ADVERTISEMENT

ಡಿಸ್ನಿಲ್ಯಾಂಡ್‌ ಯೋಜನೆಗೆ ನನ್ನ ವಿರೋಧವಿಲ್ಲ: ರವೀಂದ್ರ ಶ್ರೀಕಂಠಯ್ಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 2:39 IST
Last Updated 14 ಮಾರ್ಚ್ 2021, 2:39 IST
ಶ್ರೀರಂಗಪಟ್ಟಣ ತಾಲ್ಲೂಕು ಆಲಗೂಡು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಶನಿವಾರ ಭೂಮಿಪೂಜೆ ಮಾಡಿದರು
ಶ್ರೀರಂಗಪಟ್ಟಣ ತಾಲ್ಲೂಕು ಆಲಗೂಡು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಶನಿವಾರ ಭೂಮಿಪೂಜೆ ಮಾಡಿದರು   

ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ ಉದ್ಯಾನವನ್ನು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಯೋಜನೆ ವಿಷಯದಲ್ಲಿ ಸಚಿವರು ಮತ್ತು ಅಧಿಕಾರಿಗಳು ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ’ ಎಂದು ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಆಲಗೂಡು ಇತರೆಡೆ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಶುಕ್ರವಾರ ಪ್ರವಾಸೋದ್ಯಮ ಇಲಾಖೆಯಿಂದ ಅನಧಿಕೃತವಾಗಿ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ಡಿಸ್ನಿಲ್ಯಾಂಡ್‌ ಬಗ್ಗೆ ಚರ್ಚಿಸಲು ಸಚಿವರು ಕೆಆರ್‌ಎಸ್‌ಗೆ ಬರುತ್ತಾರೆ ಎಂದು ಹೇಳಿದರು. ಒಬ್ಬ ಶಾಸಕನಿಗೆ ಮೊದಲೇ ವಿಷಯ ತಿಳಿಸಬೇಕು ಎಂಬುದು ಇವರಿಗೆ ಗೊತ್ತಿಲ್ಲವೆ? ಏಕಾಏಕಿ ಸಭೆ ಇದೆ ಬನ್ನಿ ಎಂದರೆ ಹೋಗುವುದು ಹೇಗೆ? ಇಷ್ಟಕ್ಕೂ ಇವರ ಪ್ಲಾನ್‌ ಏನು’ ಎಂದು ಪ್ರಶ್ನಿಸಿದರು.

ADVERTISEMENT

‘ಡಿಸ್ನಿಲ್ಯಾಂಡ್‌ ಯೋಜನೆಗೆ ನನ್ನ ವಿರೋಧವಿಲ್ಲ’ ಎಂದು ಹೇಳಿದರು.

‘ಅಭಿವೃದ್ಧಿ ಕಾರ್ಯಗಳಿಗೆ ಕಲ್ಲು ಗಣಿಗಾರಿಕೆ ಅಗತ್ಯ. ಆದರೆ, ರಂಗನತಿಟ್ಟು ಪಕ್ಷಿಧಾಮದಂತಹ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಅವಕಾಶ ನೀಡಬಾರದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಆತಂಕ: ‘ತಾಲ್ಲೂಕಿನ ಕಾರೇಕುರ– ಪಾಂಡವಪುರ ತಾಲ್ಲೂಕಿನ ಕಟ್ಟೇರಿ ಗ್ರಾಮಗಳ ನಡುವೆ, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆಗಾಗಿ ಕಾವೇರಿ ನದಿಯಲ್ಲಿ ಬಂಡೆಗಳನ್ನು ಸ್ಫೋಟಿಸುತ್ತಿದ್ದು, ಮನೆಗಳು ಬಿರುಕು ಬಿಡುತ್ತಿವೆ. ಜನರು ಅಳಲು ತೋಡಿಕೊಂಡಿದ್ದಾರೆ. ಬಂಡೆ ಸ್ಫೋಟಿಸಲು ಗುತ್ತಿಗೆ ಕಂಪೆನಿ ಅನುಮತಿಯನ್ನೇ ಪಡೆದಿಲ್ಲ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ. ಇಂತಹ ಬೇಜವಾಬ್ದಾರಿತನ ಸರಿಯಲ್ಲ’ ಎಂದು ಹೇಳಿದರು.

ತಾಲ್ಲೂಕಿನ ಆಲಗೂಡು, ಕಾರೇಕುರ, ಮೊಳ್ಳೇನಹಳ್ಳಿಕೊಪ್ಪಲು, ಚಿಕ್ಕಅಂಕನಹಳ್ಳಿ, ಹುಂಜನಕೆರೆ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರವೀಂದ್ರ ಶ್ರೀಕಂಠಯ್ಯ ಶನಿವಾರ ಚಾಲನೆ ನೀಡಿದರು.

ತಾ.ಪಂ. ಸದಸ್ಯ ಟಿ.ಎಂ. ದೇವೇಗೌಡ, ತಡಗವಾಡಿ ಗ್ರಾ.ಪಂ. ಅಧ್ಯಕ್ಷ ಸ್ವಾಮಿಗೌಡ, ಪಿಡಿಒ ಮಹೇಶ್‌, ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಸಿದ್ದಲಿಂಗಯ್ಯ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.