ADVERTISEMENT

ಮರುಕಳಿಸುತ್ತಿರುವ ಪೆಲಿಕಾನ್‌ ಸರಣಿ ಸಾವು

ಕೊಕ್ಕರೆ ಬೆಳ್ಳೂರು ಪಕ್ಷಿಧಾಮ: ಹೆಜ್ಜಾರ್ಲೆ ಹೊಟ್ಟೆಯಲ್ಲಿ ಜಂತುಹುಳ ಪತ್ತೆ; ಪಕ್ಷಿ ಪ್ರಿಯರಲ್ಲಿ ಆತಂಕ

ಅಂಬರಹಳ್ಳಿ ಸ್ವಾಮಿ
Published 7 ಜನವರಿ 2021, 4:04 IST
Last Updated 7 ಜನವರಿ 2021, 4:04 IST
ಪೆಲಿಕಾನ್‌
ಪೆಲಿಕಾನ್‌   

ಭಾರತೀನಗರ: ಸಮೀಪದ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆಬೆಳ್ಳೂರಿನಲ್ಲಿ ನಾಲ್ಕು ವರ್ಷಗಳಿಂದೀಚೆಗೆ ಸಂಭವಿಸುತ್ತಿರುವ ಹೆಜ್ಜಾರ್ಲೆ (ಪೆಲಿಕಾನ್‌)ಗಳ ಸರಣಿ ಸಾವು ಪಕ್ಷಿಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.

ಕಳೆದ ನವೆಂಬರ್‌ನಿಂದೀಚೆಗೆ 6 ಪೆಲಿಕಾನ್‌ಗಳು ಮರದ ಮೇಲಿಂದ ಉರುಳಿ ಬಿದ್ದು ಮೃತಪಟ್ಟಿವೆ. 4 ವರ್ಷಗಳಿಂದ 125ಕ್ಕೂ ಹೆಚ್ಚು ಪೆಲಿಕಾನ್‌ಗಳು ಇದೇ ಮಾದರಿಯಲ್ಲಿ ಮೃತಪಡುತ್ತಿವೆ. ಪೆಲಿಕಾನ್‌ಗಳ ಸಾವನ್ನು ತಡೆಯುವಲ್ಲಿ ಅರಣ್ಯ, ಪಶು ಇಲಾಖೆ ಅಧಿಕಾರಿಗಳೂ ಅಸಹಾಯಕರಾಗಿದ್ದಾರೆ.

ಪೆಲಿಕಾನ್‌ಗಳ ಸಾವಿಗೆ ಕಾರಣ ತಿಳಿಯಲು ಪೆಲಿಕಾನ್‌ಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಜಂತುಹುಳಗಳ ರಾಶಿ ಕಂಡುಬಂದಿದೆ. ಆದರೆ, ಈ ಜಂತುಹುಳುಗಳ ಮೂಲ ಯಾವುದು ಎಂಬುದೇ ತಿಳಿಯುತ್ತಿಲ್ಲ.

ADVERTISEMENT

ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಸಂತಾನೋತ್ಪತ್ತಿಗಾಗಿ ಪೆಲಿಕಾನ್ ಹಾಗೂ ಬಣ್ಣದ ಕೊಕ್ಕರೆಗಳು ಗ್ರಾಮಕ್ಕೆ ಬರುತ್ತವೆ. ಗ್ರಾಮದ ನಡುವೆ ಇರುವ ಮರಗಳ ಮೇಲೆ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿ ಮಾಡಿ ಮರಿಗಳ ಜತೆಗೆ ಜೂನ್‌, ಜುಲೈನಲ್ಲಿ ವಾಪಾಸಾಗುತ್ತವೆ.

ಪೆಲಿಕಾನ್‌ಗಳು ಆಹಾರಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಕೆರೆ, ಕಟ್ಟೆಗಳು, ಶಿಂಷಾ ನದಿಯನ್ನು ಅವಲಂಬಿಸಿವೆ. ಈ ಜಲಮೂಲಗಳ ನೀರು ಕಲುಷಿತವಾಗಿರುವುದರಿಂದಲೇ ಪೆಲಿಕಾನ್‌ಗಳಲ್ಲಿ ಜಂತುಹುಳ ಹೆಚ್ಚಲು ಕಾರಣ ಎಂಬುದು ತಜ್ಞರ ಅಭಿಪ್ರಾಯ.

ಗ್ರಾಮದಲ್ಲಿ ಮೃತಪಟ್ಟ ಪ್ರತಿ ಪೆಲಿಕಾನ್‌ಗಳ ಕಳೇಬರ ಪರೀಕ್ಷಿಸುವ ಪಶು ವೈದ್ಯ ಸತೀಶ್‌ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮೃತಪಟ್ಟ ಪೆಲಿಕಾನ್‌ಗಳ ದೇಹದ ಮಾದರಿಯನ್ನು ಉತ್ತರ ಪ್ರದೇಶದಲ್ಲಿರುವ ‘ಇಂಡಿಯನ್‌ ವೆಟರ್ನರಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌’ ಹಾಗೂ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ‘ಸಕಾನ್‌’ ಸಂಸ್ಥೆಗೆ ಕಳುಹಿಸಿದ್ದೇವೆ. ಮೃತಪಟ್ಟ ಎಲ್ಲ ಪೆಲಿಕಾನ್‌ಗಳು ಜಂತುಹುಳು ಬಾಧೆಯಿಂದ ಮೃತಪಟ್ಟಿವೆ ಎಂದು ವರದಿ ಬಂದಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.