ADVERTISEMENT

ಲಘು ಮಾತಿಗೆ ಬೆಲೆ ತೆತ್ತರೇ ಶಿವರಾಮೇಗೌಡ?

ವಿವಾದಗಳಿಂದಲೇ ಹೆಸರುವಾಸಿಯಾಗಿದ್ದ ಮುಖಂಡ, ಚುನಾವಣೆ ಸಂದರ್ಭದಲ್ಲಿ ಅತಂತ್ರ

ಎಂ.ಎನ್.ಯೋಗೇಶ್‌
Published 31 ಜನವರಿ 2022, 14:43 IST
Last Updated 31 ಜನವರಿ 2022, 14:43 IST
ಎಲ್‌.ಆರ್‌.ಶಿವರಾಮೇಗೌಡ
ಎಲ್‌.ಆರ್‌.ಶಿವರಾಮೇಗೌಡ   

ಮಂಡ್ಯ: ನಾಲಗೆ ಹರಿಬಿಟ್ಟರೆ ವಿವಾದಾತ್ಮಕ ಮಾತುಗಳನ್ನೇ ಆಡುತ್ತಿದ್ದ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಜೆಡಿಎಸ್‌ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಅವರೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ವಿವಾದಗಳ ಜೊತೆಯಲ್ಲೇ ರಾಜಕಾರಣ ಮಾಡಿಕೊಂಡು ಬಂದಿರುವ ಅವರು ತಮ್ಮ ಮಾತುಗಳಿಂದಲೇ ಹೆಸರುವಾಸಿಯಾಗಿದ್ದರು. ಕಾಂಗ್ರೆಸ್‌, ಜೆಡಿಎಸ್‌ ಬಿಜೆಪಿಯಲ್ಲೂ ಇದ್ದ ಅವರು ಮೂರು ಪಕ್ಷಗಳಿಗೂ ಹಲವು ಬಾರಿ ಮುಜುಗರ ಉಂಟು ಮಾಡುವ ಮಾತುಗಳನ್ನಾಡಿದ್ದಾರೆ. ಈಗ ಮಾಜಿ ಸಂಸದ, ದಿವಂಗತ ಜಿ.ಮಾದೇಗೌಡರ ವಿರುದ್ಧ ಲಘುವಾದ ಮಾತುಗಳನ್ನಾಡಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅವರ ಜಾತಿ ಮೂಲ ಹುಡುಕಲು ಪ್ರಯತ್ನಿಸಿದ್ದರು. ‘ಆಕೆ ಗೌಡ್ತಿಯಲ್ಲ, ನಾಯ್ಡು’ ಎಂದು ಹೇಳಿ ರಾಜ್ಯದಾದ್ಯಂತ ಜನಾಕ್ರೋಶಕ್ಕೆ ಗುರಿಯಾಗಿದ್ದರು. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಸೋಲು ಕಾಣಲು ಶಿವರಾಮೇಗೌಡ ಸೇರಿದಂತೆ ಜೆಡಿಎಸ್‌ ಮುಖಂಡರ ಅಸಹನೆಯ ಮಾತುಗಳೇ ಕಾರಣ ಎಂಬ ಅಭಿಪ್ರಾಯ ಈಗಲೂ ಜನಜನಿತವಾಗಿದೆ.

ADVERTISEMENT

ನಾಗಮಂಗಲ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಕಾರಣಕ್ಕೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುರೇಶ್‌ಗೌಡ ಗೆಲುವಿಗೆ ಶಿವರಾಮೇಗೌಡ ಶ್ರಮಿಸಿದ್ದರು. 2018ರ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ಪಡೆದು 4 ತಿಂಗಳು ಸಂಸದರೂ ಆಗಿದ್ದರು.

ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕಣಕ್ಕಿಳಿದ ಕಾರಣ ಅವರಿಗೆ ಟಿಕೆಟ್‌ ತಪ್ಪಿತ್ತು. ಅದೇ ಕೋಪದಲ್ಲಿ ಪಕ್ಷಕ್ಕೆ ಮುಜುಗರ ತರುವ ಮಾತುಗಳನ್ನಾಡುತ್ತಿದ್ದರು ಎಂಬ ಆರೋಪವೂ ಅವರ ಮೇಲಿದೆ.

ಪಕ್ಷೇತರರಾಗಿ ಸ್ಪರ್ಧೆ: 1989ರ ವಿಧಾನಸಭಾ ಚುನಾವಣೆಯಲ್ಲಿ ಶಿವರಾಮೇಗೌಡ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ 1994ರಲ್ಲೂ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದರು. ನಂತರ ಎಚ್‌.ಡಿ.ದೇವೇಗೌಡರ ಸ್ನೇಹ ಸಂಪಾದಿಸಿಕೊಂಡ ಅವರು ಜನತಾದಳ ಸೇರ್ಪಡೆಯಾದರು. ಜೆ.ಎಚ್‌.ಪಟೇಲ್‌ ಸರ್ಕಾರದಲ್ಲಿ ಕರ್ನಾಟಕ ಗೃಹ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದರು.

ನಂತರ ಅಂಬರೀಷ್‌ ಜೊತೆಯಲ್ಲಿ ಕಾಂಗ್ರೆಸ್‌ ಸೇರಿದ ಅವರು 1999, 2004ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋಲು ಕಂಡರು. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ನಂತರ 2018ರಲ್ಲಿ ಮತ್ತೆ ಜೆಡಿಎಸ್‌ಗೆ ಬಂದ ಅವರು 2019ರ ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದು ಅಲ್ಪ ಅವಧಿಗೆ ಸಂಸದರಾದರು.

ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಈಗ ಶಿವರಾಮೇಗೌಡರು ಉಚ್ಚಾಟನೆಗೊಂಡಿರುವ ಹಾಲಿ ಜೆಡಿಎಸ್‌ ಶಾಸಕ ಕೆ. ಸುರೇಶ್‌ಗೌಡ ಮತ್ತೊಮ್ಮೆ ಸ್ಪರ್ಧಿಸುವ ಹಾದಿ ಸುಗಮವಾದಂತಾಗಿದೆ.

‘ನಾಗಮಂಗಲ ಕ್ಷೇತ್ರ ಮೊದಲಿನಿಂದಲೂ ಸಜ್ಜನ ರಾಜಕಾರಣಕ್ಕೆ ಹೆಸರುವಾಸಿಯಾಗಿತ್ತು. ಆದರೆ ಈಚೆಗೆ ಕೆಲ ಮುಖಂಡರ ರಂಗಪ್ರವೇಶದಿಂದ ನಾಗಮಂಗಲ ಕ್ಷೇತ್ರ ನಕಾರಾತ್ಮಕವಾಗಿ ಬಿಂಬಿತವಾಗಿದೆ’ ಎಂದು ಇತಿಹಾಸ ಪ್ರಾಧ್ಯಾಪಕರೊಬ್ಬರು ಹೇಳಿದರು.

ಜಾತಿ ಕಾರ್ಡ್‌ ಬಳಸಿದ ಎಚ್‌ಡಿಕೆ

ಎಲ್‌.ಆರ್‌.ಶಿವರಾಮೇಗೌಡರ ಉಚ್ಚಾಟನೆಗೆ ಜೆಡಿಎಸ್‌ ಶಾಸಕಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಜಾತಿಯನ್ನು ಕಾರಣವನ್ನಾಗಿ ನೀಡಿದ್ದಾರೆ. ‘ನಮ್ಮ ಸಮಾಜದ ನಾಯಕ ಜಿ.ಮಾದೇಗೌಡರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ ಶಿವರಾಮೇಗೌಡರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದ ಕೆಲವೇ ಹೊತ್ತಿನಲ್ಲಿ ಅವರ ಉಚ್ಚಾಟನೆಯ ಆದೇಶ ಹೊರಬಿದ್ದಿದೆ.

ಶಿವರಾಮೇಗೌಡರಿಗೆ ನೋಟಿಸ್‌ ನೀಡದೇ, ಅವರ ಅಭಿಪ್ರಾಯ ಪಡೆಯದೇ ಉಚ್ಚಾಟನೆ ಮಾಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಂದಿನ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಜಿಲ್ಲೆಯ ಬಹುಸಂಖ್ಯಾತ ಒಕ್ಕಲಿಗ ಮತದಾರರ ಪ್ರೀತಿ, ಬೆಂಬಲ ಗಳಿಸಲು ಕುಮಾರಸ್ವಾಮಿ ಜಾತಿ ಕಾರ್ಡ್‌ ಬಳಿಸಿದ್ದಾರೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

ಕಾಂಗ್ರೆಸ್‌ ಬಾಗಿಲು ಬಂದ್‌?

ಕಾಂಗ್ರೆಸ್‌ ಮುಖಂಡ ಜಿ.ಮಾದೇಗೌಡರ ವಿರುದ್ದ ಮಾತನಾಡಿರುವ ಕಾರಣ ಶಿವರಾಮೇಗೌಡರಿಗೆ ಕಾಂಗ್ರೆಸ್‌ ಬಾಗಿಲು ಕೂಡ ಬಂದ್‌ ಆಗಿದೆ.

‘ಪಕ್ಷದ ಹಿರಿಯ ಮುಖಂಡರನ್ನು ನಿಂದಿಸಿದವರನ್ನು ಸೇರಿಸಿಕೊಂಡರೆ ಕಾಂಗ್ರೆಸ್‌ ಪಕ್ಷಕ್ಕೂ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಅವರಿಗೆ ಕಾಂಗ್ರೆಸ್‌ ಬಾಗಿಲು ಮುಚ್ಚಿದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.