ADVERTISEMENT

ಪಾಂಡವಪುರದ ಆರ್‌ಎಸ್‌ಎಸ್‌ ಕಚೇರಿಗೆ ಪೊಲೀಸರು: ಆಕ್ಷೇಪ

ಸಂಘದ ಪ್ರಚಾರಕರ ಬಂಧಿಸಲು ಯತ್ನ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 13:59 IST
Last Updated 16 ಸೆಪ್ಟೆಂಬರ್ 2024, 13:59 IST
<div class="paragraphs"><p>ಪಾಂಡವಪುರದ ಆರ್‌ಎಸ್‌ಎಸ್ ಕಚೇರಿಗೆ ನುಗ್ಗಿ ಸಂಘದ ಪ್ರಚಾರಕರನ್ನು ಬಂಧಿಸಲು ಮುಂದಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಜೆಪಿ ಮತ್ತು ಆರ್‌.ಎಸ್‌.ಎಸ್‌ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಶಾಸಕ ಸಿ.ಎನ್‌. ಅಶ್ವತ್ಥ ನಾರಾಯಣ, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಪಾಲ್ಗೊಂಡಿದ್ದರು&nbsp; </p></div>

ಪಾಂಡವಪುರದ ಆರ್‌ಎಸ್‌ಎಸ್ ಕಚೇರಿಗೆ ನುಗ್ಗಿ ಸಂಘದ ಪ್ರಚಾರಕರನ್ನು ಬಂಧಿಸಲು ಮುಂದಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಜೆಪಿ ಮತ್ತು ಆರ್‌.ಎಸ್‌.ಎಸ್‌ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಶಾಸಕ ಸಿ.ಎನ್‌. ಅಶ್ವತ್ಥ ನಾರಾಯಣ, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಪಾಲ್ಗೊಂಡಿದ್ದರು 

   

–ಪ್ರಜಾವಾಣಿ ಚಿತ್ರ

ಪಾಂಡವಪುರ: ‘ಆರ್‌ಎಸ್‌ಎಸ್‌ ಕಚೇರಿಗೆ ಬೂಟು ಕಾಲಿನಲ್ಲಿ ನುಗ್ಗಿ ಸಂಘದ ಪ್ರಚಾರಕರನ್ನು ಬಂಧಿಸಲು ಯತ್ನಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಬಿಜೆಪಿ ಮತ್ತು ಆರ್‌.ಎಸ್‌.ಎಸ್‌ ಕಾರ್ಯಕ‌ರ್ತರು ಪಟ್ಟಣದ ಪೊಲೀಸ್ ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ADVERTISEMENT

ಪಟ್ಟಣದ ಬೋವಿ ಕಾಲೊನಿಯಲ್ಲಿರುವ ಆರ್‌.ಎಸ್‌.ಎಸ್‌ ಕಚೇರಿಗೆ ಡಿವೈಎಸ್‌ಪಿ ಮುರಳಿ ನೇತೃತ್ವದ ಪೊಲೀಸ್ ತಂಡವು ಭಾನುವಾರ ರಾತ್ರಿ ಸಂಘದ ವಿಭಾಗೀಯ ಪ್ರಚಾರಕ ಶರಣ್ ಪಂಪ್‌ವೆಲ್ ಮತ್ತು ಜಿಲ್ಲಾ ಪ್ರಚಾರಕ ಪುನೀತ್ ಅವರನ್ನು ಬಂಧಿಸಲು ಮುಂದಾಗಿತ್ತು. ಇದಕ್ಕೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ನೂಕಾಟ ತಳ್ಳಾಟವೂ ನಡೆದಿತ್ತು. 

‘ಆರ್‌ಎಸ್‌ಎಸ್ ಕಚೇರಿ ನಮಗೆ ದೇವಾಲಯವಿದ್ದಂತೆ. ನಾವು ಕಚೇರಿಯನ್ನು ಪೂಜನೀಯ ಭಾವನೆಯಲ್ಲಿ ನೋಡುತ್ತೇವೆ. ಆರ್‌ಎಸ್‌ಎಸ್ ದೇಶ ಭಕ್ತ ಸಂಘಟನೆಯಾಗಿದ್ದು, ಸ್ವಯಂಸೇವಕರು ದೇಶದ ಏಕತೆ, ಅಖಂಡತೆಗೆ ಕಟ್ಟಿಬದ್ಧವಾಗಿದೆ. ಆದರೆ ಪೊಲೀಸರು ಬೂಟ್ ಕಾಲಿನಲ್ಲಿ ಕಚೇರಿ ಪ್ರವೇಶಿಸಿ ನಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಶಾಸಕ ಸಿ.ಎನ್‌. ಅಶ್ವತ್ಥ ನಾರಾಯಣ, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜೈಶ್ರೀರಾಮ್ ಎನ್ನುವಂತಿಲ್ಲ. ಹನುಮಾನ್ ಚಾಲೀಸ್ ಹಾಕುವಂತಿಲ್ಲ. ಹಿಂದುಗಳ ಹತ್ಯೆ ನಿರಂತರವಾಗಿದೆ. ವಿನಾಯಕ ಚತುರ್ಥಿಯಲ್ಲಿ ಉತ್ಸವ ಮಾಡದ ಪರಿಸ್ಥಿತಿ ಎದುರಾಗಿದೆ’ ಎಂದು ಅಸಮಾಧಾನ ಹೊರಹಾಕಿದರು.

ಪೊಲೀಸರು ಎಲ್ಲಿ ಹೇಗೆ ನಡೆಯಬೇಕು ಎಂಬುದರ ಅರಿವಿಲ್ಲದೆ ವರ್ತಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಕಚೇರಿಯಲ್ಲಿ ಇದ್ದವರು ಭಯೋತ್ಪಾದಕರಲ್ಲ. ಪವಿತ್ರ ಸ್ಥಳಕ್ಕೆ ಅಗೌರವ ತೋರಿಸುವ ಪೊಲೀಸರ ವಿರುದ್ಧ ಗೃಹ ಇಲಾಖೆ ತಕ್ಷಣ ಕ್ರಮವಹಿಸಬೇಕು. ತಪ್ಪು ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ವಿಳಂಬ ಮಾಡದೇ ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಯಾವೊಬ್ಬ ಹಿಂದೂ ಮತ ನೀಡಿಲ್ಲ ಎಂಬಂತೆ ನಡೆದುಕೊಳ್ಳಬಾರದು. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಕಾರ್ಯದರ್ಶಿ ಕೆ.ಎಲ್.ಆನಂದ್, ಮುಖಂಡರಾದ ಡಾ.ಸಿದ್ದರಾಮಯ್ಯ, ಜೆ.ಶಿವಲಿಂಗೇಗೌಡ, ಎಚ್.ಎನ್. ಮಂಜುನಾಥ್, ಶ್ರೀನಿವಾಸ ನಾಯಕ, ನವೀನ್, ಆರ್‌.ಎಸ್‌.ಎಸ್ ಕಾರ್ಯಕರ್ತರಾದ ಮಾರ್ಕಂಡಯ್ಯ, ಡಾಮಡಳ್ಳಿ ಕೇಶವ, ರತ್ನಾಕರ, ರಾಧಾಕೃಷ್ಣ, ನಾ.ಶಿವಣ್ಣ, ಕೆನ್ನಾಳು ಚಿಕ್ಕಣ್ಣ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.