ADVERTISEMENT

ಪ್ರಚಾರ ಪೋಸ್ಟರ್‌ |ಮುದ್ರಕರ ಹೆಸರು ಕಡ್ಡಾಯ: ಮಂಡ್ಯ ಜಿಲ್ಲಾಧಿಕಾರಿ ಎಚ್ಚರಿಕೆ

ಕೇಬಲ್‌ ಟಿ.ವಿ, ಮುದ್ರಣಾಲಯಗಳ ಮಾಲೀಕರ ಸಭೆ; ಜಿಲ್ಲಾಧಿಕಾರಿ ಕುಮಾರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 14:31 IST
Last Updated 2 ಮಾರ್ಚ್ 2024, 14:31 IST
ಜಿಲ್ಲಾಧಿಕಾರಿ ಕುಮಾರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕೇಬಲ್ ಟಿ.ವಿ, ಮುದ್ರಣಾಲಯದ ಮಾಲೀಕರ ಸಭೆ ನಡೆಯಿತು. ಎಚ್‌.ಎಲ್‌.ನಾಗರಾಜು, ನಿರ್ಮಲಾ ಇದ್ದರು
ಜಿಲ್ಲಾಧಿಕಾರಿ ಕುಮಾರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕೇಬಲ್ ಟಿ.ವಿ, ಮುದ್ರಣಾಲಯದ ಮಾಲೀಕರ ಸಭೆ ನಡೆಯಿತು. ಎಚ್‌.ಎಲ್‌.ನಾಗರಾಜು, ನಿರ್ಮಲಾ ಇದ್ದರು   

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟವಾದ ನಂತರ ಪ್ರಕಟವಾಗುವ ಯಾವುದೇ ಪ್ರಚಾರ ಸಾಮಗ್ರಿ, ಪೋಸ್ಟರ್‌, ಕರಪತ್ರಗಳಲ್ಲಿ ಮದ್ರಕರು, ಪ್ರಕಾಶಕರ ಹೆಸರು ವಿಳಾಸ ಹಾಗೂ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕೇಬಲ್ ಟಿ.ವಿ, ಮುದ್ರಣಾಲಯದ ಮಾಲೀಕರ ಸಭೆ ನಡೆಸಿ ಮಾತನಾಡಿದರು.

‘ಚುನಾವಣಾ ಆಯೋಗ ನೀಡುವ ಎಲ್ಲಾ ನಿರ್ದೇಶನಗಳನ್ನು ಮುದ್ರಕರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಮುದ್ರಣಾಲಯದ ಮಾಲೀಕರು ಚುನಾವಣಾ ಅಪೆಂಡಿಕ್ಸ್-ಎ ಮತ್ತು ಬಿ ನಮೂನೆಯಲ್ಲಿ ಎರಡು ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆಯಲಾಗುವ ಎಂಸಿಎಸಿ ಸಮಿತಿಗೆ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು’ ಎಂದರು.

ADVERTISEMENT

‘ಕರಪತ್ರ, ಪೋಸ್ಟರ್‌ಗಳಲ್ಲಿ ಪ್ರಕಾಶಕರು ಹಾಗೂ ಮುದ್ರಕರ ಹೆಸರು ಇಲ್ಲದೇ ಮುದ್ರಣ ಮಾಡಿ ಹಂಚಿಕೆಯಾಗುತ್ತಿರುವುದು ಕಂಡು ಬಂದಲ್ಲಿ ಜನಪ್ರತಿನಿಧಿಗಳ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ಕ್ರಮ ಜರುಗಿಸಲಾಗುವುದು. ಚುನಾವಣೆ ಸಂಬಂಧಿಸಿದ ಯಾವುದೇ ಸಾಮಗ್ರಿ ಮುದ್ರಿಸುವಾಗಲೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಗಮನಿಸಬೇಕು’ ಎಂದು ಸೂಚಿಸಿದರು.

‘ಸಾಮಾಜಿಕ ಮಾಧ್ಯಮ, ಟಿ.ವಿ ವಾಹಿನಿ, ಕೇಬಲ್ ವಾಹಿನಿ, ಎಫ್.ಎಂ, ಬಲ್ಕ್ ಎಸ್ಎಂಎಸ್, ಇ-ಪೇಪರ್ ಸೇರಿದಂತೆ ಯಾವುದೇ ಎಲೆಕ್ಟ್ರಾಕ್‌ ಉಪಕರಣ ಬಳಸಿ ಪ್ರಸಾರ ಮಾಡುವ ಎಲ್ಲಾ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ನಿಗದಿತ ಅರ್ಜಿಯಲ್ಲಿ ಜಾಹೀರಾತು ವಿಷಯಗಳ ಎರಡು ಸಿ.ಡಿ ಸಲ್ಲಿಸಿ ಅನುಮೋದನೆ ಪಡೆದು ನಂತರ ಜಾಹೀರಾತು ಪ್ರಸಾರ ಮಾಡಬೇಕು’ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌. ಎಲ್ ನಾಗರಾಜು, ಚುನಾವಣಾ ತಹಶೀಲ್ದಾರ್ ವೆಂಕಟಾಚಲಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್ ನಿರ್ಮಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.