ADVERTISEMENT

ಮಂಡ್ಯ: ಕಂಪ್ಯೂಟರ್‌ ಆಪರೇಟರ್‌ಗಳಿಗೆ ವೇತನ ನೀಡಲು ಮನವಿ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ: ಕುಟುಂಬ ನಿರ್ವಹಣೆಗೆ ತೊಡಕು–ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 5:25 IST
Last Updated 21 ಜೂನ್ 2024, 5:25 IST
ಅಟಲ್‌ ಜೀ ಜನಸ್ನೇಹಿ ಕೇಂದ್ರ ನಾಡ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಪ್ಯೂಟರ್‌ ಆಪರೇಟರ್‌ಗಳಿಗೆ ವೇತನ ನೀಡಬೇಕೆಂದು ಆಗ್ರಹಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು
ಅಟಲ್‌ ಜೀ ಜನಸ್ನೇಹಿ ಕೇಂದ್ರ ನಾಡ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಪ್ಯೂಟರ್‌ ಆಪರೇಟರ್‌ಗಳಿಗೆ ವೇತನ ನೀಡಬೇಕೆಂದು ಆಗ್ರಹಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು   

ಮಂಡ್ಯ: ಅಟಲ್‌ ಜೀ ಜನಸ್ನೇಹಿ ಕೇಂದ್ರ ನಾಡ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಪ್ಯೂಟರ್‌ ಆಪರೇಟರ್‌ಗಳಿಗೆ ವೇತನ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಆಪರೇಟರ್‌ಗಳು ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಘೋಷಣೆ ಕೂಗಿದರು.

ಕಳೆದ 2023 ಜನವರಿ 1ರಿಂದ 2024 ಮೇ 31ರವರೆಗೂ ವೇತನ ನೀಡಿಲ್ಲ. ಈ ವಿಷಯವಾಗಿ ಜಿಲ್ಲಾಡಳಿತ ಗಮನಕ್ಕೆ ಹಲವು ಬಾರಿ ತಂದರು ಸಹ ನಮಗೆ ವೇತನ ನೀಡಿಲ್ಲ. ಇದಲ್ಲದೆ, ಅಟಲ್‌ ಜೀ ಜನಸ್ನೇಹಿ ನಿರ್ದೇಶನಾಲಯದಿಂದ ಅನುದಾನ ಬಿಡುಗಡೆ ಆಗಿಲ್ಲವೆಂದು ಇಷ್ಟು ದಿನ ಹೇಳುತ್ತಿದ್ದು, ಈಗ ಅನುದಾನ ಬಿಡುಗಡೆ ಮಾಡಿದ್ದು ನಮ್ಮ ಪಾಲಿನ ಸಂಬಳವನ್ನು ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸ್ವಿಸ್‌ ಕಂಪನಿಯವರಿಗೆ ಹಣ ಸಂದಾಯವಾಗಿರುವುದಿಲ್ಲ ಎಂಬುವ ಸಬೂಬನ್ನು ಹೇಳಿ, ಜಿಲ್ಲಾಧಿಕಾರಿ ಅವರು ಅನುಮೋದನೆ ನೀಡಿರುವುದಿಲ್ಲವೆಂದು ಹೇಳುತ್ತಾರೆ. ಆದರೆ ಇಲ್ಲಿ ಜಿಲ್ಲಾಡಳಿತ ಮತ್ತು ಕಂಪನಿಯವರು ಮಧ್ಯೆ ಕೆಲಸ ನಿರ್ವಹಿಸುತ್ತಿರುವ ಆಪರೇಟರ್‌ಗಳು ಏನು ಮಾಡಬೇಕು ಎಂದು ಕಿಡಿಕಾರಿದರು.

ನಮ್ಮ ಅಹವಾಲನ್ನು ಯಾರೂ ಸಹ ಸ್ವೀಕರಿಸುತ್ತಿಲ್ಲ. ಮೇಲಾಧಿಕಾರಿಗಳ ಬಳಿ ಸಮಸ್ಯೆ ಹೇಳಿಕೊಳ್ಳಲು ಹೋದರೆ ಕೋಪಗೊಳ್ಳುತ್ತಾರೆ. ಅವರ ಕಟುಂಬದಂತೆಯೇ ನಮ್ಮ ಕುಟುಂಬವೂ ಇರುತ್ತದೆ ಎನ್ನುವುದು ಇವರಿಗೆ ಅರಿವಿಲ್ಲವೇ? ಇವರು ಸಂಬಳ ಇಲ್ಲದೆಯೇ ಕೆಲಸ ಮಾಡಿ, ಕುಟುಂಬ ನಿರ್ವಹಣೆ ಮಾಡುತ್ತಾರೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಚ್‌.ಎನ್‌. ಶೋಭಾಮಣಿ, ಗಣೇಶ್‌, ಮಹೇಶ್‌, ರೂಪಾ, ಜಗದೀಶ, ವಿದ್ಯಾಶ್ರೀ, ಚಾಂದಿನಿ, ರೂಪಶ್ರೀ, ಸುನೀಲ್‌, ರಮ್ಯಾ, ಎಚ್‌.ಜಿ.ರಾಣಿ, ಆಶಾರಾಣಿ, ಹರೀಶ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.