ್ಕಲಿಗರಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ. ಬಿಜೆಪಿಯವರು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸುತ್ತಾರೆಯೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.