ADVERTISEMENT

ಮಂಡ್ಯ: ಜಮೀನಿಗೆ ಬರಲಿದೆ ‘ಕೃಷಿ ಸಂಜೀವಿನಿ’

ಸಹಾಯವಾಣಿ 155313ಕ್ಕೆ ಕರೆ ಮಾಡಿದರೆ ಸಮಸ್ಯೆಗೆ ಪರಿಹಾರ, ತಾಂತ್ರಿಕ ತಂಡದಿಂದ ಸಹಾಯ

ಶರತ್‌ ಎಂ.ಆರ್‌.
Published 10 ಮಾರ್ಚ್ 2021, 2:11 IST
Last Updated 10 ಮಾರ್ಚ್ 2021, 2:11 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು   

ಮಂಡ್ಯ: ಬೆಳೆಗಳ ಕೀಟ ರೋಗ, ಕಳೆ ಬಾಧೆ, ಮಣ್ಣಿನ ಪೋಷಕಾಂಶ ಕೊರತೆಯ ಸಮರ್ಪಕ ನಿರ್ವಹಣೆ, ಹತೋಟಿ ಕ್ರಮಗಳು, ಮಾರ್ಗೋಪಾಯಗಳನ್ನು ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ಇನ್ನು ಮುಂದೆ ರೈತರ ಜಮೀನಿಗೆ ಬರಲಿದೆ.

ರೈತರು ತಾವು ಬೆಳೆಯುತ್ತಿರುವ ಬೆಳೆಗಳಲ್ಲಿ ಕೀಟ ರೋಗ, ಕಳೆ ಬಾಧೆ ಸೇರಿದಂತೆ ಹಲವು ಸಮಸ್ಯೆ ಎದುರಿಸುವುದು ಸಾಮಾನ್ಯ. ಆದರೆ, ಅದನ್ನು ಹೇಗೆ ಪರಿಹರಿಸಿಕೊಳ್ಳುವುದು ಎಂಬ ಮಾಹಿತಿ ಇಲ್ಲದೆ ರೈತರು ಗೊಬ್ಬರದ ಅಂಗಡಿಗಳವರು ನೀಡಿದ ಕೀಟನಾಶಕ ಸಿಂಪಡಿಸುತ್ತಾರೆ. ಒಮ್ಮೊಮ್ಮೆ ಯಶಸ್ವಿಯಾದರೆ ಮತ್ತೊಮ್ಮೆ ವಿಫಲವಾಗುತ್ತದೆ. ರೈತರ ಇಂತಹ ಸಂಕಷ್ಟ ನಿವಾರಿಸಲು ಸಂಚಾರಿ ಚಿಕಿತ್ಸಾಲಯ ಇನ್ನು ಮುಂದೆ ನೆರವಾಗಲಿದೆ.

ಸಕಾಲದಲ್ಲಿ ಬೆಳೆಯ ಎಲ್ಲ ಹಂತಗಳಲ್ಲಿ ಸರ್ವೇಕ್ಷಣೆ ಕೈಗೊಂಡು, ಕಂಡು ಬಂದಿರುವ ಅಥವಾ ಕಂಡು ಬರಬಹುದಾದ ಕೀಟ, ರೋಗ, ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ತಿಳಿಸಿ, ಬೆಳೆಯ ಸಂರಕ್ಷಣೆ ಮಾಡಿ ರೈತರಿಗೆ ನೆರವಾಗಲಿದೆ. ರೈತ ಸಂಪರ್ಕ ಕೇಂದ್ರಗಳು ದೂರ ಇರುವ ಕಡೆ ತೆರಳಲು ಹೆಚ್ಚೆಚ್ಚು ರೈತರನ್ನು ಸಂಪರ್ಕಿಸಲು ಸಹಾಯವಾಗಲಿದೆ.

ADVERTISEMENT

ಸಂಚಾರಿ ವಾಹನದ ಸೌಲಭ್ಯದಿಂದ ರೈತರ ಜಮೀನಿಗೆ ತಾಂತ್ರಿಕ ತಂಡ ಭೇಟಿ ನೀಡಲು ಸಹಕಾರಿಯಾಗುತ್ತದೆ. ಜಿಲ್ಲೆಗೆ ಎರಡು ವಾಹನಗಳನ್ನು ನೀಡಲಾಗಿದೆ. 155313 (ಟೋಲ್ ಫ್ರೀ) ಸಹಾಯವಾಣಿಗೆ ರೈತರು ಕರೆ ಮಾಡಿದರೆ, ಅದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಹೋಗಲಿದೆ. ರೈತರು ತಮ್ಮ ಸಮಸ್ಯೆಯನ್ನು ತಿಳಿಸಿ, ಪರಿಹಾರ ಪಡೆಯಬಹುದು’ ಎಂದು ಕೃಷಿ ಇಲಾಖೆ ಸಿಬ್ಬಂದಿ ತಿಳಿಸಿದರು.

ವಾಹನದ ಚಲನವಲನಗಳನ್ನು ಕೇಂದ್ರೀಕೃತವಾಗಿ ಗುರುತಿಸಲು ವಾಹನದಲ್ಲಿ ಜಿಪಿಎಸ್‌ ಅಳವಡಿಸಲಾಗಿದೆ. ವಾಹನ ಎಲ್ಲಿದೆ ಎಂಬ ಮಾಹಿತಿಯನ್ನು ಪಡೆದು, ಇನ್ನೊಬ್ಬ ರೈತನ ಜಮೀನಿಗೆ ಬರಲು ಎಷ್ಟು ಹೊತ್ತು ಆಗುತ್ತದೆ ಎಂಬುದನ್ನು ನಿಖರವಾಗಿ ತಿಳಿಸಲು ನೆರವಾಗುತ್ತದೆ.

ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣದ, ಸೂಕ್ಷ್ಮ ಕೀಟಗಳನ್ನು ಗುರುತಿಸಲು ಸ್ಟೀರಿಯೋ ಜೂಮ್‌ ಸೂಕ್ಷ್ಮದರ್ಶಕ, ಭೂತಗನ್ನಡಿ, ರಸಗೊಬ್ಬರ ಪರೀಕ್ಷಾ ಕಿಟ್‌, ಮಣ್ಣು ತೇವಾಂಶ ಸಂವೇದಕಗಳು, ಹಾರಾಡುವ ಕೀಟಗಳನ್ನು ಹಿಡಿಯಲು ಕೀಟ ಸಂಗ್ರಹಣಾ ಬಲೆ, ಪೆಟ್ಟಿಗೆ, ಇ–ಸ್ಯಾಪ್‌ ತಂತ್ರಾಂಶವನ್ನು ಅಳವಡಿಸಿ ರೈತರ ಜಮೀನಿನಲ್ಲಿ ವೈಜ್ಞಾನಿಕ ಸರ್ವೇಕ್ಷಣೆ ಕೈಗೊಳ್ಳಲು ಟ್ಯಾಬ್ಸ್‌, ಲ್ಯಾಪ್‌ಟಾಪ್‌, ಮಾಹಿತಿ ಮುದ್ರಿಸಲು ಪ್ರಿಂಟರ್‌, ಡಿಜಿಟಲ್‌ ಉಷ್ಣ ಮಾಪಕ, ಹೈಡ್ರೋ ಮೀಟರ್‌, ಲೀಫ್‌ ಕಲರ್‌ ಚಾರ್ಟ್‌ ಸೇರಿದಂತೆ ವಿವಿಧ ಉಪಕರಣಗಳು ವಾಹನದಲ್ಲಿ ಇರಲಿವೆ.

ಇದಲ್ಲದೆ ವಾಹನದಲ್ಲಿ ಸಹಾಯಕ ಕೃಷಿ ನಿರ್ದೇಶಕ (ವಿಷಯ ತಜ್ಞ), ಸಹಾಯಕರು ಇರಲಿದ್ದಾರೆ. ಒಂದು ವೇಳೆ ಸಲಹೆ ನೀಡಿ ರೋಗ ಕಡಿಮೆಯಾಗದಿದ್ದಲ್ಲಿ ಕೃಷಿ ವಿದ್ಯಾಲಯದ ವಿಜ್ಞಾನಿಗಳನ್ನು ಒಳಗೊಂಡಂತೆ ರೈತರ ಸಮಸ್ಯೆ ಪರಿಹರಿಸಲು ಶ್ರಮಿಸಲಾಗುವುದು. ಯೋಜನೆ ಜನವರಿಯಲ್ಲೇ ಜಾರಿಗೆ ಬಂದಿದ್ದು, ಶುಲ್ಕ ರಹಿತ ಸಂಖ್ಯೆಗೆ 200ಕ್ಕೂ ಹೆಚ್ಚು ಕರೆಗಳು ಬಂದಿವೆ. ಇಲಾಖೆಯ ವಾಹನಗಳಲ್ಲೇ ರೈತರ ಜಮೀನಿಗೆ ತೆರಳಿ ಸಮಸ್ಯೆ ಬಗೆಹರಿಸಲಾಗಿದೆ.

ಸಂಚಾರಿ ವಾಹನ ಜಿಲ್ಲೆಯಲ್ಲಿ ಮಾರ್ಚ್‌ 6ರಿಂದ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ. ಮೊದಲ ದಿನವೇ ಕೆ.ಆರ್‌.ಪೇಟೆ ತಾಲ್ಲೂಕಿನಿಂದ 2, ಪಾಂಡವಪುರ 2, ಶ್ರೀರಂಗಪಟ್ಟಣ 1, ಮಂಡ್ಯ ನಗರದ ಒಂದು ಕರೆಯನ್ನು ಸ್ವೀಕರಿಸಲಾಗಿದ್ದು, ರೈತರ ಜಮೀನಿಗೆ ಭೇಟಿ ನೀಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದರು.

ಪ್ರೊಜೆಕ್ಟರ್‌ ಮೂಲಕ ಮಾರ್ಗದರ್ಶನ

ಸಂಚಾರಿ ವಾಹನದಲ್ಲಿ ಪ್ರೊಜೆಕ್ಟರ್‌ ಅಳವಡಿಸಲಾಗಿದ್ದು, ಕೀಟ, ರೋಗ, ಪೋಷಕಾಂಶಗಳ ಕೊರತೆಯ ಕುರಿತ ಮಾಹಿತಿಯನ್ನು ಚಿತ್ರದ ಮೂಲಕ ತೋರಿಸಲಿದೆ.

ಇಡೀ ಊರಿನ ಬೆಳೆಗಳಲ್ಲಿ ಒಂದೇ ರೀತಿಯ ಅಥವಾ ಬೇರೆ ವಿಧವಾದ ರೋಗ ಲಕ್ಷಣ ಇದ್ದ ಸಂದರ್ಭದಲ್ಲಿ ಮಾಹಿತಿಯನ್ನು ಸಾಮೂಹಿಕವಾಗಿ ರೈತರಿಗೆ ಮನವರಿಕೆ ಮಾಡಿಕೊಡಲು ಅನುಕೂಲವಾಗುತ್ತದೆ. ಅಲ್ಲದೆ ಪ್ರಾಯೋಗಿಕ ಚಿತ್ರಣವು ಇನ್ನಷ್ಟು ಅರ್ಥವಾಗುವಂತೆ ಮಾಡುತ್ತದೆ.

***

ಇಲಾಖೆಯ ಕಾರ್ಯಕ್ರಮ ಪ್ರಚುರ ಪಡಿಸಲು ಕೃಷಿ ಸಂಜೀವಿನಿ ನೆರವಾಗುತ್ತದೆ. ರೇಷ್ಮೆ, ತೋಟಗಾರಿಕೆ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶ್ರಮಿಸಲಾಗುವುದು.

–ಡಾ.ಬಿ.ಎಸ್‌.ಚಂದ್ರಶೇಖರ್‌, ಜಂಟಿ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.