ADVERTISEMENT

ಮೈಷುಗರ್ ಸ್ಥಳಾಂತರ ಬೇಡ: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಗೆ ಮನವಿ

mnd

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 15:18 IST
Last Updated 6 ಜುಲೈ 2024, 15:18 IST

ಮಂಡ್ಯ: ಐತಿಹಾಸಿಕ ಮೈಷುಗರ್ ಕಾರ್ಖಾನೆಯನ್ನು ಸ್ಥಳಾಂತರಿಸಬಾರದು ಎಂದು ಆಗ್ರಹಿಸಿ ಮಂಡ್ಯ ಜಿಲ್ಲಾ ಜರ್ನಲಿಸ್ಟ್‌ ಕ್ಲಬ್‌ನ ಸದಸ್ಯರು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮನವಿ ನೀಡಿದರು.

ಜಿಲ್ಲೆಯ ಹೆಮ್ಮೆ ಹಾಗೂ ನಾಡಿಗೆ ದಿಕ್ಸೂಚಿಯಾಗಿರುವ ಐತಿಹಾಸಿಕ ಮೈಸೂರು ಸಕ್ಕರೆ ಕಾರ್ಖಾನೆ ಶತಮಾನೋತ್ಸವದ ಅಂಚಿನಲ್ಲಿದೆ, ಇದೊಂದು ಪಾರಂಪರಿಕ ಕಾರ್ಖಾನೆಯಾಗಿದೆ, ಇದು ರೋಗಗ್ರಸ್ತವಾಗಿದ್ದಾಗ ನೀವು ಮುಖ್ಯಮಂತ್ರಿಯಾಗಿರುವ  ಸಂದರ್ಭದಲ್ಲಿ ಕಾರ್ಖಾನೆಯ ಪುನಶ್ಚೇತನಕ್ಕೆ ಅನುದಾನ ನೀಡಿ ನೆರವಾಗಿದ್ದೀರಾ, ಇದನ್ನು ಉಳಿಸಿಕೊಂಡು, ರೈತರನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ಮೈಷುಗರ್‌ ಕಾರ್ಖಾನೆಯನ್ನು ಸ್ಥಳಾಂತರಿಸುವುದರ ಬಗ್ಗೆ ಜನಪ್ರತಿನಿಧಿಗಳು ಚರ್ಚೆ ನಡೆಯುತ್ತಿರುವುದು ಸರಿಯಲ್ಲ, ರೈತರ ವಿರೋಧ ಕಟ್ಟಿಕೊಂಡು ಕಾರ್ಖಾನೆ ಸ್ಥಳಾಂತರ ಮಾಡುವುದನ್ನು ತಾವು ಸೇರಿದಂತೆ ಎಲ್ಲರೂ ಪ್ರಶ್ನೆ ಮಾಡಬೇಕಿದೆ. ಹೊಸ ಕಾರ್ಖಾನೆ ಆರಂಭಿಸಲು 20 ಕಿ.ಮೀ. ವ್ಯಾಪ್ತಿಯಲ್ಲಿ ಅವಕಾಶವಿಲ್ಲ ಎಂಬ ನಿಯಮದ ಅಡ್ಡಿಯಿದೆ ಎಂದು ಹೇಳುತ್ತಿರುವಾಗ ಮೊದಲು ಜನಾಭಿಪ್ರಾಯ ಸಂಗ್ರಹಿಸಿ ಸೂಕ್ತ ಜಾಗ ಗುರುತಿಸಿ ಮೈಷುಗರ್‌ ಕಾರ್ಖಾನೆಯ ಆಸ್ತಿಗೆ ಗ್ಯಾರಂಟಿ ನೀಡಿ ಅಭಿವೃದ್ಧಿಯ ಚಿಂತನೆ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ಮೈಷುಗರ್‌ ಕಾರ್ಖಾನೆಯ ಆಡಳಿತವನ್ನು ಬಿಗಿಗೊಳಿಸಿ ಸಮರ್ಥ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿ ಸೋಮಾರಿತನ ಪ್ರದರ್ಶಿಸುವ ನೌಕರರು, ಕಾರ್ಮಿಕರಿಗೆ ಬಿಸಿ ಮುಟ್ಟಿಸಿ ಅನಗತ್ಯ ಆಡಳಿತ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಈ ಹಿಂದೆ ನೀಡುತ್ತಿದ್ದ ಷೇರುದಾರರಿಗೆ ಲಾಭಾಂಶವನ್ನು ಷೇರುದಾರರಿಗೆ ನೀಡಬೇಕು, ಉತ್ತಮ ನಾಯಕರು ಈ ಕಾರ್ಖಾನೆಯ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕ್ರಬ್‌ ಅಧ್ಯಕ್ಷ ಎ.ಎಲ್‌. ಬಸವೇಗೌಡ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ದ.ಕೋ.ಹಳ್ಳಿ, ಕಾರಸವಾಡಿ ಮಹದೇವು, ಕೌಡ್ಲೆ ಚನ್ನಪ್ಪ, ಎನ್‌.ಎಂ.ರಮೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.