ಮಂಡ್ಯ: ಪ್ಯಾನ್ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ) ಜೊತೆಗೆ ಆಧಾರ್ ಸಂಖ್ಯೆ ಜೋಡಣೆಯನ್ನು ‘ದಂಡ ಸಹಿತ’ವಾಗಿ ಮಾಡಿದ್ದ ಬಡವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ವಿವಿಧ ಸವಲತ್ತು ಮತ್ತು ‘ಗ್ಯಾರಂಟಿ’ ಯೋಜನೆಗಳಿಂದ ವಂಚಿತರಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ.
ಪ್ಯಾನ್–ಆಧಾರ್ ಜೋಡಣೆಗೆ ನೀಡಿದ್ದ ಕಾಲಮಿತಿ ಮೀರಿದವರು ಕಟ್ಟಿದ್ದ ₹1 ಸಾವಿರ ದಂಡದ ಮೊತ್ತ ಆದಾಯ ತೆರಿಗೆ ಇಲಾಖೆಗೆ (ಐಟಿ) ಪಾವತಿಯಾಗಿತ್ತು. ಈ ಕಾರಣದಿಂದ ಇವರನ್ನು ‘ಆದಾಯ ತೆರಿಗೆ ಪಾವತಿದಾರರು’ ಎಂಬ ಪಟ್ಟಿಗೆ ಸೇರಿಸಲಾಗಿದೆ. ಇದನ್ನೇ ಆಧಾರವಾಗಿ ಇಟ್ಟುಕೊಂಡ ಆಹಾರ ಇಲಾಖೆ ‘ಬಿಪಿಎಲ್ ಕಾರ್ಡ್’ ರದ್ದುಪಡಿಸಲು ಮುಂದಾಗಿದ್ದು, ಬಡವರು ಕಣ್ಣೀರಿಡುವಂತಾಗಿದೆ.
ರಾಜ್ಯದಲ್ಲಿ 1,06,152 ‘ಆದಾಯ ತೆರಿಗೆ ಪಾವತಿದಾರರು’ ಹೊಂದಿರುವ ಅನರ್ಹ ಪಡಿತರ ಚೀಟಿಗಳನ್ನು (ಬಿಪಿಎಲ್/ ಅಂತ್ಯೋದಯ) ರದ್ದುಪಡಿಸಲು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ. ಇದನ್ನು ಆಧರಿಸಿ, ವಿವಿಧ ಜಿಲ್ಲೆಗಳ ಜಂಟಿ ಮತ್ತು ಉಪ ನಿರ್ದೇಶಕರು ಕ್ರಮಕ್ಕೆ ಮುಂದಾಗಿದ್ದಾರೆ. ‘ಈ ಪಟ್ಟಿಯಲ್ಲಿ ಶೇ 50ಕ್ಕೂ ಹೆಚ್ಚು ಬಡವರು ಇದ್ದಾರೆ’ ಎಂಬ ಆರೋಪ ಕೇಳಿಬಂದಿದೆ.
‘ಐಟಿ ಪಾವತಿದಾರರು’ ಎಂಬ ಕಾರಣದಿಂದ ಬಡ ಮಹಿಳೆಯರಿಗೆ ಸಿಗುತ್ತಿದ್ದ ‘ಗೃಹಲಕ್ಷ್ಮಿ’ ಹಣ ನಿಂತು ಹೋಗಿದೆ. ‘ಅನ್ನಭಾಗ್ಯ’ ಯೋಜನೆಯಡಿ ಅಕ್ಕಿಯೂ ಸಿಗುತ್ತಿಲ್ಲ. ಮನೆ ನಿರ್ಮಾಣಕ್ಕೆ ಸಾಲ ಪಡೆಯಲು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದವರಿಗೂ ‘ಗೃಹಲಕ್ಷ್ಮಿ’ ಹಣ ಬರುತ್ತಿಲ್ಲ.
ಬಿಪಿಎಲ್ ಕಾರ್ಡ್‌ನಿಂದ ವಂಚಿತರಾದ ಬಡವರಿಗೆ, ಆದಾಯ ತೆರಿಗೆ ಇಲಾಖೆಯಿಂದ ‘ಎನ್‌ಒಸಿ’ (ನಿರಾಕ್ಷೇಪಣಾ ಪ್ರಮಾಣಪತ್ರ) ತನ್ನಿ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಹೀಗಾಗಿ, ಬಡವರು ಐಟಿ ಕಚೇರಿಗೆ ಅರ್ಜಿ ಸಲ್ಲಿಸಿ, ‘ಎನ್‌ಒಸಿ’ ಕೊಡಿ ಎಂದು ಮೊರೆ ಇಡುತ್ತಿದ್ದಾರೆ.
‘ಮಂಡ್ಯದ ಕಚೇರಿಗೆ 150 ಮಂದಿ ಅರ್ಜಿಗಳನ್ನು ಕೊಟ್ಟಿದ್ದಾರೆ. ಆದರೆ, ನಮ್ಮ ಇಲಾಖೆಯಿಂದ ‘ಎನ್‌ಒಸಿ’ ಕೊಡಲು ಅವಕಾಶವಿಲ್ಲ’ ಎನ್ನುತ್ತಾರೆ ಇಲ್ಲಿನ ಐಟಿ ಅಧಿಕಾರಿಗಳು. ಇದರಿಂದ ಪರಿಹಾರ ಸಿಗದೆ ಬಡವರು ಕಂಗಾಲಾಗಿದ್ದಾರೆ.
‘ಬಿಪಿಎಲ್ ಕಾರ್ಡ್ ರದ್ದಾಗಿರುವ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪಡೆದರೆ ಆಸ್ಪತ್ರೆ ವೆಚ್ಚ ಭರಿಸುವಷ್ಟು ಹಣ ನಮ್ಮ ಬಳಿ ಇಲ್ಲ. ಹೀಗಾಗಿ ಬಿಪಿಎಲ್ ಕಾರ್ಡ್ ಮತ್ತೆ ಕೊಡಿಸಿ’ ಎಂದು ಬಡ ಮಹಿಳೆಯರು ಅಳಲು ತೋಡಿಕೊಂಡರು.
ನಾನು ಆದಾಯ ತೆರಿಗೆ ಪಾವತಿದಾರನಲ್ಲ. ಆದರೂ ಬಿಪಿಎಲ್ ಕಾರ್ಡ್ ರದ್ದುಪಡಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯವರು ‘ಎನ್‌ಒಸಿ’ ಕೊಡುತ್ತಿಲ್ಲ. ಹೀಗಾಗಿ ದಿಕ್ಕೇ ತೋಚದಂತಾಗಿದೆನಿರಂಜನ್ಕುಮಾರ್ ಮಂಡ್ಯ
ಮಂಡ್ಯ ಜಿಲ್ಲೆಯಲ್ಲಿ 5178 ಪಡಿತರ ಚೀಟಿದಾರರು ‘ಆದಾಯ ತೆರಿಗೆ ಪಾವತಿಸುತ್ತಿದ್ದಾರೆ’ ಎಂಬ ಮಾಹಿತಿ ಆಯುಕ್ತರ ಕಚೇರಿಯಿಂದ ಬಂದಿದೆ. ಅನರ್ಹ ಪಡಿತರ ಚೀಟಿ ರದ್ದುಪಡಿಸಲು ಕ್ರಮ ಕೈಗೊಂಡಿದ್ದೇವೆಕೃಷ್ಣಕುಮಾರ್ ಉಪನಿರ್ದೇಶಕ ಆಹಾರ ಇಲಾಖೆ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.