ADVERTISEMENT

ಶ್ರೀರಂಗಪಟ್ಟಣ: ಕಸದ ತೊಟ್ಟಿಯಾದ ಕಾವೇರಿ ನದಿ!

ಗಣಂಗೂರು ನಂಜೇಗೌಡ
Published 5 ಜನವರಿ 2024, 7:14 IST
Last Updated 5 ಜನವರಿ 2024, 7:14 IST
ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ, ಕಾವೇರಿ ನದಿಗೆ ತ್ಯಾಜ್ಯವನ್ನು ಸುರಿಯುತ್ತಿರುವುದು
ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ, ಕಾವೇರಿ ನದಿಗೆ ತ್ಯಾಜ್ಯವನ್ನು ಸುರಿಯುತ್ತಿರುವುದು   

ಶ್ರೀರಂಗಪಟ್ಟಣ: ದಕ್ಷಿಣದ ಗಂಗೆ ಎಂದೇ ಪ್ರಸಿದ್ಧಿಯಾದ ಕಾವೇರಿ ನದಿಗೆ ಸ್ಥಳೀಯರು ಮತ್ತು ಯಾತ್ರಾರ್ಥಿಗಳು ಅಡೆತಡೆಯಿಲ್ಲದೆ ತ್ಯಾಜ್ಯವನ್ನು ಸುರಿಯುತ್ತಿದ್ದು, ಪವಿತ್ರ ನದಿ ಕಸದ ತೊಟ್ಟಿಯಂತೆ ಬಳಕೆಯಾಗುತ್ತಿದೆ.

ಪಟ್ಟಣದಲ್ಲಿ ಕೋಳಿ ಮಾಂಸ ಮತ್ತು ಮೀನು ಮಾರಾಟದ ಅಂಗಡಿಗಳನ್ನು ನಡೆಸುವವರು ಅಳಿದುಳಿದ ತಾಜ್ಯವನ್ನು ತಂದು ನದಿಗೆ ಸುರಿಯುತ್ತಿದ್ದಾರೆ. ಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲಿಂದ ಚೀಲ, ಬಕೆಟ್‌ಗಳಲ್ಲಿ ರಾಶಿಗಟ್ಟಲೆ ತ್ಯಾಜ್ಯವನ್ನು ಪ್ರತಿ ದಿನ ಸುರಿಯಲಾಗುತ್ತಿದೆ. ದೇವಸ್ಥಾನ ಇತರೆಡೆ ಧಾರ್ಮಿಕ ಕಾರ್ಯಗಳಿಗೆ ಬಳಸುವ ಹೂ, ಬಾಳೆ ಕಂದು ಇತರ ತ್ಯಾಜ್ಯ ಹಾಗೂ ಬಟ್ಟೆಗಳನ್ನು ನದಿಗೆ ಎಸೆಯಲಾಗುತ್ತಿದೆ. ಪಟ್ಟಣ ಮತ್ತು ಗಂಜಾಂ ವಸತಿ ಪ್ರದೇಶದ ಕೊಳಚೆ ನೀರು ಕೆಲವೆಡೆ ನದಿಗೆ ಸೇರುವುದರಿಂದ ನೀರು ಮಲಿನವಾಗುತ್ತಿದ್ದು, ತ್ಯಾಜ್ಯವನ್ನು ನೇರವಾಗಿ ಸುರಿಯುವ ಮೂಲಕ ನದಿಯ ನೀರನ್ನು ಮತ್ತಷ್ಟು ಕಲುಷಿತ ಮಾಡಲಾಗುತ್ತಿದೆ.

ನದಿಯ ತಗ್ಗಿನಲ್ಲಿರುವ ನಿಮಿಷಾಂಬ ದೇವಾಲಯ, ಗೋಸಾಯಿಘಾಟ್‌ ಇತರೆಡೆ ಭಕ್ತರು ಇದೇ ತ್ಯಾಜ್ಯಯುಕ್ತ ನೀರನ್ನೇ ಪವಿತ್ರ ಜಲವೆಂದು ಭಾವಿಸಿ ಕುಡಿಯುತ್ತಾರೆ. ಇದೇ ನೀರಿನಲ್ಲಿ ಸ್ನಾನವನ್ನೂ ಮಾಡುತ್ತಾರೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಮೈ ತುರಿಕೆ ಉಂಟಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ನದಿಗೆ ಮಲಿನ ನೀರು ಸೇರುವುದನ್ನು ಮತ್ತು ತ್ಯಾಜ್ಯ ಸುರಿಯುವುದನ್ನು ತಡೆಯಲು ಸ್ಥಳೀಯ ಪುರಸಭೆ ವಿಫಲವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕಾವೇರಿ ನದಿಗೆ ಕೊಳಚೆ ನೀರು ಸೇರುವುದನ್ನು ತಡೆಯುವ ಉದ್ದೇಶದಿಂದ ₹5 ಕೋಟಿ ವೆಚ್ಚದಲ್ಲಿ, ಪಟ್ಟಣ ಮತ್ತು ಗಂಜಾಂಗಳಲ್ಲಿ ಒಳ ಚರಂಡಿ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆದರೂ ಹೋಟೆಲ್‌ ಮತ್ತು ಮನೆಗಳಿಂದ ಹೊರ ಬೀಳುವ ಕೊಳಚೆ ನೀರು ನೇರವಾಗಿ ನದಿಯ ಒಡಲು ಸೇರುತ್ತಿದೆ. ಇದರಿಂದ ಜಲಚರಗಳಿಗೂ ತೊಂದರೆಯಾಗುತ್ತಿದೆ. ಮಲಿನ ನೀರು ನದಿಗೆ ಸೇರುವುದನ್ನು ತಡೆಯಲು ಅಗತ್ಯ ಕ್ರಮ ವಹಿಸಬೇಕು. ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಗಂಜಾಂನ ವಕೀಲ ಜಿ.ಎನ್‌. ರವೀಶ್‌ ಒತ್ತಾಯಿಸಿದ್ದಾರೆ.

‘ಪಟ್ಟಣದ ಒಳಚರಂಡಿ ವ್ಯವಸ್ಥೆಯಲ್ಲಿ ಕೆಲವೆಡೆ ಲೋಪ ಇದ್ದು ಆದಷ್ಟು ಶೀಘ್ರ ಸರಿಪಡಿಸಲಾಗುವುದು. ನದಿಗೆ ತ್ಯಾಜ್ಯ ಹಾಕದಂತೆ ನದಿ ತೀರಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಲಾಗುವುದು’ ಎಂದು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜಿ.ಎನ್‌. ರವೀಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.