ಪಾಂಡವಪುರ: ಸಮಾಜದಲ್ಲಿ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಸೌಲಭ್ಯಗಳು ಸಿಗುವುದಿಲ್ಲ. ಗ್ರಾಮೀಣ ಮಕ್ಕಳ ಉಳಿವಿಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ ಎಂದು ನಟ ಡಾಲಿ ಧನಂಜಯ ಹೇಳಿದರು.
ತಾಲ್ಲೂಕಿನ ಚಲುವರಸಿನಕೊಪ್ಪಲು ಗ್ರಾಮದಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಮಕ್ಕಳ ಕೊರತೆಯ ಕಾರಣವೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಸರ್ಕಾರಿ ಶಾಲೆಗಳು ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಮಕ್ಕಳ ಮತ್ತು ಪೋಷಕರ ಮನವೊಲಿಸಿ ಶಾಲೆ ಬಿಟ್ಟವರನ್ನು ಮತ್ತೆ ಸರ್ಕಾರಿ ಶಾಲೆಗೆ ಕರೆತರಬೇಕಿದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹಳ್ಳಿಗಳು ಅಭಿವೃದ್ಧಿಗೆ ಸರ್ಕಾರಿ ಶಾಲೆಗಳು ಉಳಿಯಬೇಕಿದೆ. ಖಾಸಗಿಯವರು ಶಿಕ್ಷಣವನ್ನು ಉದ್ಯಮ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎನ್ನುವುದು ತಪ್ಪು ತಿಳಿವಳಿಕೆ. ಖಾಸಗಿ ಶಾಲೆಗಷ್ಟೇ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಒದಗಿಸಿದರೆ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಈ ನಿಟ್ಟಿನಲ್ಲಿ ನಾವು ಮೇಲುಕೋಟೆ ಕ್ಷೇತ್ರದಲ್ಲಿ ಕೆಲಸ ಪ್ರಾರಂಭಿಸಿದ್ದೇವೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಶಾಲಾ ಮಕ್ಕಳಿಗೆ ಗುಲಾಬಿ ಹೂವು ನೀಡಿ ಬರಮಾಡಿಕೊಂಡರು. ನಟ ಡಾಲಿ ಧನಂಜಯ ಮಕ್ಕಳಿಗೆ ಕಡ್ಲೆ ಮಿಠಾಯಿ ನೀಡಿ ಬೆನ್ನುತಟ್ಟಿದರು. ಪ್ರಭಾರಿ ಬಿಇಒ ಕೆ.ಆರ್.ಪ್ರಕಾಶ್ ಮಕ್ಕಳಿಗೆ ನೋಟ್ ಬುಕ್, ಪೆನ್ನು ನೀಡಿ ಪ್ರೋತ್ಸಾಹಿಸಿದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಬಸವರಾಜು, ಬಿಆರ್‌ಪಿ ಪ್ರಮೀಳ ಕುಮಾರಿ, ಸಿಆರ್‌ಪಿ ಯೋಗನರಸಿಂಹೇಗೌಡ, ಮುಖ್ಯ ಶಿಕ್ಷಕ ಕೆ.ಬಿ.ಕುಮಾರ್, ಪತ್ನಿ ಸೌಮ್ಯ, ಸಹ ಶಿಕ್ಷಕಿ ರಾಧ, ಕ್ಯಾತನಹಳ್ಳಿ ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈ.ಎಸ್.ಸುಬ್ಬಯ್ಯ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಗ್ರಾ.ಪಂ.ಅಧ್ಯಕ್ಷ ಮಿಥುನ್, ಸದಸ್ಯ ಅರುಣ್, ಎಸ್‌ಡಿಎಂಸಿ ಅಧ್ಯಕ್ಷ ಮಂಜು, ಉಪಾಧ್ಯಕ್ಷೆ ಚೈತ್ರಾ, ಸದಸ್ಯರಾದ ನಾರಾಯಣ್, ಮಂಜುಳ, ಶಂಕರ್, ರಾಣಿ, ನಾಗಮ್ಮ, ಲೋಕೇಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಪುನೀತ್, ಗ್ರಾಮದ ಮುಖಂಡ ಶ್ರೀಕಂಠು, ಛಾಯಗ್ರಾಹಕರಾದ ಕ್ಯಾತನಹಳ್ಳಿ ಗುರು, ಅಮಿತ್ ಹಾಗೂ ಮಕ್ಕಳ ಪೋಷಕರು, ಗ್ರಾಮಸ್ಥರು ಇದ್ದರು.
Cut-off box - ‘ಅಕ್ಕಿ ಕೊಡುವುದು ತಪ್ಪಲ್ಲ’ ಆದಾಯ ಕಡಿಮೆ ಇರುವವರಿಗೆ ಉಚಿತ ಅಕ್ಕಿ ಕೊಟ್ಟರೆ ತಪ್ಪಲ್ಲ. ಉಚಿತ ಭಾಗ್ಯಗಳಿಂದ ಜನ ಸೋಮಾರಿಗಳಾಗುತ್ತಾರೆ ಎನ್ನುವುದು ತಪ್ಪು ಎಂದು ನಟ ಡಾಲಿ ಧನಂಜಯ ಹೇಳಿದರು. ಸರ್ಕಾರ ತಿಂಗಳಿಗೆ ನೀಡುವ 10 ಕೆ.ಜಿ.ಅಕ್ಕಿಯಿಂದ ಊಟ ಮಾಡಿಕೊಂಡು ಮನೆಯಲ್ಲಿ ಕೂರಬೇಕಾಗಲ್ಲ. ಅಕ್ಕಿಕೊಟ್ಟರೆ ಹಸಿವು ನೀಗುತ್ತದೆ. ಆದರೆ ಇತರೆ ಖರ್ಚಿಗೆ ಜನ ದುಡಿದೇ ದುಡಿಯುತ್ತಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.