ADVERTISEMENT

ಆರೋಗ್ಯ ಕಾರ್ಡ್‌: ಖಾಸಗಿ ಆಸ್ಪತ್ರೆಗಳಿಗೆ ಧನ ದಾಹ

ಹಣ ಕಟ್ಟದೇ ರೋಗಿಗಳ ದಾಖಲಾತಿ ನಿರಾಕರಣೆ, ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ

ಎಂ.ಎನ್.ಯೋಗೇಶ್‌
Published 11 ಮೇ 2021, 19:30 IST
Last Updated 11 ಮೇ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಡ್ಯ: ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಕೋವಿಡ್‌ಯೇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ 8 ಖಾಸಗಿ ಆಸ್ಪತ್ರೆ ಗುರುತಿಸಲಾಗಿದೆ. ಆದರೆ ನರ್ಸಿಂಗ್‌ ಹೋಂ ಮಾಲೀಕರು ಧನ ದಾಹ ಪ್ರದರ್ಶಿಸುತ್ತಿದ್ದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಲಾಭ ಸಾರ್ವಜನಿಕರಿಗೆ ದೊರೆಯದಾಗಿದೆ.

ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಹೆರಿಗೆ ವಿಭಾಗವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ವಿಭಾಗಗಳ ಸೇವೆ ದೊರೆಯುತ್ತಿಲ್ಲ, ಆಪರೇಷನ್‌ ಥಿಯೇಟರ್‌ಗಳನ್ನು ಬಂದ್‌ ಮಾಡಲಾಗಿದೆ. ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಅನ್ಯ ಸಮಸ್ಯೆಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದ್ದು ರೋಗಿಗಳನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.

ಆದರೆ, ಆರೋಗ್ಯ ಇಲಾಖೆಯ ಸೂಚನೆಯನ್ನು ಗಾಳಿಗೆ ತೂರುತ್ತಿರುವ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂ ಮಾಲೀಕರು ರೋಗಿಗಳನ್ನು ದಾಖಲು ಮಾಡಿಕೊಳ್ಳುವ ಮೊದಲೇ ಹಣ ಕಟ್ಟುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಣ ಪಾವತಿ ಮಾಡದಿದ್ದರೆ ದಾಖಲು ಮಾಡಿಕೊಳ್ಳುವುದಿಲ್ಲ ಎಂದು ರೋಗಿಗಳನ್ನು ವಾಪಸ್‌ ಕಳುಹಿಸುತ್ತಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆಗೆ ತಿಳಿಸಿದರೆ ಅಧಿಕಾರಿಗಳು ರೋಗಿಗಳಿಗೆ ಸಹಾಯ ಮಾಡಲು ವಿಫಲರಾಗುತ್ತಿದ್ದಾರೆ.

ADVERTISEMENT

ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿಯುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ನರ್ಸಿಂಗ್‌ ಹೋಂಗಳ ವಿರುದ್ಧ ಕ್ರಮ ಜರುಗಿಸಲು ಹಿಂಜರಿಯುತ್ತಿದ್ದಾರೆ. ಕಳೆದ ವಾರ ನಡೆದ ನರ್ಸಿಂಗ್ ಹೋಂ ಮಾಲೀಕರ ಸಭೆಯಲ್ಲಿ, ಆರೋಗ್ಯ ಇಲಾಖೆ ಶಿಫಾರಸಿನಿಂದ ಬರುವ ರೋಗಿಗಳಿಂದ ಹಣ ಪಡೆಯದೇ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದರು. ಆದರೆ ಸೂಚನೆಗೆ ಕಿಮ್ಮತ್ತು ನೀಡದ ಖಾಸಗಿ ಆಸ್ಪತ್ರೆಗಳ ಮಾಲೀಕರು ಹಣಕ್ಕಾಗಿ ಬಾಯಿ ಬಿಡುತ್ತಿದ್ದಾರೆ.

‘ಎಬಿಎಆರ್‌ಕೆ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ ಖಾಸಗಿ ನರ್ಸಿಂಗ್‌ ಹೋಂಗೆ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದೆವು. ಆದರೆ ಅಲ್ಲಿಯ ವೈದ್ಯರು ಹಣ ನೀಡುವವರೆಗೂ ದಾಖಲು ಮಾಡಿಕೊಳ್ಳುವುದಿಲ್ಲ ಎಂದರು. ಡಿಎಚ್‌ಒಗೆ ಕರೆ ಮಾಡಿದಾಗ ಅವರು ಯಾವುದೇ ಸಹಾಯ ಮಾಡಲಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಖಾಸಗಿ ವೈದ್ಯರ ಪರವಾಗಿಯೇ ಇದ್ದಾರೆ’ ಎಂದು ಮಹಿಳೆಯೊಬ್ಬರು ಆರೋಪಿಸಿದರು.

ಆರೋಗ್ಯ ಕರ್ನಾಟಕ ಯೋಜನೆ ಜಾರಿಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸುತ್ತಾರೆ. ಯೋಜನೆ ಜಾರಿಗಾಗಿ ಜಿಲ್ಲಾ ನೋಡೆಲ್‌ ಅಧಿಕಾರಿ, ಸಂಯೋಜಕರು ಇದ್ದರೂ ರೋಗಿಗಳಿಗೆ ಸಹಾಯ ದೊರೆಯದಾಗಿದೆ.

‘ಮಂಚೇಗೌಡರಿಗೆ ಕರೆ ಮಾಡಿದರೆ ನೋಡೆಲ್‌ ಅಧಿಕಾರಿ ಡಾ.ಅಶ್ವಥ್‌ ಅವರಿಗೆ ಕರೆ ಮಾಡಿ ಎನ್ನುತ್ತಾರೆ. ಅಶ್ವಥ್‌ ಅವರಿಗೆ ಕರೆ ಮಾಡಿದರೆ ಡಿಎಚ್‌ಒ ಕಡೆ ಬೆರಳು ತೋರಿಸುತ್ತಾರೆ. ಇವರಿಬ್ಬರ ನಿರ್ಲಕ್ಷ್ಯದಿಂದ ಕೋವಿಡ್ ಯೇತರ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಶಸ್ತ್ರಚಿಕಿತ್ಸೆ ಅವಶ್ಯವಿರುವ ರೋಗಿಗಳಿಗೆ ಅನ್ಯಾಯವಾಗಿ ಪ್ರಾಣ ಬಿಡುತ್ತಿದ್ದಾರೆ’ ಎಂದು ರೋಗಿಯೊಬ್ಬರ ಸಂಬಂಧಿ ಶಿವರಾಜು ತಿಳಿಸಿದರು.

ನರ್ಸಿಂಗ್‌ ಹೋಂ ವಿರುದ್ಧ ಕ್ರಮ ಏಕಿಲ್ಲ?

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ಕೆಪಿಎಂಇ) ಅನ್ವಯ ಸರ್ಕಾರಿ ಆದೇಶ ಉಲ್ಲಂಘಿಸುವ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್‌ ರದ್ದುಗೊಳಿಸುವ ಅಧಿಕಾರ ಜಿಲ್ಲಾ ಆರೋಗ್ಯಾಧಿಕಾರಿಗೆ ಇದೆ. ಆದರೆ ಅಧಿಕಾರ ಚಲಾಯಿಸುವಲ್ಲಿ ಡಿಎಚ್‌ಒ ವಿಫಲರಾಗಿದ್ದಾರೆ. ಒಂದು ನೋಟಿಸ್‌ ಕೊಡಲೂ ಅವರಿಂದ ಸಾಧ್ಯವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

‘ಖಾಸಗಿ ನಸಿಂಗ್‌ ಹೋಂಗಳು ರೋಗಿಗಳನ್ನು ದಾಖಲು ಮಾಡಿಕೊಳ್ಳದಿದ್ದರೆ ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಡಿಎಚ್‌ಒ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಪೊಲೀಸ್‌ ಠಾಣೆಗೆ ದೂರು ಕೊಡಿ

‘ಆರೋಗ್ಯ ಕರ್ನಾಟಕ ಯೋಜನೆ ಅಡಿ ರೋಗಿಗಳನ್ನು ದಾಖಲು ಮಾಡಿಕೊಳ್ಳದ ಖಾಸಗಿ ಆಸ್ಪತ್ರೆ ವಿರುದ್ಧ ರೋಗಿಗಳು ನೇರವಾಗಿ ಪೊಲೀಸ್‌ ಠಾಣೆಗೆ ದೂರು ಕೊಡಬಹುದು’ ಎಂದು ವೈದ್ಯರೊಬ್ಬರು ತಿಳಿಸಿದರು.

‘ಪೊಲೀಸರು ಮುಂದೆ ನಿಂತು ರೋಗಿಗಳನ್ನು ದಾಖಲು ಮಾಡಿಸಬಹುದು. ಆಗಲೂ ದಾಖಲು ಮಾಡಿಕೊಳ್ಳದಿದ್ದರೂ ಆಸ್ಪತ್ರೆ ಮಾಲೀಕರನ್ನು ಬಂಧಿಸಬಹುದು, ಆ ಅಧಿಕಾರ ಕೆಪಿಎಂಇ ಕಾಯ್ದೆಯಲ್ಲೇ ಇದೆ. ರೋಗಿಗಳ ಸಂಬಂಧಿಗಳೂ ಸಮೀಪದ ಠಾಣೆಗೆ ತೆರಳಿ ದೂರು ನೀಡಬೇಕು’ ಎಂದು ತಿಳಿಸಿದರು.

ರೋಗಿಗಳನ್ನು ದಾಖಲು ಮಾಡಿಕೊಳ್ಳದ ಖಾಸಗಿ ಆಸ್ಪತ್ರೆಗಳ ವಿವಿರ ನೀಡಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು.

-ಡಾ.ಅಶ್ವಥ್‌, ಎಬಿಎಆರ್‌ಕೆ, ಜಿಲ್ಲಾ ನೋಡೆಲ್‌ ಅಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.