ಮಂಡ್ಯ: ತಮಿಳುನಾಡು ಮೂಲದ ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದವರಿಗೆ ಜಿಲ್ಲೆಯಲ್ಲಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಲಾಗಿದೆ. ಅವರನ್ನು ‘ಗೌಡಾ’ (ಗೌರವ ಡಾಕ್ಟರೇಟ್) ಎಂದ ಪದದಿಂದ ಗುರುತಿಸಲಾಗುತ್ತಿದೆ.
ಪ್ರಶಸ್ತಿ ಬಂದಾಗ ಅಭಿನಂದನಾ ಕಾರ್ಯಕ್ರಮ ಆಯೋಜಿಸುವಂತೆ ಗೌರವ ಡಾಕ್ಟರೇಟ್ ಪಡೆದವರಿಗೂ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಪದವಿ ಪುರಸ್ಕೃತರನ್ನು ಸಾರೋಟಿನಲ್ಲಿ ಕೂರಿಸಿಕೊಂಡು ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತಂದಿದ್ದಾರೆ. ಹೋಟೆಲ್ ಕಲ್ಯಾಣ ಮಂಟಪಗಳಲ್ಲಿ ವೈಭವಯುತವಾಗಿ ಕಾರ್ಯಕ್ರಮಗಳು ನಡೆದಿದ್ದು, ಕೆಲ ಪುರಸ್ಕೃತರ ಹೆಸರಿನಲ್ಲಿ ಅಭಿಮಾನಿಗಳ ಸಂಘಗಳೂ ರಚನೆಯಾಗಿವೆ.
ಗೌರವ ಡಾಕ್ಟರೇಟ್ ಪಡೆದವರು ಗೆಳೆಯರಿಗೆ ಪಾರ್ಟಿ ನೀಡುವುದು ಕಡ್ಡಾಯವಾಗಿದ್ದು ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಪದವಿ ಖರೀದಿಗಷ್ಟೇ ಅಲ್ಲದೇ, ಪಾರ್ಟಿಗೂ ಅಪಾರ ಹಣ ಸುರಿಯುತ್ತಿದ್ದಾರೆ. ‘ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಅಭಿನಂದನಾ ಸಮಾರಂಭಕ್ಕಿಂತಲೂ
ಪಾರ್ಟಿಯೇ ಭರ್ಜರಿಯಾಗಿ ನಡೆಯುತ್ತಿವೆ’ ಎಂದು ಗೌರವ ಡಾಕ್ಟರೇಟ್ ಪುರಸ್ಕೃತರ ಸ್ನೇಹಿತರೊಬ್ಬರು ತಿಳಿಸಿದರು.
3 ದಿನ ಪ್ರವಾಸ: ಕಲ್ಲು ಗಣಿಗಳ ಲಾರಿ ಮಾಲೀಕರ ಸಂಘದ ಪದಾಧಿಕಾರಿ, ಪಕ್ಷವೊಂದರ ಮುಖಂಡರೊಬ್ಬರು ಪುದುಚೇರಿಗೆ ತೆರಳಿ ಪದವಿ ಸ್ವೀಕರಿಸಿದ್ದಾರೆ. ತಮ್ಮ ಜೊತೆಯಲ್ಲಿ ಬೆಂಬಲಿಗರನ್ನೂ ನಾಲ್ಕು ಬಸ್‌ಗಳಲ್ಲಿ ಕರೆದೊಯ್ದಿದ್ದರು. ಸಮಾರಂಭದ ನಂತರ ಮೂರು ದಿನಗಳು ತಮಿಳುನಾಡು ಪ್ರವಾಸ ಭಾಗ್ಯವನ್ನೂ ಕರುಣಿಸಿದ್ದರು.
ಪದವಿ ಸ್ವೀಕಾರ ಮಾಡಿ ತವರಿಗೆ ಬಂದ ನಂತರ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದಿದೆ. ಜೊತೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಫ್ಲೆಕ್ಸ್ ಅಳವಡಿಸಿ ಬೆಂಬಲಿಗರು ಅಭಿನಂದನೆ ಸಲ್ಲಿಸಿದ್ದಾರೆ. ಫ್ಲೆಕ್ಸ್ ಹಾವಳಿ ಕೆ.ಆರ್.ಪೇಟೆಯಲ್ಲೂ ವಿಪರೀತವಾಗಿದೆ. ಮಾಜಿ ಶಾಸಕರೊಬ್ಬರಿಗೆ ಗೌರವ ಡಾಕ್ಟರೇಟ್ ಬಂದಾಗ ಕೆ.ಆರ್. ಪೇಟೆಯ ಮೂಲೆಮೂಲೆಯಲ್ಲಿ ಫ್ಲೆಕ್ಸ್ ಅಳವಡಿಸಿದ್ದು ಅಲ್ಲಿನ ಜನರಿಗೆ ಕಣ್ಣಿಗೆ ಕಟ್ಟಿದಂತಿದೆ.
ಅಪ್ಪನಿಗೆ ಉಡುಗೊರೆ: ವಿಶೇಷವೆಂದರೆ ಮಕ್ಕಳು ತಾವು ಪದವಿ ಸ್ವೀಕರಿಸುವುದು ಮಾತ್ರವಲ್ಲದೇ ತಂದೆಗೂ ಪದವಿ ಕೊಡಿಸಿದ್ದಾರೆ. ‘ಸಮಾಜ ಸೇವೆ’ ಹೆಸರಿನಲ್ಲಿ ಅವರು ಪದವಿ ಪಡೆದಿದ್ದಾರೆ. ಸ್ವಾಮೀಜಿಯೊಬ್ಬರನ್ನು ಭಕ್ತರು ಬೆಂಗಳೂರಿಗೆ ಕರೆದೊಯ್ದು ಪದವಿಯ ಉಡುಗೊರೆ ಕೊಟ್ಟಿದ್ದಾರೆ.
ಅರ್ಹರಿಗೂ ಗೌರವ ಡಾಕ್ಟರೇಟ್ ಸಿಕ್ಕಿದೆ
‘ವಿಶ್ವ ಶಾಂತಿ ಹೆಸರಿನ ವಿವಿಯೊಂದು ಶಾಂತಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಕೃಷ್ಣ ಎಂಬುವವರಿಗೆ ಗೌರವ ಡಾಕ್ಟರೇಟ್ ಕೊಟ್ಟಿದೆ. ಅವರು ನಿಜವಾಗಿಯೂ ಆ ಪದವಿಗೆ ಅರ್ಹರು. ಅವರನ್ನು ಕರೆದು ನಮ್ಮ ‘ದೇವರ ಕಾಡು ಬಳಗ’ದಿಂದ ಅಭಿನಂದಿಸಿದ್ದೇವೆ. ಅರ್ಹರಿಗೂ ಪದವಿ ಸಿಕ್ಕಿದೆ. ಆದರೆ ಕೆಲವರು ಪದವಿಗಳನ್ನು ಖರೀದಿ ಮಾಡಿದ್ದಾರೆ. ಅದು ತಪ್ಪು, ನಾನು ಅದರ ವಿರುದ್ಧ ಜಿಲ್ಲೆಯಲ್ಲಿ ಧ್ವನಿ ಎತ್ತುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಕೋಳಿಮೊಟ್ಟೆ ವ್ಯಾಪಾರಿಗೆ ಡಾಕ್ಟರೇಟ್!
ಕೆ.ಆರ್.ಪೇಟೆ ತಾಲ್ಲೂಕು ಕಿಕ್ಕೇರಿಯಲ್ಲಿ ಕೋಳಿಮೊಟ್ಟೆ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿಯೊಬ್ಬರು ‘ಸಮಾಜ ಸೇವೆ’ ಹೆಸರಿನಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಲೇವಾದೇವಿ ವ್ಯವಹಾರವನ್ನೂ ಮಾಡುವ ಅವರು, ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯೂ ಆಗಿದ್ದಾರೆ. ಪದವಿ ಪಡೆದ ನಂತರ ಅವರನ್ನು ಹಲವು ಸಂಘ ಸಂಸ್ಥೆಗಳು ಅಭಿನಂದಿಸಿವೆ.
ವಿವಿಧೆಡೆ ಫ್ಲೆಕ್ಸ್ ತೆರವು
ನೌಕರರೊಬ್ಬರಿಗೆ ಗೌರವ ಡಾಕ್ಟರೇಟ್ ಪದವಿ ಬಂದಿರುವ ಬಗ್ಗೆ ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಆರೋಗ್ಯ ಇಲಾಖೆ ಕಚೇರಿ ಎದುರು ಫ್ಲೆಕ್ಸ್ ಅಳವಡಿಸಲಾಗಿತ್ತು. ‘ಪ್ರಜಾವಾಣಿ‘ಯಲ್ಲಿ ಶುಕ್ರವಾರ ವರದಿ ಪ್ರಕಟಗೊಳ್ಳುತ್ತಿದ್ದಂತೆಯೇ ಫ್ಲೆಕ್ಸ್ ತೆರವುಗೊಂಡಿದೆ. ಆರ್‌ಪಿ ರಸ್ತೆಯಲ್ಲಿ ಪತ್ರಿಕಾ ಏಜೆಂಟರೊಬ್ಬರ ಹೆಸರಿನಲ್ಲಿ ಹಾಕಿದ್ದ ಫ್ಲೆಕ್ಸ್ ಕೂಡ ಕಾಣೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.