ADVERTISEMENT

ಬೇಬಿಬೆಟ್ಟ ಗಣಿಗಾರಿಕೆ: ಪರೀಕ್ಷಾ ಸ್ಫೋಟಕ್ಕೆ ಬಿಜೆಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 12:39 IST
Last Updated 23 ಫೆಬ್ರುವರಿ 2024, 12:39 IST
ಡಾ.ಎನ್.ಎಸ್.ಇಂದ್ರೇಶ್ ಕುಮಾರ್
ಡಾ.ಎನ್.ಎಸ್.ಇಂದ್ರೇಶ್ ಕುಮಾರ್   

ಪಾಂಡವಪುರ: ಕೆಅರ್‌ಎಸ್ ಅಣೆಕಟ್ಟೆಯ ಹಿತದೃಷ್ಟಿಯಿಂದ ಬೇಬಿಬೆಟ್ಟದಲ್ಲಿ ಗಣಿಗಾರಿಕೆಯ ಸಂಬಂಧ ಪರೀಕ್ಷಾ ಸ್ಫೋಟ ನಡೆಸಿದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಎಚ್ಚರಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರೀಕ್ಷಾ  ಸ್ಫೋಟವನ್ನು ಬಿಜೆಪಿ ವಿರೋಧಿಸುತ್ತದೆ. ಜಿಲ್ಲಾಡಳಿತವು ಜಿಲ್ಲೆಯ ಜನರ ಹಿತಕಾಯಬೇಕಿದೆ ಎಂದರು. ಕೆಆರ್‌ಎಸ್ ಅಣೆಕಟ್ಟೆಯ 20 ಕಿ.ಮೀ.ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಹೈಕೋರ್ಟ್ ನಿಷೇಧಿಸಿದೆ. ಒಂದು ವೇಳೆ ಪರೀಕ್ಷಾರ್ಥ ಸ್ಫೋಟ ನಡೆಸುವುದಾದರೆ ರಾಜ್ಯದಲ್ಲಿರುವ ತಂತ್ರಜ್ಞರಿಂದ ನಡೆಸಬೇಕು. ಜಾರ್ಖಂಡ್ ಹಾಗೂ ಪುಣೆಯ ಖಾಸಗಿ ತಂತ್ರಜ್ಞರಿಂದ ಪರೀಕ್ಷಾ ಸ್ಫೋಟ ನಡೆಸಬಾರದು. ಈ ತಂತ್ರಜ್ಞರು ಪ್ರಭಾವಿಗಳ ಹಣ ಮತ್ತು ಒತ್ತಡಕ್ಕೆ ಮಣಿಯುವ ಎಲ್ಲ ಸಾಧ್ಯತೆಗಳಿವೆ ಎಂದು ಆರೋಪಿಸಿದರು. ಪರೀಕ್ಷಾ ಸ್ಫೋಟ ನಿಲ್ಲಿಸಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

 ಅನುದಾನ ಬಿಡುಗಡೆ ಮಾಡಿ: ಮೇಲುಕೋಟೆ ವೈರಮುಡಿ ಉತ್ಸವಕ್ಕೆ ರಾಜ್ಯ ಸರ್ಕಾರು ವಿಶೇಷ ಅನುದಾನ ಮಾಡಬೇಕಿದೆ. ದೇವಸ್ಥಾನದ ಹಣವನ್ನು ಬಳಸಬಾರದು. ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸರ್ಕಾರದ ಮೇಲೆ ಒತ್ತಡ ತಂದು ವಿಶೇಷ ಅನುದಾನ ಬಿಡುಗಡೆ ಮಾಡಿಸಬೇಕು. ಆ ಮೂಲಕ ವೈರಮುಡಿ ಉತ್ಸವವನ್ನು ವಿಜೃಂಬಣೆಯಿಂದ ನಡೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಂತಿಮಗೊಂಡಿಲ್ಲ: ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಆನಂದ್, ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಅಶೋಕ, ಮುಖಂಡರಾದ ನೀಲನಹಳ್ಳಿ ಧನಂಜಯ, ಚಿಕ್ಕಮರಳಿ ನವೀನ್, ಬಳಿಘಟ್ಟ ಅಶೋಕ, ರಾಜ್‌ಕುಮಾರ್, ಬಾಲಚಂದ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.