ಮದ್ದೂರು: ಪರಿಶಿಷ್ಟ ಜಾತಿ, ಪಂಗಡದವರಿಗಾಗಿ ಇರುವ ಸ್ಮಶಾನದ ಅವ್ಯವಸ್ಥೆಯನ್ನು ಖಂಡಿಸಿ ದಲಿತ ಮುಖಂಡರು ಹಾಗೂ ಮೃತ ವ್ಯಕ್ತಿಯ ಕುಟುಂಬದವರು ತಾಲ್ಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ, ಶವ ಸುಡಲು ತಂದಿದ್ದ ಸೌದೆ ಸುರಿದು ಪ್ರತಿಭಟನೆ ನಡೆಸಿದರು.
ಗ್ರಾಮದ ದಲಿತ ಮುಖಂಡ ಪಾಪಯ್ಯ ಅವರು ಮಂಗಳವಾರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಅಂತ್ಯ ಸಂಸ್ಕಾರ ನೆರವೇರಿಸಲು ಸ್ಮಶಾನದಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದೆ ಹಳ್ಳ ಬಿದ್ದ ಹಿನ್ನಲೆಯಲ್ಲಿ ಅಲ್ಲಿ ಶವ ಸಂಸ್ಕಾರ ಮಾಡಲು ಸಾಧ್ಯವಾಗದ ಸ್ಥಿತಿಯನ್ನರಿತ ಸಂಬಂಧಿಕರು ಈ ಬಗ್ಗೆ ದಲಿತ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿ ಆಗಿರುವ ಅವ್ಯವಸ್ಥೆಯ ಬಗ್ಗೆ ವಿವರಿಸಿದಾಗ ಗ್ರಾ.ಪಂ. ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಮುಂದಾದರು.
ಬುಧವಾರ ಬೆಳಿಗ್ಗೆ ಗ್ರಾ.ಪಂ. ಕಚೇರಿ ಅಂತ್ಯ ಸಂಸ್ಕಾರ ನಡೆಸಲು ಕಟ್ಟಿಗೆಗಳನ್ನು ಮುಂದೆ ತಂದು ಹಾಕಿ, ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ, ಪಾಪಯ್ಯ ಅವರ ಶವವನ್ನು ಅಂತ್ಯ ಸಂಸ್ಕಾರ ಮಾಡುವುದಿಲ್ಲವೆಂದು ಪಟ್ಟು ಹಿಡಿದರು. ಆ ಸ್ಥಳಕ್ಕೆ ಬಂದ ತಾ.ಪಂ. ಇಓ ಮುನಿರಾಜು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ ಅವರನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಹಾಗೂ ತಾಲೂಕು ಆಡಳಿತ, ಸ್ಥಳೀಯ ಗ್ರಾ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಐದಾರು ವರ್ಷಗಳಿಂದಲೂ ಸ್ಮಶಾನ ಅಭಿವೃದ್ಧಿಗೊಳಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದು ಇದರಿಂದಾಗಿ ಗ್ರಾಮದಲ್ಲಿ ತೀರಿ ಹೋದವರ ಶವವನ್ನು ಸುಡಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಸ್ಮಶಾನದ ಅಭಿವೃದ್ಧಿಗೆ ಮುಂದಾಗಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿಗೊಳಿಸುವ ಸಂಬಂಧ ಈಗಾಗಲೇ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಿಯಾ ಯೋಜನೆ ತಯಾರಿಸಿದ್ದು ಒಂದು ತಿಂಗಳೊಳಗಾಗಿ ಸ್ಮಶಾನ ಅಭಿವೃದ್ಧಿಗೊಳಿಸುವುದಾಗಿ ತಾ.ಪಂ. ಇಓ ಮುನಿರಾಜು ನೀಡಿದ ಭರವಸೆ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆ ವೇಳೆ ದಲಿತ ಮುಖಂಡರಾದ ಮರಳಿಗ ಶಿವರಾಜು, ಆನಂದ, ಶೇಖರ್, ಪ್ರಕಾಶ್, ಭಾಸ್ಕರ್, ನಿಂಗಯ್ಯ, ಸತೀಶ್, ಶ್ರೀನಿವಾಸ್ ಇತರರು ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.