ಮಳವಳ್ಳಿ: ಉಪನೋಂದಣಾಧಿಕಾರಿ ಕಚೇರಿಯಲ್ಲಿ ಒಂದೆಡೆ ವಿದ್ಯುತ್ ಇಲ್ಲದೆ ಮತ್ತೊಂದೆಡೆ ಯುಪಿಎಸ್ ಕೆಟ್ಟುಹೋಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಪಟ್ಟಣದಲ್ಲಿ ಗುರುವಾರ ಮತ್ತು ಶುಕ್ರವಾರ ಸೆಸ್ಕ್ ದುರಸ್ತಿ ಕಾರ್ಯ ಹಮ್ಮಿಕೊಂಡಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಕಚೇರಿಯಲ್ಲಿ ಯುಪಿಎಸ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಪ್ರತಿನಿತ್ಯದ ಕೆಲಸ ಕಾರ್ಯಗಳಿಗೆ ಬಂದಿದ್ದ ಸಾರ್ವಜನಿಕರು ‘ನಾವೇ ಹಣ ಕೊಡುತ್ತೇವೆ. ಯುಪಿಎಸ್ ದುರಸ್ತಿ ಮಾಡಿಸಿ’ ಎಂದು ಉಪನೋಂ ದಣಾಧಿಕಾರಿ ಎಂ.ನಾಗರಾಜು ಅವರ ಜತೆ ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಯುಪಿಎಸ್ ಪದೇ ಪದೇ ಕೆಟ್ಟು ಹೋಗುತ್ತಿದೆ. ಮೂರು ದಿನಗಳಿಂದ ಕಚೇರಿಗೆ ಬರುತ್ತಿದ್ದು, ವಿದ್ಯುತ್ ಇಲ್ಲದೆ ಕೆಲಸಗಳು ಆಗುತ್ತಿಲ್ಲ. ಶಾಸಕ ಡಾ.ಕೆ.ಅನ್ನದಾನಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಚೊಟ್ಟನಹಳ್ಳಿಯ ರಾಜು ಆಗ್ರಹಿಸಿದರು.
ಐದು ಸಾವಿರ ಖರ್ಚು ಮಾಡಿದ ವ್ಯಕ್ತಿ: ಸಾರ್ವಜನಿಕರ ಪರದಾಟ ಗಮನಿಸಿದ ಅನುಷಾ ಚಾರಿಟಬಲ್ ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಮೂರ್ತಿ ಸ್ವಂತ ಹಣದಿಂದ ಜನರೇಟರ್ ಅನ್ನು ಬಾಡಿಗೆಗೆ ತರಿಸಿ ₹ 2,000 ಮೌಲ್ಯದ ಡೀಸೆಲ್ ಹಾಕಿಸಿ ಕಚೇರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿ ಅದರ ನಿರ್ವಹಣೆಗೆ ದಿನದ ಮಟ್ಟಕ್ಕೆ ಒಬ್ಬರನ್ನು ನೇಮಿಸಿದರು.
ಶ್ರೀನಿವಾಸಮೂರ್ತಿ ಮಾತನಾಡಿ, 15 ದಿನಗಳಿಂದ ಜಮೀನಿನ ನೋಂದಣಿಗೆ ಬರುತ್ತಿದ್ದು, ಒಮ್ಮೆ ಸರ್ವರ್ ಸಮಸ್ಯೆ ಮತ್ತೊಮ್ಮೆ ವಿದ್ಯುತ್ ಸಮಸ್ಯೆ ಎನ್ನುತ್ತಾರೆ. ಜನರಿಗೆ ಕುಳಿತುಕೊಳ್ಳಲು, ಕುಡಿಯುವ ನೀರು ಮತ್ತು ಶೌಚಾಲಯದ ಸೌಲಭ್ಯವೂ ಇಲ್ಲ. ಕಂದಾಯ ಸಚಿವರೂಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಉಪನೋಂದಣಾಧಿಕಾರಿ ಎಂ.ನಾಗರಾಜು ಮಾತನಾಡಿ, ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಯುಪಿಎಸ್ ಸರಿಯಾಗಿ ಚಾರ್ಚ್ ಆಗಿಲ್ಲ. ಹೀಗಾಗಿ ತೊಂದರೆಯಾಗಿದೆ. ಯುಪಿಎಸ್ ನಿರ್ವಹಣೆಯ ಅವಧಿ ಮುಗಿದಿದ್ದು, ಈ ಬಗ್ಗೆ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.