ADVERTISEMENT

ಮಂಡ್ಯ: 969ರಲ್ಲಿ 296 ಕೆರೆಗಳು ಮಾತ್ರ ಭರ್ತಿ!

ವಾಡಿಕೆಯಷ್ಟು ಮಳೆ ಮತ್ತು ಜಲಾಶಯ ಭರ್ತಿಯಾದರೂ ಜಲಮೂಲಗಳು ಭಣಭಣ

ಸಿದ್ದು ಆರ್.ಜಿ.ಹಳ್ಳಿ
Published 18 ಅಕ್ಟೋಬರ್ 2024, 2:44 IST
Last Updated 18 ಅಕ್ಟೋಬರ್ 2024, 2:44 IST
<div class="paragraphs"><p>ಮದ್ದೂರು ತಾಲ್ಲೂಕಿನ ತೈಲೂರು ಗ್ರಾಮದ ಕೆರೆ ನೀರಿಲ್ಲದೆ ಒಣಗಿರುವ ದೃಶ್ಯ&nbsp;</p></div>

ಮದ್ದೂರು ತಾಲ್ಲೂಕಿನ ತೈಲೂರು ಗ್ರಾಮದ ಕೆರೆ ನೀರಿಲ್ಲದೆ ಒಣಗಿರುವ ದೃಶ್ಯ 

   

ಮಂಡ್ಯ: ‘ಕೃಷಿ ಪ್ರಧಾನ ಜಿಲ್ಲೆ’ ಮಂಡ್ಯದ ಏಳು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 969 ಕೆರೆಗಳಿದ್ದು, ಇವುಗಳಲ್ಲಿ ಕೇವಲ 292 (ಶೇ 30ರಷ್ಟು) ಕೆರೆಗಳು ಮಾತ್ರ ಭರ್ತಿಯಾಗಿ ಕೋಡಿ ಬಿದ್ದಿವೆ. ವಾಡಿಕೆಯಷ್ಟು ಮಳೆ ಮತ್ತು ಜಲಾಶಯಗಳು ಭರ್ತಿಯಾಗಿದ್ದರೂ ಶೇ 70ರಷ್ಟು ಕೆರೆಗಳು ತುಂಬದೇ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

214 ಕೆರೆಗಳಲ್ಲಿ ಶೇ 25ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಅಂದರೆ, ಸಣ್ಣಪುಟ್ಟ ಗುಂಡಿಗಳಷ್ಟು ತುಂಬಿಕೊಳ್ಳುವಷ್ಟು ಮಾತ್ರ ನೀರು ಬಂದಿದೆ. ಈ ಕೆರೆಗಳು ಮಳೆಗಾಲ ಮುಗಿಯುವ ವೇಳೆಗೆ (ಇನ್ನು 15–20 ದಿನಗಳಲ್ಲಿ) ಭರ್ತಿಯಾಗದೇ ಹೋದರೆ ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರುವ ಸಂಭವವಿದೆ.

ADVERTISEMENT

ಕೆಆರ್‌ಎಸ್‌, ಹೇಮಾವತಿ, ಕಬಿನಿ ಜಲಾಶಯಗಳು ಭರ್ತಿಯಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕೆರೆ–ಕಟ್ಟೆಗಳು ತುಂಬಿಲ್ಲ. ಇದರಿಂದ ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗೆ ತೊಂದರೆ, ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಮಟ್ಟ ಕುಸಿದು ಕೃಷಿ ಪಂಪ್‌ಸೆಟ್‌ಗಳು ಬತ್ತುವ ಭೀತಿ ಅನ್ನದಾತರನ್ನು ಕಾಡುತ್ತಿದೆ.

ವಾಡಿಕೆಗಿಂತ ಹೆಚ್ಚು ಮಳೆ

ಜಿಲ್ಲೆಯಲ್ಲಿ ಈ ವರ್ಷ ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗೆ 316 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 351 ಮಿ.ಮೀ.ನಷ್ಟು ಮಳೆ ಸುರಿದಿದ್ದು, ಶೇ 11ರಷ್ಟು ಹೆಚ್ಚುವರಿ ಮಳೆಯಾಗಿದೆ. 7 ತಾಲ್ಲೂಕುಗಳ ಪೈಕಿ ಮದ್ದೂರು ತಾಲ್ಲೂಕಿನಲ್ಲಿ ಮಾತ್ರ 358 ಮಿ.ಮೀ. ವಾಡಿಕೆ ಮಳೆಗೆ, ಕೇವಲ 298 ಮಿ.ಮೀ.ನಷ್ಟು ಮಳೆಯಾಗಿದೆ. ಅಂದರೆ ಶೇ 17ರಷ್ಟು ಕಡಿಮೆ ಮಳೆ ಬಿದ್ದಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ 129 ಮಿ.ಮೀ. ವಾಡಿಕೆ ಮಳೆಗೆ ಕೇವಲ 59.7 ಮಿ.ಮೀ.ನಷ್ಟು ಮಳೆಯಾಗಿದೆ. ಅಕ್ಟೋಬರ್‌ 1ರಿಂದ 16ರವರೆಗೆ 89 ಮಿ.ಮೀ. ವಾಡಿಕೆ ಮಳೆಗೆ 105 ಮಿ.ಮೀ.ನಷ್ಟು ಮಳೆ ಸುರಿದಿದೆ. ಶೇ 18ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿಅಂಶಗಳು ತಿಳಿಸುತ್ತವೆ. 

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ 174 ಕೆರೆಗಳಲ್ಲಿ 134 ಕೆರೆಗಳು (ಶೇ 77ರಷ್ಟು) ಭರ್ತಿಯಾಗಿವೆ. 18 ಕೆರೆಗಳು ಶೇ 75ರಷ್ಟು, 9 ಕೆರೆಗಳು ಶೇ 50ರಷ್ಟು ನೀರು ಹೊಂದಿವೆ.

ಅಧಿಕಾರಿಗಳ ನಿರ್ಲಕ್ಷ್ಯ–ಆರೋಪ

‘ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ವ್ಯಾಪ್ತಿಯಲ್ಲಿ ಬರುವ 418 ಕೆರೆಗಳಲ್ಲಿ ಕೇವಲ 26 ಕೆರೆಗಳು ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 48 ಕೆರೆಗಳಲ್ಲಿ ಕೇವಲ 1 ಕೆರೆ ಮಾತ್ರ ಭರ್ತಿಯಾಗಿದೆ.  ಮಳೆಯಾಶ್ರಿತ ಮತ್ತು ಏತ ನೀರಾವರಿಯಿಂದ ತುಂಬಬೇಕಾದ ಈ ಕೆರೆಗಳು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಭರ್ತಿಯಾಗಿಲ್ಲ’ ಎಂದು ರೈತರು ದೂರಿದ್ದಾರೆ. 

ಕಾಲುವೆ ನಾಲೆಗಳ ಹೂಳು ತೆಗೆಸಿ ಅಧುನೀಕರಣ ಮಾಡದ ಕಾರಣ ಇನ್ನು ಹಲವಾರು ಕೆರೆಗಳು ಭರ್ತಿಯಾಗಿಲ್ಲ. ಕೆರೆ ಹೂಳೆತ್ತಿಸಿ ನೀರು ತುಂಬಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು.
–ಕೆ.ಬೋರಯ್ಯ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡ
ದೊಡ್ಡ ಕೆರೆಗಳಲ್ಲಿ ಒಂದಾದ ತೈಲೂರು ಕೆರೆ ನೀರಿಲ್ಲದೆ ಒಣಗಿದೆ. ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
–ತೈಲೂರು ಆನಂದಾಚಾರಿ, ರೈತ
ವಿಶ್ವೇಶ್ವರಯ್ಯ ನಾಲೆಗೆ ಸಮರ್ಪಕವಾಗಿ ನೀರು ಬಿಡದ ಕಾರಣ ಮಾದರಹಳ್ಳಿ ಮಣಿಗೆರೆ ಸೇರಿದಂತೆ ಹಲವಾರು ಕೆರೆಗಳು ಭರ್ತಿಯಾಗಿಲ್ಲ. ಇದಕ್ಕೆ ಅಧಿಕಾರಿಗಳೇ ಹೊಣೆ.
– ಮುದ್ದೇಗೌಡ, ರೈತ ಮುಖಂಡ ಗಾಡದಪುರದದೊಡ್ಡಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.