ADVERTISEMENT

ಮಂಡ್ಯ | ಭತ್ತ, ರಾಗಿ ಖರೀದಿ ಕೇಂದ್ರ ಶೀಘ್ರ ಆರಂಭ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 16:15 IST
Last Updated 12 ನವೆಂಬರ್ 2024, 16:15 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ 2024-25ನೇ ಸಾಲಿನ ‘ಕನಿಷ್ಠ ಬೆಂಬಲ ಬೆಲೆ’ (ಎಂ.ಎಸ್‌.ಪಿ) ಯೋಜನೆಯ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ 2024-25ನೇ ಸಾಲಿನ ‘ಕನಿಷ್ಠ ಬೆಂಬಲ ಬೆಲೆ’ (ಎಂ.ಎಸ್‌.ಪಿ) ಯೋಜನೆಯ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು   

ಮಂಡ್ಯ: ಜಿಲ್ಲೆಯಲ್ಲಿ ಭತ್ತ, ರಾಗಿ ಖರೀದಿಗೆ ರೈತರ ನೋಂದಣಿ ಕೇಂದ್ರಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ 2024-25ನೇ ಸಾಲಿನ ‘ಕನಿಷ್ಠ ಬೆಂಬಲ ಬೆಲೆ’ (ಎಂ.ಎಸ್‌.ಪಿ) ಯೋಜನೆಯ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ‘ಕನಿಷ್ಠ ಬೆಂಬಲ ಬೆಲೆ’ ಯೋಜನೆಯಡಿ ಕಾರ್ಯ ನಿರ್ವಹಿಸಲು ಸರ್ಕಾರವು ಮಂಡ್ಯ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯನ್ನು ಖರೀದಿ ಏಜೆನ್ಸಿಯಾಗಿ ನೇಮಿಸಿದ್ದು, ರೈತರ ನೋಂದಣಿ ಕಾರ್ಯವನ್ನು ಹಾಗೂ ಭತ್ತ, ರಾಗಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಆದೇಶಿಸಿದೆ ಎಂದರು.

ADVERTISEMENT

ಎಂ.ಎಸ್‌.ಪಿ. ನೋಂದಣಿ ಕೇಂದ್ರಕ್ಕೆ ರೈತರು ನೋಂದಣಿಯಾಗಲು ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್ ಪ್ರತಿ, ಫ್ರೂಟ್ ಐಡಿ (Fruit Id),  ಆಧಾರ್ ಕಾರ್ಡ್ ಜೋಡಣೆ ಮಾಡಿರುವ ಮತ್ತು ಎನ್‌.ಐ.ಸಿ.ಪಿ. ಆಕ್ಟಿವೇಟ್ ಆಗಿರುವ ಬ್ಯಾಂಕ್ ಅಕೌಂಟ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಹಾಗೂ ನೋಂದಣಿ ಪ್ರಾರಂಭವಾಗುವ ದಿನಾಂಕದ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಬೇಕು ಎಂದರು.

ಪ್ರತಿ ನೋಂದಣಿ ಕೇಂದ್ರಗಳಲ್ಲಿ ರೈತರಿಗೆ ಅಗತ್ಯ ಮಾಹಿತಿ ನೀಡುವ ನಾಮಫಲಕಗಳನ್ನು ಅಳವಡಿಸಬೇಕು. ರೈತರಿಗೆ ಯಾವುದೇ ಗೊಂದಲವಾಗಬಾರದು. ಜೊತೆಗೆ ನೋಂದಣಿ ಮಾಡಿಕೊಳ್ಳಲು ಬರುವ ರೈತರಿಗೆ ಮೂಲಸೌಲಭ್ಯವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ನೋಂದಣಿಗೆ ಸಂಬಂಧಿಸಿದಂತೆ ಫ್ರೂಟ್‌ ಐಡಿ, ಬೆಳೆ ಸಮೀಕ್ಷೆ ಬಗೆಗಿನ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಕೃಷಿ ಇಲಾಖೆಯವರು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಜಿಲ್ಲೆಯಲ್ಲಿ ಒಟ್ಟು 21,855 ರೈತರು ನೋಂದಣಿಯಾಗಿದ್ದರು. ಅದರಲ್ಲಿ 8,281 ರೈತರ 1,66,409 ಕ್ವಿಂಟಲ್ ರಾಗಿಯನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಪಾಲ್ಗೊಂಡಿದ್ದರು. 

ಜಿಲ್ಲೆಯ ಎಂ.ಎಸ್‌.ಪಿ. ಕೇಂದ್ರಗಳ ವಿವರ
ತಾಲ್ಲೂಕು;ಕೇಂದ್ರಗಳ ಸಂಖ್ಯೆ ಮಂಡ್ಯ;6 ಮದ್ದೂರು;6 ಮಳವಳ್ಳಿ;4 ಕೆ.ಆರ್.ಪೇಟೆ;6 ಪಾಂಡವಪುರ;4 ಶ್ರೀರಂಗಪಟ್ಟಣ;4 ನಾಗಮಂಗಲ;4 ಒಟ್ಟು;34

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.