ಮದ್ದೂರು: ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ, ಕಾಯಕಲ್ಪದ ಕೊರತೆಯಿಂದ ಮದ್ದೂರು ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಸೊರಗುತ್ತಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಕ್ರೀಡಾಂಗಣವು ವಿಶಾಲವಾಗಿದ್ದು, ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ತಾಲ್ಲೂಕು ಆಡಳಿತದ ಕಾರ್ಯಕ್ರಮ
ಗಳು ಇದೇ ಕ್ರೀಡಾಂಗಣದಲ್ಲಿ ನಡೆಯುತ್ತವೆ. ಆ ಸಂದರ್ಭದಲ್ಲಿ ಸಾವಿರಾರು ಮಂದಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ. ಪ್ರತಿ ದಿನ ಯುವಕರು, ವಿದ್ಯಾರ್ಥಿಗಳು ಇಲ್ಲಿ ಆಟವಾಡುತ್ತಾರೆ. ಮುಂಜಾನೆ ಹಾಗೂ ಸಂಜೆ ವೇಳೆ ಹಲವಾರು ಮಂದಿ ಇದೇ ಕ್ರೀಡಾಂಗಣದಲ್ಲಿ ವಾಯುವಿಹಾರ ನಡೆಸುತ್ತಾರೆ.
ಆದರೆ, ಒಳಾಂಗಣ ಕ್ರೀಡಾಂಗಣದ ಚಾವಣಿ ಶಿಥಿಲಗೊಂಡಿದ್ದು, ಮಳೆ ಬಂದರೆ ಸೋರುತ್ತದೆ. ಇದರಿಂದ 2 ವುಡನ್ ಬ್ಯಾಡ್ಮಿಂಟನ್ ಕೋರ್ಟ್‌ಗಳಿಗೆ ಧಕ್ಕೆ ಉಂಟಾಗಲಿದೆ. ಸುಮಾರು 7-8 ವರ್ಷಗಳ ಹಿಂದೆ ನಿರ್ಮಿಸಿರುವ ಈ ವುಡನ್ ಕೋರ್ಟ್‌ಗಳಲ್ಲಿ ಪ್ರತಿದಿನ ಮುಂಜಾನೆ ಹಾಗೂ ಸಂಜೆ ಸುಮಾರು 15- 20 ಆಟಗಾರರು ಅಭ್ಯಾಸ ನಡೆಸುತ್ತಾರೆ.
ಮಳೆ ಬಂದಾಗ ಆಟಗಾರರು ತೊಂದರೆ ಅನುಭವಿಸುತ್ತಿದ್ದು, ನೀರು ಬೀಳುವ ಕಡೆ ಬಕೆಟ್ ಇಟ್ಟು ಆಟವಾಡುವ ಸ್ಥಿತಿ ಇದೆ. ಕೋರ್ಟ್‌ನ ಅಂಚಿನ ವ್ಯಾಸದಲ್ಲಿರುವ ಪ್ಲೈವುಡ್ ನೀರು ಬಿದ್ದರೆ ಹಾಳಾಗುವ ಸಾಧ್ಯತೆ ಇದೆ ಎಂದು ಕ್ರೀಡಾಂಗಣದ ನಿರ್ವಾಹಕ ತಿಳಿಸಿದ್ದಾರೆ.
ಇಲಾಖೆಯಿಂದ ಬರುವ ಅನುದಾನ ಎಲೆಕ್ಟ್ರಿಕ್ ಕೆಲಸಗಳು, ನೀರಿನ ಕೊಳವೆಗಳ ದುರಸ್ತಿ, ಹೊರ ಕ್ರೀಡಾಂಗಣದ ನಿರ್ವಹಣೆ ಹಾಗೂ ಚಿಕ್ಕ-ಪುಟ್ಟ ಕೆಲಸಗಳಿಗೆ ಮುಗಿದು ಹೋಗುತ್ತದೆ ಎನ್ನಲಾಗಿದೆ.
ಕ್ರೀಡಾಂಗಣದ ಒಂದು ಮೂಲೆಯಲ್ಲಿ ಶೌಚಾಲಯವಿದ್ದು, ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದ್ದು, ಅಲ್ಲಿ ನೀರಿನ ವ್ಯವಸ್ಥೆ ಇಲ್ಲ. ಹೊರ ಕ್ರೀಡಾಂಗಣದಲ್ಲಿ ಅಲ್ಲಲ್ಲಿ ಕಸ ಬಿದ್ದಿದೆ. ಮಳೆ ಬಂದರೆ ಎಷ್ಟೋ ಕಡೆ ನೀರು ನಿಲ್ಲುವ ಸಮಸ್ಯೆ ಸಾಮಾನ್ಯವಾಗಿದೆ. ರಾತ್ರಿ 8 ಗಂಟೆಯ ಬಳಿಕ ಕ್ರೀಡಾಂಗಣವು ಅನೈತಿಕ ಚಟುವಟಿಕೆಯ ತಾಣವಾಗುತ್ತಿದ್ದು, ಕೆಲವರು ಕ್ರೀಡಾಂಗಣದಲ್ಲೇ ಮದ್ಯಪಾನ ಮಾಡುವುದು, ಗದ್ದಲ ಮಾಡುವುದರಿಂದ ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.
ಅಧಿಕಾರಿಗಳು, ಜನ ಪ್ರತಿನಿಧಿ ಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕ್ರೀಡಾಂಗಣವನ್ನು ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಗಮನ ಹರಿಸಿ ತಾಲ್ಲೂಕು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
‘ಅನುದಾನ ಬಂದರೆ ಅಭಿವೃದ್ಧಿ’
ಇತ್ತೀಚೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದು ವಿಳಂಬವಾಗುತ್ತಿದೆ. ಇದನ್ನು ಸರ್ಕಾರದ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ಸರ್ಕಾರದಿಂದ ಬಂದರೆ ಜಿಲ್ಲೆಯ ತಾಲ್ಲೂಕು ಕ್ರೀಡಾಂಗಣಗಳ ಅಭಿವೃದ್ಧಿಗೆ ಗಮನ ನೀಡಲಾಗುವುದು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ತಿಳಿಸಿದರು.
‘ಕ್ರೀಡಾಂಗಣದ ಅಭಿವೃದ್ಧಿಯಾಗಲಿ’
ಮದ್ದೂರು ಪಟ್ಟಣದಲ್ಲಿರುವ ಕ್ರೀಡಾಂಗಣವು ಅವ್ಯವ್ಯವಸ್ಥೆಗಳಿಂದ ಕೂಡಿದೆ. ಪ್ರತಿದಿನ ನೂರಾರು ಮಂದಿ ಕ್ರೀಡಾಂಗಣವನ್ನು ಅವಲಂಬಿಸಿದ್ದಾರೆ. ಮುಂಜಾನೆ, ಸಂಜೆ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರು ವಾಯುವಿಹಾರಕ್ಕೆ ಬರುತ್ತಾರೆ. ಈ ಕಾರಣದಿಂದ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರೀಡಾಂಗಣದ ಅಭಿವೃದ್ಧಿಗೆ ಮುಂದಾಗಬೇಕು ಎನ್ನುತ್ತಾರೆ ಸ್ಥಲೀಯ ನಿವಾಸಿ ಸಿ.ವೆಂಕಟೇಶ್ ಪೂಜಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.