ಮಂಡ್ಯ: ‘ಪಿಇಎಸ್ ಪದವಿ ಕಾಲೇಜು ಸಿಬ್ಬಂದಿಯ ಅಸಹಕಾರದಿಂದಾಗಿ ಬೀಬಿ ಮುಸ್ಕಾನ್ ಖಾನ್ ಪದವಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ವಿದ್ಯಾರ್ಥಿನಿಗೆ ಪ್ರತ್ಯೇಕವಾಗಿ ಪರೀಕ್ಷೆ ನೀಡಬೇಕು ಎಂಬ ಬೇಡಿಕೆ ಈಡೇರಿಸಲಿಲ್ಲ, ಪರೀಕ್ಷಾ ಕೇಂದ್ರ ಬದಲಾವಣೆಗೆ ಸರಿಯಾದ ಸಮಯದಲ್ಲಿ ನಿರಾಪೇಕ್ಷಣಾ ಪತ್ರ ನೀಡಲಿಲ್ಲ’ ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದಾರೆ.
ನಗರದ ಪಿಇಎಸ್ ಪದವಿ ಕಾಲೇಜು ಆವರಣದಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಬೀಬಿ ಮಸ್ಕಾನ್ ಖಾನ್ ಮಾರ್ಚ್ 24ರಿಂದ ಆರಂಭವಾಗಿರುವ ಬಿಕಾಂ 3ನೇ ಸೆಮಿಸ್ಟರ್ ಪರೀಕ್ಷೆಯಿಂದ ದೂರ ಉಳಿದರು. ಭದ್ರತೆಯೊಂದಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಬೇಕು ಎಂದು ಆಕೆಯ ಕುಟುಂಬ ಸದಸ್ಯರು ಕಾಲೇಜಿಗೆ ಮನವಿ ಮಾಡಿದ್ದರು. ಆದರೆ ಕಾಲೇಜು ಆಡಳಿತ ಮಂಡಳಿ ಇದಕ್ಕೆ ಒಪ್ಪಲಿಲ್ಲ.
ಬೇರೆ ಕಾಲೇಜಿನಲ್ಲಿ ಪರೀಕ್ಷೆ ಬರೆಸಲು ಅನುಮತಿ ನೀಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದರು. ಪರೀಕ್ಷೆಯ ಅಂತಿಮ ಕ್ಷಣದಲ್ಲಿ ಇದು ಅಸಾಧ್ಯ ಎಂದು ವಿ.ವಿ ಅಧಿಕಾರಿಗಳು ತಿಳಿಸಿದ ಕಾರಣ ಮುಸ್ಕಾನ್ ಖಾನ್ ಪರೀಕ್ಷೆಯಿಂದ ದೂರ ಉಳಿದರು.
‘ವಿದ್ಯಾರ್ಥಿನಿಯ ಭವಿಷ್ಯದ ದೃಷ್ಟಿಯಿಂದ ಪಿಇಎಸ್ ಕಾಲೇಜು ಪ್ರಾಚಾರ್ಯರು ಸರಿಯಾದ ಸಮಯದಲ್ಲಿ ನಿರ್ಧಾರ ಕೈಗೊಂಡಿದ್ದರೆ ಪರೀಕ್ಷೆ ಬರೆಸಬಹುದಿತ್ತು, ಆದರೆ ಪ್ರಾಚಾರ್ಯರು ಕೈಚೆಲ್ಲಿದರು’ ಎಂದು ಮುಸ್ಕಾನ್ ಖಾನ್ ಪೋಷಕರು ಆರೋಪಿಸಿದರು.
‘ಪಿಇಎಸ್ ಕಾಲೇಜಿನಲ್ಲಿ ಮಗಳ ಜೀವಕ್ಕೆ ಅಪಾಯವಿದೆ. ಕೇಸರಿ ಶಾಲು ಧರಿಸಿ ಹಿಂಬಾಲಿಸಿದವರು ಮಗಳ ಮೇಲೆ ದ್ವೇಷ ಇಟ್ಟುಕೊಂಡಿದ್ದಾರೆ. ಹೀಗಾಗಿ ಮಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಕೊಡಿ ಎಂದು ಕೇಳಿದ್ದೆವು. ಇಲ್ಲದಿದ್ದರೆ ವಿದ್ಯಾರ್ಥಿನಿಯರ ಜೊತೆ ಪರೀಕ್ಷೆ ಬರೆಸಿ ಎಂದು ಮನವಿ ಮಾಡಿದ್ದೆವು. ಅದು ಸಾಧ್ಯವಾಗದಿದ್ದರೆ ಟಿ.ಸಿ ಕೊಡಿ ಎಂದು 15 ದಿನಗಳ ಹಿಂದೆಯೇ ಕೇಳಿದ್ದವು. ಆದರೆ ಪರೀಕ್ಷೆಗೆ 3 ದಿನ ಇರುವಾಗ ಮಾರ್ಚ್ 21ರಂದು ನಿರಾಪೇಕ್ಷಣಾ ಪತ್ರ ಕೊಟ್ಟರು. ಕಡಿಮೆ ಅವಧಿಯಲ್ಲಿ ಕಾಲೇಜು ಬದಲಾಯಿಸಲು ವಿಶ್ವವಿದ್ಯಾಲಯ ಒಪ್ಪಲಿಲ್ಲ’ ಎಂದು ಮುಸ್ಕಾನ್ ಖಾನ್ ತಂದೆ ಮೊಹಮ್ಮದ್ ಹುಸೇನ್ ಖಾನ್ ತಿಳಿಸಿದರು.
ಎಂಇಎಸ್ ಕಾಲೇಜು ಪತ್ರ: ಕಾಲೇಜು ವರ್ಗಾವಣೆಯಾದರೆ ಪರೀಕ್ಷೆ ನೀಡುವುದಾಗಿ ಮೈಸೂರಿನ ಎಂಇಎಸ್ ಕಾಲೇಜು ಒಪ್ಪಿಗೆ ನೀಡಿತ್ತು. ಎಂಇಎಸ್ ಕಾಲೇಜು ಪ್ರಾಚಾರ್ಯರು ಪೋಷಕರ ಮನವಿ ಪತ್ರದೊಂದಿಗೆ ಮೈಸೂರು ವಿವಿ ಕುಲಸಚಿವರಿಗೆ (ಪರೀಕ್ಷಾಂಗ) ಮಾರ್ಚ್ 23 ಪತ್ರವನ್ನೂ ಬರೆದಿದ್ದರು. ಕಾಲೇಜು ಬದಲಾವಣೆಗೆ ಕನಿಷ್ಠ 15 ದಿನ ಬೇಕು, ಕೇವಲ 1 ದಿನದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂಬ ಉತ್ತರ ಬಂದ ಕಾರಣ ಕಾಲೇಜು ಬದಲಾವಣೆ ಸಾಧ್ಯವಾಗಿಲ್ಲ.
‘ಮಗಳ ಪರೀಕ್ಷೆ ಬರೆಸಲು ಮಾಡಬೇಕಾದ ಎಲ್ಲಾ ಯತ್ನ ಮಾಡಿ ವಿಫಲರಾದೆವು. ಮಗಳ ಸುರಕ್ಷತೆಯ ಬಗ್ಗೆ ಪಿಇಎಸ್ ಕಾಲೇಜು ಭರವಸೆ ನೀಡಲಿಲ್ಲ. ಹೀಗಾಗಿ ಕಾಲೇಜು ಬದಲಾವಣೆಗೆ ಪ್ರಯತ್ನ ಮಾಡಿದೆವು. ಪರೀಕ್ಷೆಯನ್ನೂ ಕೊಡಲಿಲ್ಲ, ಪರೀಕ್ಷಾ ಕೇಂದ್ರ ಬದಲಾವಣೆಗೂ ಸಹಾಯ ಮಾಡಲಿಲ್ಲ. ಕಾಲೇಜಿನ ತಪ್ಪಿನಿಂದ ಮಗಳ ಪರೀಕ್ಷೆ ತಪ್ಪಿ ಹೋಯಿತು. ಕಾಲೇಜು ಪ್ರಾಂಶುಪಾಲರ ವಿರುದ್ಧ ನ್ಯಾಯಾಲದಯಲ್ಲಿ ದಾವೆ ಹೂಡಲಾಗುವುದು’ ಎಂದು ಮೊಹಮ್ಮದ್ ಹುಸೇನ್ ಖಾನ್ ಎಚ್ಚರಿಸಿದರು.
‘ನಾನು ಈಗಲೂ ಪರೀಕ್ಷೆಗೆ ಸಿದ್ಧವಾಗಿದ್ದೇನೆ. ಸರ್ಕಾರ ಮಧ್ಯ ಪ್ರವೇಶ ಮಾಡಿ ಮರು ಪರೀಕ್ಷೆ ಕೊಡಿಸಬೇಕು’ ಎಂದು ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಮನವಿ ಮಾಡಿದರು.
‘ಪರೀಕ್ಷೆ ನೀಡುವ ವಿಚಾರದಲ್ಲಿ ಕಾಲೇಜು ಹಾಗೂ ಆಡಳಿತ ಮಂಡಳಿ ಯಾವುದೇ ತಪ್ಪು ಮಾಡಿಲ್ಲ. ಪೋಷಕರ ಆರೋಪಗಳಿಗೆ ನಾನು ಉತ್ತರ ನೀಡುವುದಿಲ್ಲ’ ಎಂದು ಪಿಇಎಸ್ ಪದವಿ ಕಾಲೇಜು ಪ್ರಾಚಾರ್ಯ ಡಾ.ಜೆ.ಮಹಾದೇವ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.