ADVERTISEMENT

ಕಾವೇರಿ ಸಮಸ್ಯೆ ಬಗೆಹರಿಸಿದರೆ ರಾಜಕೀಯ ನಿವೃತ್ತಿ: HDKಗೆ ಚಲುವರಾಯಸ್ವಾಮಿ ಸವಾಲು

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 4:23 IST
Last Updated 18 ಜುಲೈ 2024, 4:23 IST
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ   

ನಾಗಮಂಗಲ(ಮಂಡ್ಯ): ‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಐದು ವರ್ಷಗಳಲ್ಲಿ ಕಾವೇರಿ ವಿವಾದವನ್ನು ಬಗೆಹರಿಸಿ, ಕಾವೇರಿ ನೀರನ್ನು ಕರ್ನಾಟಕ ಸಂಪೂರ್ಣ ಬಳಸಿಕೊಳ್ಳುವ ಅಧಿಕಾರ ಸಿಗುವಂತೆ ಮಾಡಿದರೆ ಹಾಗೂ ಜಲಾಶಯದ ಮೇಲ್ವಿಚಾರಣಾ ಸಮಿತಿಯನ್ನು ರದ್ದುಪಡಿಸಿದರೆ  ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸವಾಲು ಹಾಕಿದರು.

‘ತಮಿಳುನಾಡಿಗೆ ನೀರು ಬಿಟ್ಟು ನಂತರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ಕಬಿನಿ ಭರ್ತಿಯಾಗಿ ಹೆಚ್ಚುವರಿ ನೀರು ಬಂದಾಗ ತಮಿಳುನಾಡಿಗೆ ನೀರು ಬಿಡಲೇಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸರ್ವಪಕ್ಷ ಸಭೆ ಕರೆದು ತಿನ್ನಲು ಏನು ಕೊಟ್ಟಿದ್ದರು? ಮೆನು ಕೊಟ್ಟಿದ್ದರೆ ನಾವೂ ಅದನ್ನೇ ಕೊಡುತ್ತಿದ್ದೆವು. ನಾವು ಗೋಡಂಬಿ, ದ್ರಾಕ್ಷಿ ಕೊಟ್ಟಿರಲಿಲ್ಲ. ಕಾಫಿಯನ್ನಷ್ಟೇ ಕೊಟ್ಟಿದ್ದೆವು‌. ಅವರು ಮೆನು ಹೇಳಿದರೆ ಮುಂದಿನ ಸಭೆಯಲ್ಲಿ ಅದನ್ನೇ ಕೊಡುತ್ತೇವೆ’ ಎಂದರು. 

ADVERTISEMENT

‘ಸಂಸದರಾಗಿ ಕಾವೇರಿ ಕುರಿತ ಸಂಬಂಧಿಸಿದ ಸರ್ವಪಕ್ಷಗಳ ಸಭೆಗೆ ಬಾರದೇ ಕುಮಾರಸ್ವಾಮಿ ಕ್ಷೇತ್ರದ ಜನರಿಗೆ ಅಗೌರವ ತೋರಿದ್ದಾರೆ. ಸಭೆಯಲ್ಲಿ ಬೇರೆಯವರ ನಿರ್ಧಾರಕ್ಕೆ ಬೆಲೆಯಿಲ್ಲ ಎಂದು ಹೇಳಿರುವ ಅವರು ಮುಖ್ಯಮಂತ್ರಿಯಾಗಿದ್ದಾಗ ಕರೆದ ಸಭೆಯಲ್ಲಿ ಏನು ಕ್ರಮ ತೆಗೆದುಕೊಂಡಿದ್ದರು?. ಯಾವುದೋ ಬಾಡೂಟಕ್ಕೆ, ಅಭಿನಂದನಾ ಸಮಾರಂಭಕ್ಕೆ ಬರುತ್ತಾರೆ. ಸರ್ವ ಪಕ್ಷ ಸಭೆಗೆ ಬರಲಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು. 

‘ಕಾವೇರಿ ವಿಚಾರವಾಗಿ ರಾಜ್ಯದ ಪರವಾಗಿ ಸರಿಯಾದ ನ್ಯಾಯ ನಿರ್ಧಾರ ಮಾಡಲಿಲ್ಲ ಎಂದು, ಸಂಸದರಾಗಿದ್ದ ಮಾದೇಗೌಡರು ಹಾಗೂ ಅಂಬರೀಶ್ ರಾಜಿನಾಮೆ ಕೊಟ್ಟಿದ್ದರು. ಹಾಗೆಯೇ ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಾರಾ? ಸಭೆಗೆ ಯಾರು ಬಂದರೂ, ಬರದಿದ್ದರೂ ಸರ್ಕಾರ ರಾಜ್ಯದ ಪರವಾದ ತೀರ್ಮಾನವನ್ನು ತೆಗೆದುಕೊಳ್ಳಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.