ಮಂಡ್ಯ: ‘ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರು ರನ್‌ವೇಯಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದು ಸಮ್ಮಿಶ್ರ ಸರ್ಕಾರದ ವಿಮಾನ ಟೇಕಾಫ್ ಆಗಲು ಬಿಡುತ್ತಿಲ್ಲ’ ಎಂದು ಶಾಸಕ ಆರ್.ಅಶೋಕ್ ಕುಟುಕಿದರು.
ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು ‘ರಾಜ್ಯದಲ್ಲಿ ಎಡಬಿಡಂಗಿ ಹಾಗೂ ಎರಡು ತಲೆಯ ಸಮ್ಮಿಶ್ರ ಸರ್ಕಾರವಿದೆ. ಕಾಂಗ್ರೆಸ್–ಜೆಡಿಎಸ್ ಪಕ್ಷಗಳು ಗೋಮುಖ ವ್ಯಾಘ್ರಗಳಾಗಿದ್ದು ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿವೆ. ಅನ್ಯೂನತೆ ಇಲ್ಲದ ಕಾರಣ ಸರ್ಕಾರ ನಡೆಯುತ್ತಿಲ್ಲ. ಟೇಕಾಫ್ ಆಗುವುದಕ್ಕೂ ಮೊದಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿದೇಶಕ್ಕೆ ಹಾರಲಿದ್ದು ಸರ್ಕಾರ ಪತನವಾಗಲಿದೆ’ ಎಂದು ಹೇಳಿದರು.
‘ವಿಧಾನಸಭೆಯಲ್ಲಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್– ಜೆಡಿಎಸ್, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ದೋಸ್ತಿ ಮುಂದುವರಿಸಬೇಕಾಗಿತ್ತು. ಆದರೆ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆಯ ಕೊರತೆಯುಂಟಾಗಿ ಸ್ಥಳೀಯ ಚುನಾವಣೆಯಲ್ಲಿ ಕುಸ್ತಿ ಮಾಡುತ್ತಿವೆ. ಕಪಟ ನಾಟಕ ಪ್ರದರ್ಶಿಸುತ್ತಿವೆ. ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ಹಣ ಇಲ್ಲದಾಗಿದೆ. ರೈತರ ಸಾಲ ಮನ್ನಾ ನೆಪವೊಡ್ಡಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.