ಮಂಡ್ಯ: ‘ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಜಲಾಶಯ ಶೀಘ್ರ ಭರ್ತಿಯಾಗುವ ಸಂಭವವಿದೆ. ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಟ್ಟಲ್ಲಿ ಹೊರಹರಿವು ಹೆಚ್ಚಳವಾಗಿ ನದಿಪಾತ್ರದಲ್ಲಿ ನೆರೆ ಉಂಟಾಗುವ ಪರಿಸ್ಥಿತಿ ಬಂದಲ್ಲಿ ಪ್ರವಾಹ ಪರಿಸ್ಥಿಯನ್ನು ಎದುರಿಸಲು ಅಧಿಕಾರಿಗಳು ಸಜ್ಜಾಗಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು.
ಜಿಲ್ಲಾ ಪಂಚಾಯತಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಕೆ.ಆರ್.ಎಸ್‌ನಿಂದ ಒಂದು ಲಕ್ಷಕ್ಕಿಂತ ಹೆಚ್ಚಿನ ಕ್ಯುಸೆಕ್ ನೀರು ಬಿಡುಗಡೆ ಮಾಡಿದ ಸಂದರ್ಭದಲ್ಲಿ ನದಿ ಪಾತ್ರದಲ್ಲಿರುವ ಶ್ರೀರಂಗಪಟ್ಟಣ ತಾಲ್ಲೂಕಿನ- 53, ಪಾಂಡವಪುರ- 15, ಮಳವಳ್ಳಿ- 21 ಹಾಗೂ ಹೇಮಾವತಿ ಜಲಾಶಯಕ್ಕೆ ಸಂಬಂಧಿಸಿದಂತೆ ಕೆ.ಆರ್.ಪೇಟೆ- 3 ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಗ್ರಾಮಗಳಿಗೆ ಖುದ್ದು ಅಧಿಕಾರಿಗಳು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಬೇಕು ಎಂದರು.
ಜಿಲ್ಲಾ ಮಟ್ಟದ ಜೊತೆಗೆ ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ (ಟಾಸ್ಕ್ ಫೋಸ್೯) ಸಮಿತಿ ರಚಿಸಿ, ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾಲ ಕಾಲಕ್ಕೆ ಬಿಡುಗಡೆಯಾಗುವ ನೀರು, ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಎಂದರು.
ಪ್ರತಿ ತಾಲ್ಲೂಕಿಗೂ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿಯನ್ನು ರಚಿಸಲಾಗಿದೆ. 3 ಹಂತಗಳಲ್ಲಿಯೂ ತಂಡಗಳನ್ನು ರಚಿಸಿಕೊಂಡು ಸಮನ್ವಯತೆಯಿಂದ ಸಹಕಾರ ಮನೋಭಾವದಿಂದ ಯಾವುದೇ ಸಮಸ್ಯೆ ಬಾರದಂತೆ ಕೆಲಸ ನಿರ್ವಹಿಸಿ ಎಂದರು.
ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳು ಹಾಗೂ ಕೃಷಿ ಬೆಳೆಗಳು ಮುಳುಗಡೆಯಾಗುವುದೋ ಅಂತಹ ಪ್ರದೇಶಗಳಿಗೆ ತಾಲ್ಲೂಕಿನ ಇಒಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ, ಎಚ್ಚರಿಕೆ ನೀಡಬೇಕು. ಸಾರ್ವಜನಿಕರಲ್ಲಿ ಕರ ಪತ್ರ, ಟಂಟಂ ವಾಹನಗಳಲ್ಲಿ ವ್ಯಾಪಕ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಯಾವುದೇ ಅಪಾಯಗಳು ಸಂಭವಿಸುವುದಕ್ಕೂ ಮುನ್ನ ಮುಂಜಾಗ್ರತಾ ಕ್ರಮವಾಗಿ ಅವಶ್ಯಕ ಸಿದ್ಧತೆ ಮಾಡಿಟ್ಟುಕೊಳ್ಳುವುದು ಸೂಕ್ತ. ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆಗಳು ಸ್ವಯಂ ಸೇವಕರು, ಈಜು ಪರಿಣತರ ಪಟ್ಟಿ, ಜೆ.ಸಿ.ಬಿ ಹಾಗೂ ಬೋಟ್ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೂ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನಾಲೆಗಳಿಗೆ ಬಿಟ್ಟಾಗ ಯಾವುದೇ ಕುಟುಂಬದ ಸ್ಥಳಾಂತರ ಘಟನೆಗಳು ನಡೆದಿಲ್ಲ. ಒಂದು ವೇಳೆ ತೀವ್ರ ಪ್ರವಾಹದಿಂದಾಗಿ ಯಾವುದೇ ಕುಟುಂಬವನ್ನು ಸ್ಥಳಾಂತರಿಸಬೇಕಾದರೆ ಮುನ್ನೆಚ್ಚರಿಕಾ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು ಎಂದರು.
ಸಾಕಷ್ಟು ಕಡೆ ತೀವ್ರ ಮಳೆ ಹಾಗೂ ನದಿ ನೀರಿನಿಂದ ರಸ್ತೆಗಳು ಜಲಾವೃತವಾದರೆ ಸಂಚಾರ ನಿರ್ಬಂಧ ಮಾಡಿ, ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು
ಜಲಾಶಯದಿಂದ ಕೃಷಿ ಭೂಮಿಗಳು ಪ್ರವಾಹದಿಂದ ಜಲಾವೃತವಾಗಿ ಬೆಳೆ ನಾಶವಾದರೆ ಕಾನೂನು ಬದ್ಧವಾಗಿ ಪರಿಹಾರ ನೀಡಲು ಅನುಕೂಲವಾಗುವಂತೆ ಮುಂಜಾಗ್ರತಾ ಕ್ರಮವಾಗಿ ಕೃಷಿ ಅಧಿಕಾರಿಗಳು ಕೃಷಿ ಭೂಮಿಯನ್ನು ಗುರುತಿಸಿ, ಫೋಟೊಗಳನ್ನು ತೆಗೆದುಕೊಳ್ಳಬೇಕು. ಮುಳುಗಡೆಯಾದ ನಂತರ ಬೆಳೆಯ ಬಗ್ಗೆ ದಾಖಲೆ ಸಿಗುವುದಿಲ್ಲ ಹಾಗೂ ಪರಿಹಾರ ಒದಗಿಸುವುದು ಕಷ್ಟಕರವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿಯ ಪಿಡಿಒ, ಬಿಲ್ ಕಲೆಕ್ಟರ್, ವಾಟರ್ ಮ್ಯಾನ್ ಗಳೊಂದಿಗೆ ಸಭೆ ನಡೆಸಿ ಪ್ರವಾಹದ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಪ್ರವಾಹದ ಸನ್ನಿವೇಶ ಎದುರಿಸಲು ಸದಾ ಸನ್ನದರಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ರಘುರಾಮ್ ಮಾತನಾಡಿ ಪ್ರವಾಹದ ಸಂದರ್ಭದಲ್ಲಿ ಯಾವುದೇ ತೊಂದರೆ ಕಂಡುಬಂದಲ್ಲಿ ತಕ್ಷಣ ಜಿಲ್ಲೆಯ ಅಥವಾ ತಾಲ್ಲೂಕು ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನದಿ ದಂಡೆಯಲ್ಲಿರುವ ಜಮೀನಿನ ಬೆಳೆವಿವರ ಪಟ್ಟಿ ಸಿದ್ಧಪಡಿಸಿ ಪ್ರವಾಸಿಗರ ನಿಯಂತ್ರಣಕ್ಕೆ ಗೃಹರಕ್ಷಕ ಸಿಬ್ಬಂದಿ ನಿಯೋಜಿಸಿ ದೂರು ಮತ್ತು ನೆರವಿಗೆ ಕಂಟ್ರೋಲ್ ರೂಂಗೆ ಕರೆ ಮಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.