ADVERTISEMENT

ಬರ ಪರಿಹಾರ ಹಣ ನೀಡದೆ ವಂಚನೆ: ಅಶೋಕ್ ಕುಮಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 30 ಮೇ 2024, 12:53 IST
Last Updated 30 ಮೇ 2024, 12:53 IST
ಅಶೋಕ್ ಕುಮಾರ್
ಅಶೋಕ್ ಕುಮಾರ್   

ಹಲಗೂರು: ‘ರೈತರ ಸಂಕಷ್ಟವನ್ನರಿತು ಕೇಂದ್ರ ಸರ್ಕಾರ ₹ 3500 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದ್ದರೂ ಸಹ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಇದುವರೆಗೂ ರೈತರಿಗೆ ಬರ ಪರಿಹಾರ ಹಣ ವಿತರಿಸದೇ ವಂಚಿಸುತ್ತಿದೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್ ಆರೋಪಿಸಿದರು.

‘ರಾಜ್ಯದ 195 ತಾಲ್ಲೂಕುಗಳು ಸೇರಿದಂತೆ ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಿ ತಿಂಗಳುಗಳೇ ಕಳೆದಿವೆ. ಇಂತಹ ಗಂಭೀರ ವಿಷಯದ ಬಗ್ಗೆ ಜಿಲ್ಲೆಯವರೇ ಆದ ಕೃಷಿ ಸಚಿವರು ಯಾವ ಕ್ರಮ ಕೈಗೊಂಡಿದ್ದಾರೆ’ ಎಂದು ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ರೈತರಿಗೆ ಬೇಕಾಗುವ ಬಿತ್ತನೆ ಬೀಜಕ್ಕೆ ಶೇ 40 ದರ ಏರಿಕೆಯಾಗಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾರ್ವಜನಿಕರಿಗೆ ಬೇಕಿಲ್ಲದ ಭಾಗ್ಯ ನೀಡಲು ಸರ್ಕಾರದ ಬಳಿ ಹಣವಿದೆ. ಆದರೆ, ರೈತರ ಉಚಿತವಾಗಿ ಬಿತ್ತನೆ ಬೀಜ ಕೊಡಲು ಸಾಧ್ಯವಿಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿ ಆರಂಭಿಸಿ ಹಲವು ತಿಂಗಳು ಕಳೆದರೂ ಕಾಮಗಾರಿಯ ಶೇ 40ರಷ್ಟು ಕೆಲಸ ಮುಗಿಸಿಲ್ಲ. ಕಾಮಗಾರಿ ಕೆಲಸ ಕಳಪೆಯಾಗಿದ್ದು, ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಕೂಡಲೇ ತನಿಖೆಗೆ ಒಳಪಡಿಸಬೇಕು’ ಆಗ್ರಹಿಸಿದರು.

‘ಮಳವಳ್ಳಿ ತಾಲ್ಲೂಕಿನ ಹೆಬ್ಬಾಳ ಚನ್ನಯ್ಯ ಮತ್ತು ವಿಶ್ವೇಶ್ವರಯ್ಯ ನಾಲಾ ನೀರಾವರಿ ಅವಲಂಬಿತ ಗ್ರಾಮಗಳ ರೈತರ ಜಮೀನುಗಳಿಗೆ ಪ್ರತಿ ವರ್ಷ ತಡವಾಗಿ ನೀರನ್ನು ಹರಿಸಲಾಗುತ್ತಿದ್ದು, ಸಕಾಲಕ್ಕೆ ಬೆಳೆ ಬೆಳೆಯಲು ತೊಂದರೆಯಾಗುತ್ತಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಈ ಸಂಬಂಧ ಗಮನಹರಿಸಿ, ಕೊನೆಯ ಭಾಗದ ರೈತರ ಜಮೀನುಗಳಿಗೆ ಸಕಾಲಕ್ಕೆ ನೀರು ಹರಿಸಲು ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಸಂಯೋಜಕ ಕೃಷ್ಣೇಗೌಡ, ತಾಲ್ಲೂಕು ಉಪಾಧ್ಯಕ್ಷ ಎನ್.ಕೆ.ಕುಮಾರ್, ಹಲಗೂರು ಮಹಾಶಕ್ತಿ‌ ಕೇಂದ್ರದ ಅಧ್ಯಕ್ಷ ಮೋದಿ ರವಿ, ಮುಖಂಡರಾದ ಅಭಿಜಿತ್ ಬಸವರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.