ADVERTISEMENT

ವ್ಯಕ್ತಿ ಪ್ರತಿಷ್ಠೆಯಿಂದ ಕಸಾಪಗೆ ಸಮಸ್ಯೆ: ನರಹಳ್ಳಿ ಬಾಲಸುಬ್ರಹ್ಮಣ್ಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 13:01 IST
Last Updated 20 ನವೆಂಬರ್ 2024, 13:01 IST
<div class="paragraphs"><p>ನರಹಳ್ಳಿ ಬಾಲಸುಬ್ರಹ್ಮಣ್ಯ </p></div>

ನರಹಳ್ಳಿ ಬಾಲಸುಬ್ರಹ್ಮಣ್ಯ

   

ಮಂಡ್ಯ: ವ್ಯಕ್ತಿ ಪ್ರತಿಷ್ಠೆ ಇದ್ದ ಕಡೆ ಉದ್ದೇಶದ ದಿಕ್ಕೇ ಬದಲಾಗುತ್ತದೆ. ವಿಷಯವೇ ನಗಣ್ಯವಾಗುತ್ತದೆ. ವ್ಯಕ್ತಿಗಿಂತ ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡದು ಎಂದು ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಹೇಶ ಜೋಶಿ ಹೆಸರು ಹೇಳದೇ ಟೀಕಿಸಿದರು. ‌

ಇಲ್ಲಿ ಮಾತನಾಡಿದ ಅವರು, ‘7 ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತಿನ ನೇತೃತ್ವವನ್ನು ಸಾಹಿತಿಗಳಲ್ಲದವರು ವಹಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪರಿಷತ್ತು ಅಧಿಕಾರದ ಕೇಂದ್ರವಾಗಿದೆ. ಸಾಹಿತ್ಯ ಕೂಡ ಧರ್ಮ ಮತ್ತು ರಾಜಕೀಯದ ಅಧೀನಕ್ಕೆ ಒಳಪಡುತ್ತಿದೆ ಎಂಬ ಆತಂಕ ಕಾಡುತ್ತಿದೆ’ ಎಂದರು.

ADVERTISEMENT

‘ಯಕ್ಷಗಾನ ಮಂಡ್ಯ ಜಿಲ್ಲೆಯ ಕೊಡುಗೆ’

ಮಂಡ್ಯ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ. ‘ಮೂಡಲಪಾಯ ಯಕ್ಷಗಾನ’ ಈ ಮಣ್ಣಿನ ಕಲೆಯಾಗಿದೆ. ಹೀಗಾಗಿ ‘ಯಕ್ಷಗಾನ’ವು ಮಂಡ್ಯದ ಕೊಡುಗೆ ಎಂಬುದನ್ನು ಸಮ್ಮೇಳನದಲ್ಲಿ ಸಾಬೀತು ಮಾಡಿ ತೋರಬೇಕಿದೆ. ಕುವೆಂಪು ಅವರಿಗೆ ‘ನೇಗಿಲ ಯೋಗಿ’ ಮತ್ತು ‘ವಿಚಾರಕ್ರಾಂತಿ’ ಪರಿಕಲ್ಪನೆಗಳು ಮೂಡಿದ್ದು ಮಂಡ್ಯ ಜಿಲ್ಲೆಯಿಂದಲೇ. ಇಲ್ಲಿನ ಕೃಷಿ ಸಂಪತ್ತು ಮತ್ತು ಸಾಹಿತ್ಯ ಸಂಪತ್ತು ಶ್ರೇಷ್ಠವಾಗಿದೆ. ಬಿಎಂಶ್ರೀ, ತ್ರಿವೇಣಿ, ಪುತಿನ, ಕೆಎಸ್‌ನ, ತ್ರಿವೇಣಿ ಮಂಡ್ಯ ಜಿಲ್ಲೆಯವರು. ಮಂಡ್ಯ ಎಂದರೆ ಕಾವೇರಿ ಚಳವಳಿ, ಕಬ್ಬು, ಒರಟು ಜನ, ಜಗಳಗಂಟರು ಎಂದು ತಪ್ಪಾಗಿ ಬಿಂಬಿತವಾಗಿದೆ. ಜಿಲ್ಲೆಯ ಸಾಂಸ್ಕೃತಿಕ ಸಂಪತ್ತಿನ ಬಗ್ಗೆ ಗೋಷ್ಠಿಗಳಲ್ಲಿ ಚರ್ಚೆಯಾಗಿ ರಾಷ್ಟ್ರಮಟ್ಟದಲ್ಲಿ ಬಿಂಬಿತವಾಗಬೇಕು ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರತಿಪಾದಿಸಿದರು.

‘ಹಣ ಉಳಿಸಿ, ಗ್ರಂಥಾಲಯ ನಿರ್ಮಿಸಿ’

ಮಂಡ್ಯದಲ್ಲಿ ನಡೆಯಲಿರುವ 87ನೇ ನುಡಿಜಾತ್ರೆಗೆ ₹25 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. ಕನಿಷ್ಠ ₹2.5 ಕೋಟಿ ಉಳಿಸಿದರೂ, ನಾಡಿನ ಪ್ರಮುಖ ಲೇಖಕರ ಎಲ್ಲ ಕೃತಿಗಳು ಒಂದೇ ಕಡೆ ಸಿಗುವ ಗ್ರಂಥಾಲಯ ನಿರ್ಮಿಸಬಹುದು. ಇಂಥದ್ದೊಂದು ಗ್ರಂಥಾಲಯದ ಕೊರತೆ ಇಂದಿಗೂ ಕಾಡುತ್ತಿದೆ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು. 

‘ಸಮ್ಮೇಳನಗಳಲ್ಲಿ ಸಾಹಿತ್ಯ ಬಿಟ್ಟು ಉಳಿದೆಲ್ಲ ವಿಚಾರ ಚರ್ಚೆಯಾಗುತ್ತದೆ. ಗೋಷ್ಠಿಗಿಂತ ಊಟಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಇದು ಆಹಾರ ಸಮ್ಮೇಳನವಲ್ಲ. ಬಂದವರಿಗೆ ಸರಳವಾಗಿ ಬಿಸಿಬೇಳೆಬಾತ್‌–ಮೊಸರನ್ನ ಕೊಟ್ಟರೂ ಸಾಕು. 3 ವರ್ಷಗಳಿಂದ ಗ್ರಂಥಾಲಯಗಳಿಗೆ ಸರ್ಕಾರ ಕನ್ನಡ ಪುಸ್ತಕಗಳನ್ನೇ ಖರೀದಿಸಿಲ್ಲ, ಆದರೆ, ಶಾಸಕರ ಖರೀದಿ ಕೋಟಿಗಳ ಲೆಕ್ಕದಲ್ಲಿ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.