ADVERTISEMENT

ಕೆಆರ್‌ಎಸ್‌ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಬೇಡ: ಸಂಸದ ಯದುವೀರ ಒಡೆಯರ್‌

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 12:14 IST
Last Updated 15 ಆಗಸ್ಟ್ 2024, 12:14 IST
<div class="paragraphs"><p>ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಗೆ ರಾಜ ವಂಶಸ್ಥ ಹಾಗೂ ಮೈಸೂರು– ಕೊಡಗು ಸಂಸದ ಯದವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಗುರುವಾರ ಬಾಗಿನ ಅರ್ಪಿಸುವ ಮುನ್ನ ಪೂಜೆ ನೆರವೇರಿಸಿದರು</p></div>

ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಗೆ ರಾಜ ವಂಶಸ್ಥ ಹಾಗೂ ಮೈಸೂರು– ಕೊಡಗು ಸಂಸದ ಯದವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಗುರುವಾರ ಬಾಗಿನ ಅರ್ಪಿಸುವ ಮುನ್ನ ಪೂಜೆ ನೆರವೇರಿಸಿದರು

   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಕೆಆರ್‌ಎಸ್‌ ಅಣೆಕಟ್ಟೆ ಬಳಿ ರಾಜ್ಯ ಸರ್ಕಾರ ‘ಅಮ್ಯೂಸ್‌ಮೆಂಟ್‌ ಪಾರ್ಕ್‌’ ಮಾಡುವುದು ಸರಿಯಲ್ಲ ಎಂದು ರಾಜವಂಶಸ್ಥ ಹಾಗೂ ಮೈಸೂರು– ಕೊಡಗು ಸಂಸದ ಯದವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಗೆ ಗುರುವಾರ ಬಾಗಿನ ಅರ್ಪಿಸಿ, ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಅಭಿವೃದ್ಧಿಯ ಹೆಸರಿನಲ್ಲಿ ಕೆಆರ್‌ಎಸ್‌ ಅಣೆಕಟ್ಟೆಗೆ ತೊಂದರೆ ಆಗಬಾರದು. ಅಮ್ಯೂಸ್‌ಮೆಂಟ್‌ ಪಾರ್ಕ್‌ ಮಾಡುವ ಮುನ್ನ ಅದರ ಸಾಧಕ– ಬಾಧಕಗಳ ಬಗ್ಗೆ ಚಿಂತನೆ ನಡೆಸಬೇಕು. ಇಲ್ಲಿನ ಪರಂಪರೆ ಮತ್ತು ಪರಿಸರ ಉಳಿಸಿಕೊಳ್ಳಬೇಕು. ಹಾಗಾಗಿ ಬೇರೆ ಕಡೆ ಅಮ್ಯೂಸ್‌ಮೆಂಟ್‌ ಪಾರ್ಕ್‌ ಮಾಡುವುದು ಒಳಿತು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ADVERTISEMENT

ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ಸಾರ್ವಜನಿಕರು ಪೂಜೆ, ಪುನಸ್ಕಾರ ನಡೆಸಲು ಯಾವುದೇ ಅಡ್ಡಿ ಇರುವುದಿಲ್ಲ. ದೇವಾಲಯಕ್ಕೆ ಸಂಬಂಧಿಸಿದ ಕಾನೂನಿನ ವಿಚಾರಗಳು ಏನೇ ಇದ್ದರೂ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು, ಮರ್ಯಾದೆಗಳು ವಾಡಿಕೆಯಂತೆ ನಡೆಯಲಿವೆ ಎಂದು ಹೇಳಿದರು.

‘ಕ್ರಸ್ಟ್‌ಗೇಟ್‌ಗಳಲ್ಲಿ ತೊಂದರೆಯಿಲ್ಲ’

ಕೆಆರ್‌ಎಸ್‌ ಅಣೆಕಟ್ಟೆಯ ಕ್ರಸ್ಟ್‌ ಗೇಟ್‌ಗಳಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಎಂಜಿನಿಯರ್‌ಗಳು ಹೇಳಿದ್ದಾರೆ. ಈ ಜಲಾಶಯಕ್ಕೆ ಚಿಕ್ಕ ಗೇಟ್‌ಗಳನ್ನು ಅಳವಡಿಸಿರುವುದರಿಂದ ಸಮಸ್ಯೆ ಕಾಣಿಸಿಕೊಂಡ ತಕ್ಷಣವೇ ಸರಿಪಡಿಸುವ ಕೆಲಸ ನಡೆಯುತ್ತದೆ. ಹಾಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.

ಈ ಬಾರಿ ಅವಧಿಗೂ ಮುನ್ನವೇ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿರುವುದು ಸಂತಸ ತಂದಿದೆ. ಜಲಾಶಯಕ್ಕೆ ಬಾಗಿನ ಅರ್ಪಿಸಬೇಕು ಎಂಬ ಹಲವು ವರ್ಷಗಳ ಬಯಕೆ ಈಡೇರಿದೆ. ಮಂಡ್ಯ ಜಿಲ್ಲೆಯ ಜನರು ನಮ್ಮ ಕುಟುಂಬದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಅವರ ಹಿತಕ್ಕಾಗಿ ಕೆಲಸ ಮಾಡಲು ಸಿದ್ದರಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್‌, ಮಂಡಲದ ಅಧ್ಯಕ್ಷ ಪೀಹಳ್ಳಿ ಎಸ್‌ ರಮೇಶ್‌, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಅಶೋಕ ಜಯರಾಂ, ಎಸ್‌.ಪಿ. ಸ್ವಾಮಿ ಇದ್ದರು. ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಬಾಗಿನ ಮತ್ತು ಕಾವೇರಿ ಪೂಜೆಯ ವಿಧಿ, ವಿಧಾನಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.