ಹಲಗೂರು: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಕಡಿಮೆ ಕೂಲಿ ಪಾವತಿ ಮಾಡಲಾಗಿದೆ ಎಂದು ಆರೋಪಿಸಿ ಹುಸ್ಕೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಸೋಮವಾರ ಕೂಲಿಕಾರರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಜನಸಾಮಾನ್ಯರ ಬಡತನ ನಿವಾರಣೆಗಾಗಿ ಜಾರಿಗೆ ಬಂದ ಉದ್ಯೋಗ ಖಾತ್ರಿ ಯೋಜನೆಯನ್ನು ಅಧಿಕಾರಿಗಳು ಉಳ್ಳವರು ಮತ್ತು ಶ್ರೀಮಂತರ ಸ್ವತ್ತಾಗಿ ಪರಿವರ್ತನೆ ಮಾಡುತ್ತಾ ಬಂದಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಗುತ್ತಿಗೆದಾರರಿಗೆ ಹೆಚ್ಚು ಅವಕಾಶ ನೀಡಿ ಸ್ಥಳೀಯ ಕೂಲಿಕಾರರನ್ನು ಕಡೆಗಣಿಸಲಾಗುತ್ತಿದೆ ಆರೋಪಿಸಿದರು.
ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಜೊತೆಗೂಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಕಡಿಮೆ ಕೂಲಿ ಪಾವತಿಸಿ ವಂಚಿಸಲಾಗಿದೆ. ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ದಿನಕ್ಕೆ ₹150 ಕೂಲಿ ಹಣ ಪಾವತಿಸಿರುವುದು ಖಂಡನೀಯ. ಕೂಡಲೇ ಎಲ್ಲಾ ಕೂಲಿಕಾರರಿಗೂ ದಿನಕ್ಕೆ ₹349 ಕೂಲಿ ಪಾವತಿಸಬೇಕೆಂದು ಆಗ್ರಹಿಸಿದರು.
ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಸರೋಜಮ್ಮ ಮಾತನಾಡಿ, ಕಾಯ್ದೆಯಡಿ ಪ್ರತಿ ಕುಟುಂಬಕ್ಕೆ ನೂರು ದಿನಗಳ ಕೆಲಸ ನೀಡಬೇಕೆಂದು ನಿಯಮ ಇದ್ದರೂ, ಹುಸ್ಕೂರು ಗ್ರಾಮ ಪಂಚಾಯಿತಿಯಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ, ಕೆಲಸ ನೀಡದೇ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹಲವು ವರ್ಷಗಳಿಂದ ಕೂಲಿಕಾರರಿಗೆ ಸ್ಪಂದಿಸದೇ, ಗುತ್ತಿಗೆದಾರರ ಪರವಾಗಿ ಕೆಲಸ ಮಾಡುತ್ತಿರುವ ಪಿಡಿಒ ರವಿಕುಮಾರ್ ಮತ್ತು ನರೇಗಾ ಎಂಜಿನಿಯರ್ ನಿತಿನ್ ಅವರನ್ನು ಕೂಡಲೇ ಬೇರೆ ಕಡೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಹುಸ್ಕೂರು ವಲಯ ಸಮಿತಿ ಅಧ್ಯಕ್ಷ ಮಹದೇವು, ಕೂಲಿಕಾರರ ಸಂಘದ ಮುಖಂಡರಾದ ಶುಭವತಿ, ಮಣಿಯಮ್ಮ, ಸಾಹುಕಯ್ಯ, ಯಾಲಕ್ಕಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.