ADVERTISEMENT

ಮಂಡ್ಯ ಕಾಳಸಂತೆಯಲ್ಲಿ ಮಾತ್ರೆ ಮಾರಾಟ: 4 ಔಷಧ ಅಂಗಡಿ ಬಂದ್, 30 ಲೈಸೆನ್ಸ್‌ ಅಮಾನತು

ಎಂ.ಎನ್.ಯೋಗೇಶ್‌
Published 7 ಜೂನ್ 2024, 23:41 IST
Last Updated 7 ಜೂನ್ 2024, 23:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಡ್ಯ: ಜಿಲ್ಲೆಯಲ್ಲಿ ಭ್ರೂಣಹತ್ಯೆ ಮಾತ್ರೆ (ಎಂಟಿಪಿ ಕಿಟ್‌) ಮಾರಾಟದ ಲೆಕ್ಕ ನೀಡದ ಸಗಟು ಔಷಧ ಮಾರಾಟಗಾರರು, ಚಿಲ್ಲರೆ ಔಷಧಿ ಅಂಗಡಿ ಮಾಲೀಕರ ವಿರುದ್ಧ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಕಠಿಣ ಕ್ರಮ ಜರುಗಿಸಿದ್ದಾರೆ. ವಾರದಿಂದೀಚೆಗೆ ಜಿಲ್ಲೆಯಲ್ಲಿ 4 ಅಂಗಡಿ ಮುಚ್ಚಿಸಿದ್ದಾರೆ. 30 ಅಂಗಡಿಗಳ ಲೈಸೆನ್ಸ್‌ ಅಮಾನತಿನಲ್ಲಿಟ್ಟಿದ್ದು, ನಾಲ್ವರು ವಿತರಕರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದಾರೆ.

2023ರ ಜನವರಿಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಾದ್ಯಂತ 10 ಸಾವಿರಕ್ಕೂ ಹೆಚ್ಚು ಎಂಟಿಪಿ ಕಿಟ್‌ ಮಾರಾಟ ಮಾಡಲಾಗಿದೆ, ₹ 440 ಮುಖಬೆಲೆಯ ಕಿಟ್‌ ಅನ್ನು ₹ 4 ಸಾವಿರದವರೆಗೂ ಮಾರಾಟ ಮಾಡಲಾಗಿದೆ ಎಂಬುದು ತನಿಖೆಯಿಂದ ಪತ್ತೆಯಾಗಿತ್ತು. ನಂತರ ಪ್ರತಿ ಕಿಟ್‌ಗೂ ವೈದ್ಯರ ಸಲಹಾ ಚೀಟಿ, ಮಾರಾಟದ ಬಿಲ್‌ ಪಡೆದು ತನಿಖೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಹಾಯಕ ಔಷಧ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿದ್ದರು.

ADVERTISEMENT

ವಿಶೇಷ ಕಾರ್ಯಾಚರಣೆ ನಂತರ, ಸಗಟು ವರ್ತಕರು, ಮೆಡಿಕಲ್‌ ಸ್ಟೋರ್‌ಗಳ ಕಳ್ಳಾಟ ಬಯಲಿಗೆ ಬಂದಿದೆ. ಜಿಲ್ಲೆಯಲ್ಲಿ 900 ಔಷಧಿ ಅಂಗಡಿಗಳಿವೆ. 15 ಸಗಟು ವರ್ತಕರಷ್ಟೇ ಕಿಟ್‌ ಮಾರಾಟದ ವಿವರ ಸಲ್ಲಿಸಿದ್ದಾರೆ. ಉಳಿದವರು ಮಾರಾಟ ಮಾಡಿಲ್ಲವೆಂದು ಹಿಂಬರಹ ನೀಡಿದ್ದಾರೆ.

ಬಹುತೇಕ ಔಷಧಿ ಅಂಗಡಿಗಳ ಮಾಲೀಕರು ಎಂಟಿಪಿ ಕಿಟ್‌ ಮಾರಾಟ ಮಾಡಿಯೂ ಮಾಡಿಲ್ಲವೆಂದು ಹಿಂಬರಹ ಸಲ್ಲಿಸಿರುವುದು ಪತ್ತೆಯಾಗಿದ್ದು, ಅಂಥವರ ವಿರುದ್ಧ ಕ್ರಮ ಜರುಗಿಸಲು ಸಹಾಯಕ ಔಷಧ ನಿಯಂತ್ರಣಾಧಿಕಾರಿ ಮುಂದಾಗಿದ್ದಾರೆ.

‘ಕಿಟ್‌ ಮಾರಾಟ ಮಾಡುವಾಗ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ (ಪಿಸಿ ಮತ್ತು ಪಿಎನ್‌ಡಿಟಿ) ನಿಯಮ ಉಲ್ಲಂಘಿಸಿದ ಔಷಧಿ ಅಂಗಡಿಗಳ ಲೈಸೆನ್ಸ್‌ ಅಮಾನತು ಮಾಡಲಾಗಿದೆ. 30 ದಿನದಲ್ಲಿ ವಿವರ ಸಲ್ಲಿಸದಿದ್ದರೆ ಮತ್ತಷ್ಟು ಲೈಸೆನ್ಸ್‌ಗಳ ರದ್ದತಿ ಕುರಿತು ಎಚ್ಚರಿಸಲಾಗಿದೆ. ನಾಲ್ವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸರ್ಕಾರದ ಅನುಮತಿ ಕೋರಿ ಪತ್ರ ಬರೆಯಲಾಗಿದೆ’ ಎಂದು ಸಹಾಯಕ ಔಷಧ ನಿಯಂತ್ರಣಾಧಿಕಾರಿ ಮೊಹಮ್ಮದ್‌ ಜೌಹರ್‌ ಖಾಲಿದ್‌ ಹೇಳಿದರು.

ನಡೆಯದ ವೈದ್ಯಕೀಯ ಪರಿಶೋಧನೆ: ಎಂಟಿಪಿ ಕಿಟ್‌ ಮಾರಾಟ ವಿವರ, ನರ್ಸಿಂಗ್‌ ಹೋಂಗಳಲ್ಲಿ ಭ್ರೂಣಹತ್ಯೆ ಕುರಿತ ರೋಗಿ ನೋಂದಣಿ ಮಾಹಿತಿಯನ್ನು ಪ್ರತಿ ತಿಂಗಳು 5ರಂದು ಸಕ್ಷಮ ಪ್ರಾಧಿಕಾರದ ಮುಂದೆ ಸಲ್ಲಿಸಬೇಕು. ‘ಆದರೆ ಜಿಲ್ಲೆಯಲ್ಲಿ ಈ ಪ್ರಕ್ರಿಯೆ ನಡೆದಿಲ್ಲ. ಲೆಕ್ಕವಿಲ್ಲದಂತೆ ಹೆಣ್ಣುಭ್ರೂಣ ಹತ್ಯೆ ನಡೆಯುತ್ತಿದೆ’ ಎಂದು ವೈದ್ಯರು ಹೇಳುತ್ತಾರೆ.

‘ಆಲೆಮನೆಯಲ್ಲಿ ಪ್ರಕರಣ ಪತ್ತೆಯಾದ ನಂತರ ಎಂಟಿಪಿ ಕಿಟ್ ಮಾರಾಟ, ಆಸ್ಪತ್ರೆಗಳಲ್ಲಿ ನಡೆದ ಭ್ರೂಣ ಹತ್ಯೆ ಕುರಿತಂತೆ ವೈದ್ಯಕೀಯ ಪರಿಶೋಧನೆ (ಮೆಡಿಕಲ್‌ ಆಡಿಟ್‌) ನಡೆಸಲು ತನಿಖಾಧಿಕಾರಿಗಳು ಸೂಚಿಸಿದ್ದರು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಇಲ್ಲಿಯವರೆಗೂ ಪರಿಶೋಧನೆ ನಡೆಸಿಲ್ಲ’ ಎಂದು ತನಿಖೆಯಲ್ಲಿ ಪಾಲ್ಗೊಂಡಿದ್ದ ವೈದ್ಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.